ADVERTISEMENT

ಗದಗ: ಬೆಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

ಮಳೆ ನೀರಿನಲ್ಲಿ ಕೊಳೆತ ಈರುಳ್ಳಿ, ಮೆಣಸಿನಕಾಯಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 16:13 IST
Last Updated 20 ಅಕ್ಟೋಬರ್ 2024, 16:13 IST
ಗದಗ ಸಮಿಪದ ತಿಮ್ಮಾಪುರ ಹಾಗೂ ಹರ್ಲಾಪುರ ಗ್ರಾಮಗಳಲ್ಲಿ ಈಚೆಗೆ ಸುರಿದ ಮಳೆಗೆ ಹಾನಿಯಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ಜಿಲ್ಲಾ ತೋಟಗಾರಿಕಾ ಅಧಿಕಾರಿಗಳು ಪರಿಶೀಲಿಸಿದರು
ಗದಗ ಸಮಿಪದ ತಿಮ್ಮಾಪುರ ಹಾಗೂ ಹರ್ಲಾಪುರ ಗ್ರಾಮಗಳಲ್ಲಿ ಈಚೆಗೆ ಸುರಿದ ಮಳೆಗೆ ಹಾನಿಯಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ಜಿಲ್ಲಾ ತೋಟಗಾರಿಕಾ ಅಧಿಕಾರಿಗಳು ಪರಿಶೀಲಿಸಿದರು   

ಗದಗ: ಸಮಿಪದ ತಿಮ್ಮಾಪುರ ಹಾಗೂ ಹರ್ಲಾಪುರ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿ, ಮಳೆ ನೀರಿನಲ್ಲಿ ಕೊಳೆತು ಹೋಗಿರುವ ಕುರಿತು ರೈತರು ಮಾಹಿತಿ ಹಂಚಿಕೊಂಡ ಕಾರಣ, ಗದಗ ಜಿಲ್ಲಾ ತೋಟಗಾರಿಕಾ ಅಧಿಕಾರಿಗಳು ಎರಡು ಗ್ರಾಮದ ಹೊಲಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಬೆಳೆದ ಈರುಳ್ಳಿ, ಮೆಣಸಿನಕಾಯಿ ಬೆಳೆಯ ನಷ್ಟವನ್ನು ಪರಿಶೀಲಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಶಂಭುಲಿಂಗಪ್ಪ ನೆಗಳೂರು ಮಾತನಾಡಿ, ಪ್ರಸ್ತುತ ಗದಗ ತಾಲ್ಲೂಕಿನಲ್ಲಿ 12,470 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಅದರಲ್ಲಿ ತಿಮ್ಮಾಪುರ ಗ್ರಾಮದಲ್ಲಿ ಈರುಳ್ಳಿ 6 ಹೆಕ್ಟೇರ್‌ ಮತ್ತು ಮೆಣಸಿನಕಾಯಿ 14 ಹೆಕ್ಟೇರ್‌ ಬಿತ್ತನೆಯಾಗಿದೆ. ಹರ್ಲಾಪುರ ಗ್ರಾಮದಲ್ಲಿ ಈರುಳ್ಳಿ 300 ಹೆಕ್ಟೇರ್‌ ಮತ್ತು 1000 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಈಗ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಈರುಳ್ಳಿ, ಮೆಣಸಿನಕಾಯಿ ಬೆಳೆಯು ನಷ್ಟವಾಗಿದೆ. ಈ ಕುರಿತು ವರದಿಯನ್ನು ಕಂದಾಯ ಇಲಾಖೆಗೆ ಮತ್ತು ಜಿಲ್ಲಾಧಿಕಾರಿ ಕಚೇರಿಗಳಿಗೆ ಕಳುಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಸರ್ಕಾರಕ್ಕೆ ಬೇಗನೆ ಬೆಳೆ ನಷ್ಟ ವರದಿಯನ್ನು ಸಲ್ಲಿಸಿ ಸರಿಯಾದ ಸಮಯಕ್ಕೆ ರೈತರಿಗೆ ನಷ್ಟ ಪರಿಹಾರ ನೀಡಬೇಕು. ಗದಗ ತಾಲ್ಲೂಕು ಪ್ರದೇಶವನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಿ ಎಲ್ಲಾ ರೈತರಿಗೂ ನೆರವಾಗಬೇಕು ಎಂದರು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಹಣವನ್ನು ಬೇಗನೆ ಬಿಡುಗಡೆ ಮಾಡಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿಸಬೇಕೆಂದು ಆಗ್ರಹಿಸಿದರು.

ADVERTISEMENT

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಸಂತೋಷ ಜಾಧವ್, ರೈತರಾದ ಹನುಮಪ್ಪ ಭೀಮನೂರ, ಶಿವನಪ್ಪ ಯತ್ನಟ್ಟಿ ಶರಣಪ್ಪ ಗಾಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.