ಲಕ್ಷ್ಮೇಶ್ವರ: ಒಂದು ವಾರದಿಂದ ತಾಲ್ಲೂಕಿನಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಗಿದ್ದು ಉಷ್ಣಾಂಶ 38 ಡಿಗ್ರಿಗೆ ತಲುಪಿದೆ. ಇದರಿಂದಾಗಿ ಬಿಸಿಲಿನ ತಾಪಕ್ಕೆ ಜನತೆ ತತ್ತರಿಸುತ್ತಿದ್ದಾರೆ. ಅದರಲ್ಲೂ ಮೂರು–ನಾಲ್ಕು ದಿನಗಳಿಂದ ಉಷ್ಣಾಂಶದ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ಬೆಳಿಗ್ಗೆ 10ಕ್ಕೆ ಆರಂಭವಾಗುವ ಬಿಸಿಲು ಮಧ್ಯಾಹ್ನ 3.30ರವರೆಗೂ ತನ್ನ ಪ್ರಭಾವವನ್ನು ಬೀರುತ್ತಿದೆ.
ವಯಸ್ಸಾದವರು, ಮಕ್ಕಳು ಬಿಸಿಲಿನಿಂದ ಉಂಟಾಗುವ ಜಳಕ್ಕೆ ಬೆವರುತ್ತಿದ್ದಾರೆ. ಅದರಲ್ಲೂ ಉಬ್ಬಸ ರೋಗಿಗಳು ಉಸಿರಾಟ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಜಳ ಕಡಿಮೆಯಾಗಿ ಕೊಂಚ ನೆಮ್ಮದಿ ನೀಡಿದರೂ, ಸೆಖೆಯಿಂದ ಪಾರಾಗುತ್ತಿಲ್ಲ.
ಬಿಸಿಲಿನ ಜತೆಗೆ ಬೀಸುವ ಗಾಳಿಯೂ ಬಿಸಿಯಾಗಿದೆ. ಗಾಳಿಯಲ್ಲಿನ ತೇವಾಂಶದ ಪ್ರಮಾಣ ಕ್ಷೀಣಿಸುತ್ತಿದ್ದು, ಮಧ್ಯಾಹ್ನ 12ರ ನಂತರ ಹೊರಗೆ ಬಾರದ ಸ್ಥಿತಿ ಇದೆ. ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಸಾರ್ವಜನಿಕರು ಛತ್ರಿಗಳ ಮೊರೆ ಹೋಗಿದ್ದಾರೆ. ಮಹಿಳೆಯರು ಮುಖ, ಕೈ ತೋಳು ತುಂಬ ಬಟ್ಟೆ, ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಎಲ್ಲರೂ ಟೋಪಿ ಹಾಕಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ.
ಮಧ್ಯಾಹ್ನ ಆಗುತ್ತಿದ್ದಂತೆ ಮರಗಳ ನೆರಳು, ತೋಟ, ಹಳೆಯ ದೇವಸ್ಥಾನಗಳ ಆವರಣಗಳಲ್ಲಿ ಜನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಬಿಸಿಲಿನ ತಾಪಕ್ಕೆ ತಂಪಾದ ಪಾನೀಯ ಮತ್ತು ಕಲ್ಲಂಗಡಿ, ಕರಬೂಜ ಹಣ್ಣಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ.
ಬಿಸಿಲ ಧಗೆಯಿಂದ ಪಾರಾಗಲು ಜನರು ಎಳನೀರು, ಲಿಂಬೆಹಣ್ಣಿನ ಪಾನಕ ಮೊರೆ ಹೋಗುತ್ತಿದ್ದಾರೆ. ಐಸ್‍ಕ್ರೀಂನ ಮಾರಾಟದಲ್ಲೂ ಹೆಚ್ಚಳ ಕಂಡು ಬರುತ್ತಿದೆ.
ಪಟ್ಟಣದಲ್ಲಿ ಬಿಸಿಲಿನ ಝಳ ಹೆಚ್ಚಿದಂತೆ ಕಲ್ಲಂಗಡಿ ಹಣ್ಣುಗಳ ಮಾರಾಟವೂ ಜೋರಾಗುತ್ತಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಲೆ ಕೂಡ ಗಗನಕ್ಕೇರುತ್ತಿದೆ. ಬೀದಿಬದಿ ವ್ಯಾಪಾರಿಗಳು ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ₹10ರಿಂದ ₹20 ಮಾರಾಟ ಮಾಡುತ್ತಿದ್ದಾರೆ. ಇನ್ನು ವಿಧಾನಸಭಾ ಚುನಾವಣಾ ಸಂಬಂಧಿತ ಕಾರ್ಯಕ್ರಮ, ಸಭೆ, ಸಮಾರಂಭಗಳು ಹೆಚ್ಚುತ್ತಿವೆ. ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆಗಳಿಗೆ ಕತ್ತರಿಸಿದ ಕಲ್ಲಂಗಡಿ ಹಣ್ಣುಗಳ ತುಂಡುಗಳಿಗೆ ಬೇಡಿಕೆಯೂ ಕೂಡ ಹೆಚ್ಚಾಗಿದೆ.
‘ಬಿಸಿಲು ಹೆಚ್ಚುತ್ತಿರುವುದರಿಂದ ಶೇ 25ರಿಂದ 30ರಷ್ಟು ಬೇಡಿಕೆ ಹೆಚ್ಚಾಗಿದೆ. ದಿನಕ್ಕೆ 80-100 ಹಣ್ಣುಗಳನ್ನು ಕತ್ತರಿಸಿ ಚಿಲ್ಲರೆಯಾಗಿ ಮಾರಾಟ ಮಾಡುತ್ತೇವೆ. ಕತ್ತರಿಸಿದ ಕಲ್ಲಂಗಡಿ ಹಣ್ಣು ಮಾರಾಟ ಮಾಡುವುದು ಹೆಚ್ಚು ಲಾಭದಾಯಕ‘ ಎಂದು ಮಹಮ್ಮದ್ ರಸ್ತೆಬದಿ ಕಲ್ಲಂಗಡಿ ಮಾರಾಟಗಾರರು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.