ADVERTISEMENT

ಶಿಂಗಟಾಲೂರ ವೀರಭದ್ರೇಶ್ವರ ಜಾತ್ರೆ ಇಂದಿನಿಂದ

ಕಾಶಿನಾಥ ಬಿಳಿಮಗ್ಗದ
Published 6 ಏಪ್ರಿಲ್ 2022, 4:17 IST
Last Updated 6 ಏಪ್ರಿಲ್ 2022, 4:17 IST
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಈರಣ್ಣನ ಗುಡ್ಡದಲ್ಲಿರುವ ನೂತನ ವೀರಭದ್ರೇಶ್ವರ ದೇವಸ್ಥಾನ
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಈರಣ್ಣನ ಗುಡ್ಡದಲ್ಲಿರುವ ನೂತನ ವೀರಭದ್ರೇಶ್ವರ ದೇವಸ್ಥಾನ   

ಮುಂಡರಗಿ: ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಈರಣ್ಣನ ಗುಡ್ಡದ ಮೇಲಿರುವ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಇಂದಿನಿಂದ (ಏ.6) ಆರಂಭಗೊಳ್ಳಲಿದ್ದು ಗದಗ, ಬಳ್ಳಾರಿ, ಕೊಪ್ಪಳ, ಹಾವೇರಿ, ದಾವಣಗೆರೆ ಮೊದಲಾದ ಭಾಗಗಳ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ವೀರಭದ್ರೇಶ್ವರ ಟ್ರಸ್ಟ್‌ ಕಮಿಟಿಯು ಜಾತ್ರೆಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಗದಗ, ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ವಿಶಾಲವಾಗಿ ಹಬ್ಬಿರುವ ಕಪ್ಪತಗುಡ್ಡದ ನಂದಿ ಬೆಟ್ಟದಲ್ಲಿ ವೀರಭದ್ರೇಶ್ವರನು ನೆಲೆಗೊಂಡಿದ್ದಾನೆ. ದೇವಸ್ಥಾನದ ಹಿಂಭಾಗದಲ್ಲಿ ಸದಾ ಹಸಿರಿನಿಂದ ಕಂಗೊಳಿಸುವ ಬೆಟ್ಟ, ಮುಂದೆ ಹರಿಯುವ ತುಂಗಭದ್ರಾ ನದಿ ದೇವಸ್ಥಾನದ ಅಂದವನ್ನು ಹೆಚ್ಚಿಸಿವೆ. ಈ ಕಾರಣದಿಂದಾಗಿ ವೀರಭದ್ರೇಶ್ವರ ದೇವಸ್ಥಾನವು ಜಿಲ್ಲೆಯ ಒಂದು ಪ್ರವಾಸಿ ತಾಣ ಹಾಗೂ ಯಾತ್ರಾಸ್ಥಳವಾಗಿ ಗುರುತಿಸಿಕೊಂಡಿದೆ.

ಪುರಾತನವಾದ ವೀರಭದ್ರೇಶ್ವರ ದೇವಸ್ಥಾನವು ಶಿಥಿಲಗೊಂಡಿತ್ತು. ಶಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಕೆ.ವಿ.ಹಂಚಿನಾಳ ಹಾಗೂ ಇನ್ನಿತರ ಪದಾಧಿಕಾರಿಗಳು ನಾಲ್ಕು ವರ್ಷಗಳ ಹಿಂದೆ ಹಳೆಯ ದೇವಸ್ಥಾನವನ್ನು ಕೆಡವಿ, ಅದೇ ಸ್ಥಳದಲ್ಲಿ ₹2 ಕೋಟಿ ವೆಚ್ಚದಲ್ಲಿ ನೂತನ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ವೀರಭದ್ರೇಶ್ವರನ ದೇವಸ್ಥಾನದ ಪಕ್ಕದಲ್ಲಿ ಭದ್ರಮಹಾಂಕಾಳಿ ಹಾಗೂ ಗವಿಸಿದ್ಧಪ್ಪನ ಗುಡಿಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ.

ADVERTISEMENT

ದೇವಸ್ಥಾನಕ್ಕೆ ತೆರಳಲು ನಾಡಿನ ನಾನಾ ಭಾಗಗಳಿಂದ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೆ ವರ್ಷದ ಉದ್ದಕ್ಕೂ ಉಚಿತ ಪ್ರಸಾದ ದೊರೆಯುತ್ತದೆ. ಭಕ್ತರ ವಸತಿಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ದೇವಸ್ಥಾನವು ಹಲವು ಯಾತ್ರಿ ನಿವಾಸಗಳನ್ನು ನಿರ್ಮಿಸಿವೆ.

ಏ.6ರಂದು ಸಂಜೆ ವೀರಭದ್ರೇಶ್ವರನ ಮಹಾರಥೋತ್ಸವ ಹಾಗೂ ಸಂಜೆ 7ಕ್ಕೆ ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧರ್ಮಸಭೆ ನಡೆಯಲಿದೆ. ಏ.7ರಂದು ಬೆಳಿಗ್ಗೆ 9ಕ್ಕೆ ಅಗ್ನಿ ಮಹೋತ್ಸವ ಹಾಗೂ ಏ.8ರಂದು ಸಂಜೆ 6ಕ್ಕೆ ಓಕುಳಿ ನಡೆಯುತ್ತದೆ.

ದೇವಸ್ಥಾನದ ಹಿನ್ನೆಲೆ: ಕಪ್ಪತಗುಡ್ಡದ ದಕ್ಷಿಣ ದಿಕ್ಕಿನ ಕೊನೆಯ ಭಾಗದಲ್ಲಿರುವ ನಂದಿ ಬೆಟ್ಟದಲ್ಲಿ ಸುಮಾರು 800 ವರ್ಷಗಳ ಹಿಂದೆ ವೀರಭದ್ರೇಶ್ವರನ ದೇವಸ್ಥಾನ ನಿರ್ಮಿಸಲಾಗಿತ್ತು. ಪ್ರಾಚೀನ ಕಾಲದಲ್ಲಿ ಶಿಂಗಟಾಲೂರು ಗ್ರಾಮದ ಭಕ್ತನೊಬ್ಬನ ಕನಸಿನಲ್ಲಿ ಬಂದ ವೀರಭದ್ರನು ಕಪ್ಪತಗುಡ್ಡದ ಸಂಜೀವಿನಿ ಹನುಮಪ್ಪನ ಪಡೆಯೊಂದರದಲ್ಲಿ ನನ್ನ ಮೂರ್ತಿ ಇದೆ. ಅದನ್ನು ತಂದು ನಂದಿಬೆಟ್ಟದಲ್ಲಿ ಸ್ಥಾಪಿಸು ಎಂದು ಅಪ್ಪಣೆ ನೀಡುತ್ತಾನೆ. ಅದರಂತೆ ಗ್ರಾಮಸ್ಥರು ಸಂಜೀವಿನಿ ಹನುಮಪ್ಪನ ಪಡೆಯಿಂದ ವೀರಭದ್ರೇಶ್ವರನ ಮೂರ್ತಿಯನ್ನು ತಂದು ನಂದಿ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ.‌

ಶಿಂಗಟಾಲೂರು ಗ್ರಾಮದ ಒಂದು ಹಸು ಪ್ರತಿನಿತ್ಯ ಸಂಜೀವಿನಿ ಹನುಮಪ್ಪನ ಪಡೆಗೆ ತೆರಳಿ ಅಲ್ಲಿ ಹಾಲನ್ನು ಸುರಿಸುತ್ತಿತ್ತು. ಅದನ್ನು ಗಮನಿಸಿದ ಗ್ರಾಮಸ್ಥರು ಪಕ್ಕದಲ್ಲಿದ್ದ ಖುಷಿಮುನಿಗೆ ಈ ಕುರಿತು ವಿಚಾರಿಸಿದರು. ಅಲ್ಲಿ ಒಂದು ವೀರಭದ್ರ ದೇವರ ಮೂರ್ತಿ ಇದೆ ಅದನ್ನು ತಂದು ನಂದಿಬೆಟ್ಟದಲ್ಲಿ ಸ್ಥಾಪಿಸಿ ಎಂದು ಖುಷಿಮುನಿ ತಿಳಿಸುತ್ತಾನೆ. ಅದರಂತೆ ಗ್ರಾಮಸ್ಥರು ವೀರಭದ್ರೇಶ್ವರನ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದರು ಎಂಬ ಮತ್ತೊಂದು ಪ್ರತೀತಿಯೂ ಜಾರಿಯಲ್ಲಿದೆ.

ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ದೇವಸ್ಥಾನವನ್ನು ಒಂದು ಮಾದರಿ ಕ್ಷೇತ್ರವನ್ನಾಗಿಸಲಾಗುವುದು. ಭಕ್ತರು ಹಾಗೂ ಅಭಿಮಾನಿಗಳು ಸಹಕಾರ ನೀಡಬೇಕು
ಕೆ.ವಿ.ಹಂಚಿನಾಳ
–ಅಧ್ಯಕ್ಷ, ವೀರಭದ್ರೇಶ್ವರ ಟ್ರಸ್ಟ್‌ ಕಮಿಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.