ಗದಗ: ‘ಜೆ.ಎಚ್. ಪಟೇಲರು ಯಾರನ್ನೂ ರಾಜಕೀಯವಾಗಿ ದ್ವೇಷಿಸುವುದಾಗಲೀ, ತಿರಸ್ಕರಿಸುವುದಾಗಲೀ ಅಥವಾ ಕೀಳರಿಮೆಯಿಂದ ನೋಡುವುದಾಗಿ ಮಾಡಲಿಲ್ಲ. ಅಂತಹ ಮೌಲ್ಯಾಧಾರಿತ ರಾಜಕಾರಣ ಇಂದು ಅಗತ್ಯವಿದೆ’ ಎಂದು ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಜೆ.ಎಚ್. ಪಟೇಲ್ ಪ್ರತಿಷ್ಠಾನ ಹಾಗೂ ಜೆ.ಎಚ್. ಪಟೇಲ್ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಇಲ್ಲಿ ನಡೆದ ಪಟೇಲರ 19ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘10 ಚನಾವಣೆಗಳನ್ನು ಎದುರಿಸಿದ್ದೇನೆ, ಹಲವು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ದೇವೇಗೌಡ, ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್. ಪಟೇಲರ ಸಂಪುಟದಲ್ಲಿ ಸಚಿವೆಯಾಗಿದ್ದೆ. ಗೌರವಾನ್ವಿತ ಮಹಿಳೆಯರನ್ನು ಪಟೇಲರು ಅಷ್ಟೇ ಗೌರವದಿಂದ ಕಾಣುತ್ತಿದ್ದರು. ಅವರು ಇನ್ನಷ್ಟು ಕಾಲ ಬದುಕಿದ್ದಿದ್ದರೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಅವರು ಹೇಳಿದರು.
‘ರಾಜಕೀಯ ವಿರೋಧಿಗಳು ರಾಜಕೀಯ ಶತ್ರುಗಳಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ವೈಯಕ್ತಿಕ ಸಂಬಂಧ ಇಟ್ಟುಕೊಂಡು, ಮಾದರಿ ರಾಜಕಾರಣ ಮಾಡುವವರಿಗೆ ಜೆ.ಎಚ್. ಪಟೇಲ್ ಅವರು ಆದರ್ಶ’ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
‘ಜೆ.ಎಚ್. ಪಟೇಲ್ ಅವರದು ವಿಭಿನ್ನ ರಾಜಕೀಯ ವ್ಯಕ್ತಿತ್ವ. ಅವರದು ಬದ್ಧತೆಯ ರಾಜಕಾರಣವಾಗಿತ್ತು. ಆದರೆ, ಇಂದು ದುಡ್ಡು, ಜಾತಿ, ಪಕ್ಷಾಂತರ, ಬದ್ದತೆಯಿಲ್ಲದವರಿಗೆ ಜನಮನ್ನಣೆ ಸಿಗುತ್ತಿದೆ. ಅಂದು ಅಧಿಕಾರ ವಿಕೇಂದ್ರೀಕರಣವಾಗಿತ್ತು. ಇಂದು ಕೇಂದ್ರೀಕೃತಗೊಂಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪಕ್ಷಾತೀತ ಹೋರಾಟಕ್ಕೆ ಮುಂದಾದರೆ ಅದಕ್ಕೆ ಕೈ ಜೋಡಿಸುತ್ತೇನೆ’ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಮಾಜಿ ಸಚಿವ ಎಸ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ‘ಜೆ.ಎಚ್. ಪಟೇಲ್ ಅವರು ರಾಜಕೀಯ ಮತ್ತು ಅಭಿವೃದ್ಧಿಯನ್ನು ಪ್ರತ್ಯೇಕಿಸಿ ನೋಡುತ್ತಿದ್ದ ಅಪರೂಪದ ರಾಜಕಾರಣಿ. ಇಂದು ಒಂದು ಜಿಲ್ಲೆ ಒಡೆಯಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಅಂದು ಅವರು 7 ಜಿಲ್ಲೆಗಳನ್ನು ಮಾಡಿದ್ದು ಅವರ ದೃಢ ನಿರ್ಧಾರಕ್ಕೆ ಹಿಡಿದ ಸಾಕ್ಷಿ’ ಎಂದರು.
ಭೈರನಹಟ್ಟಿಯ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್, ಪಾಣಿ ಪಟೇಲ್, ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಜಿ.ಎಸ್. ಪಾಟೀಲ, ಶ್ರೀಶೈಲಪ್ಪ ಬಿದರೂರ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಇದ್ದರು. ಕೆ.ಎನ್. ರೆಡ್ಡಿ ಅವರು ಬರೆದ ‘ಅಪ್ರತಿಮ ಪಟೇಲ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.