ಗದಗ: ‘ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲವು ಗೂಂಡಾ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದು ಖಂಡನೀಯ. ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಸಚಿವ ಸಿ.ಸಿ.ಪಾಟೀಲ ತಾಕೀತು ಮಾಡಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅನಿಲ್ ಅವರ ಕಾರಿನ ಮೇಲೆ ಕಲ್ಲು ತೂರಲಾಗಿದೆ. ಮಜ್ಜಿಗೆಯಿಂದ ಉಗುಳಲಾಗಿದೆ. ಈ ರೀತಿಯ ದುರ್ವರ್ತನೆಯನ್ನು ಹಿಂದೆಂದೂ ಕಂಡಿಲ್ಲ’ ಎಂದು ಆಕ್ರೋಶ ಹೊರಹಾಕಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಬ್ಬವಿದ್ದಂತೆ. ಅದನ್ನು ಶಾಂತ ರೀತಿಯಿಂದ ನಡೆಸಲು ಕ್ರಮವಹಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದು, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆ ಶಾಂತರೀತಿಯಿಂದ ನಡೆಯಲು ಇನ್ನೂ ಹೆಚ್ಚಿನ ಸಶಸ್ತ್ರ ಸೀಮಾ ಬಲದ ನೆರವು ಪಡೆಯುವಂತೆ ಕೋರಲಾಗಿದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಸಂದರ್ಭದಲ್ಲಿ ಕೇಂದ್ರ ನಾಯಕರು ಟಿಕೆಟ್ ಹಂಚಿಕೆಯಲ್ಲಿ ಹೊಸ ಸೂತ್ರ ಪ್ರಯೋಗಿಸಿದ್ದಾರೆ. ಹಳಬರ ಅನುಭವದ ಜತೆಗೆ ಯುವಕರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಗುಜರಾತ್ ಹಾಗೂ ಇನ್ನಿತರ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಈ ಸೂತ್ರ ಯಶಸ್ಸು ತಂದು ಕೊಟ್ಟಿದೆ. ಇದೇ ಕಾರಣದಿಂದ ರಾಜ್ಯದಲ್ಲಿ 52 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿದೆ’ ಎಂದು ತಿಳಿಸಿದರು.
‘ಬಿಜೆಪಿ ತತ್ವ ಸಿದ್ಧಾಂತಗಳಡಿ ಬೆಳೆದು ಬಂದಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ನೋವುಂಟು ಮಾಡಿದೆ. ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿತ್ತು. ಮುಖ್ಯಮಂತ್ರಿ ಕೂಡ ಆಗಿದ್ದರು. ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡಲು ಟಿಕೆಟ್ ನಿರಾಕರಿಸಿದ್ದಕ್ಕೆ ತಾವು ವಿರೋಧಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ದುರ್ದೈವದ ಸಂಗತಿ. ಹಿಂದಿನದ್ದೆಲ್ಲಾ ಮರೆತು, ಶಾಸಕರಾಗುವ ಒಂದೇ ಒಂದು ಗುರಿಯಿಂದ ಕಾಂಗ್ರೆಸ್ ನಾಯಕರಿಂದ ಶಾಲು ಹಾಕಿಸಿಕೊಂಡಿದ್ದು ನೋಡಿ ಬೇಸರ ಆಯಿತು’ ಎಂದು ಹೇಳಿದರು.
‘ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟು ಹೋಗಿದ್ದರಿಂದ ಪಕ್ಷಕ್ಕೇನು ನಷ್ಟ ಇಲ್ಲ. ನಮ್ಮದು ಕಾರ್ಯಕರ್ತರ ನೆಲೆಗಟ್ಟಿನ ಮೇಲೆ ಕಟ್ಟಿದ ಪಕ್ಷ. ಅವರೇ ಪಕ್ಷದ ಶಕ್ತಿ. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ನಂತರ ಅಲ್ಲಿನ ನಾಯಕರು ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಬೀಗುತ್ತಿದ್ದಾರೆ. ಹಾಗಾದರೆ, ಕಾಂಗ್ರೆಸ್ ಪಕ್ಷಕ್ಕೆ ಇಷ್ಟರವರೆಗೆ ಬಲಿಷ್ಠ ಆಗಿರಲಿಲ್ಲವೇ? ಗೆಲ್ಲುವ ತಾಕತ್ತು ಇರಲಿಲ್ಲವೇ? ನಮ್ಮವರು ಅಲ್ಲಿಗೆ ಹೋದ ಮೇಲೆ ತಾಕತ್ತು ಬಂತೇ?’ ಎಂದು ಲೇವಡಿ ಮಾಡಿದರು.
‘2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಗದಗ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದ ಶಿವಕುಮಾರ ಉದಾಸಿ ಇದ್ದರು.
‘ಕಾಂಗ್ರೆಸ್ಸಿಗರ ಲಿಂಗಾಯತ ಪ್ರೀತಿ ಎಲ್ಲರಿಗೂ ತಿಳಿದಿದೆ’
‘ಇತ್ತೀಚಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಲಿಂಗಾಯತರ ಮೇಲೆ ಅತ್ಯಂತ ಪ್ರೀತಿ ಬಂದಿದೆ. ಲಿಂಗಾಯತರ ಮೇಲಿನ ಇವರ ಕಣ್ಣೊರೆಸುವ ತಂತ್ರಕ್ಕೆ ಯಾವ ಮತದಾರರು ಮರಳಾಗುವುದಿಲ್ಲ’ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ಐದು ವರ್ಷಗಳ ಹಿಂದೆ ವೀರಶೈವ ಲಿಂಗಾಯತರನ್ನು ಒಡೆಯಲು ಯತ್ನಿಸಿದ್ದು ಯಾರು? ವಿನಯ್ ಕುಲಕರ್ಣಿ ಮತ್ತು ಎಂ.ಬಿ.ಪಾಟೀಲರನ್ನು ಬಳಸಿಕೊಂಡು ಧರ್ಮ ಒಡೆಯಲು ಮುಂದಾಗಿದ್ದು ಇವರೇ ಅಲ್ಲವೇ? ಇವರ ಲಿಂಗಾಯತ ಕಾಳಜಿ ನಮಗೆ ಬೇಕಿಲ್ಲ. ಬಿಜೆಪಿಯಲ್ಲೇ ಲಿಂಗಾಯತರಿಗೆ ಸಾಕಷ್ಟು ಸ್ಥಾನಮಾನ, ಪ್ರಾತಿನಿಧ್ಯ ಕೊಟ್ಟಿದೆ’ ಎಂದು ಹೇಳಿದರು.
‘ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಇಳಿಸಿದಾಗ ನಿಮ್ಮ ಲಿಂಗಾಯತ ಪ್ರೇಮ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಕಿಡಿಕಾರಿದರು.
‘ಬಹುದಿನಗಳ ಹೋರಾಟದ ಫಲವಾಗಿ 2ಡಿ ಮೀಸಲಾತಿ ಸಿಕ್ಕಿದೆ. ಆದರೆ, ನಮ್ಮ ಸರ್ಕಾರ ಬಂದರೆ ಈ ಮೀಸಲಾತಿ ರದ್ದು ಮಾಡುವುದಾಗಿ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಇದು ಲಿಂಗಾಯತರ ಮೇಲೆ ಕಾಂಗ್ರೆಸ್‌ನವರಿಗೆ ಇರುವ ವಿಶೇಷ ಪ್ರೀತಿ ಯಾವ ಬಗೆಯದ್ದು ಎಂದು ಸೂಚಿಸುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.