ADVERTISEMENT

ಬಿಜೆಪಿ ನಾಯಕರಿಗೆ 'ಕಾಂಗ್ರೆಸ್‌' ಭಯ ಆರಂಭವಾಗಿದೆ: ಮಂಜುನಾಥ ಕುನ್ನೂರ

​ಪ್ರಜಾವಾಣಿ ವಾರ್ತೆ
Published 7 ಮೇ 2023, 3:21 IST
Last Updated 7 ಮೇ 2023, 3:21 IST
ಮಂಜುನಾಥ ಕುನ್ನೂರ
ಮಂಜುನಾಥ ಕುನ್ನೂರ   

ಗದಗ: ‘ಕೋವಿಡ್ ಹಾಗೂ ಪ್ರವಾಹ ಬಂದಾಗ ಜನರು ಸಂಕಷ್ಟದಲ್ಲಿರುವಾಗ ರಾಜ್ಯಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಹೊತ್ತಲ್ಲಿ ತಾಲ್ಲೂಕು ಕೇಂದ್ರಗಳಿಗೂ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದ ಬಿಜೆಪಿಯವರಿಗೆ ಕಾಂಗ್ರೆಸ್ ಭಯ ಆರಂಭವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ ಕುನ್ನೂರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡದೇ ಮತಕ್ಕಾಗಿ ಜಾತಿ–ಧರ್ಮಗಳ ಮಧ್ಯೆ ಸಂಘರ್ಷ ಮಾಡಿಸುತ್ತಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಿವೆ’ ಎಂದು ಆರೋಪ ಮಾಡಿದರು.

ADVERTISEMENT

‘ಮೂರು ಬಾರಿ ಹುಬ್ಬಳ್ಳಿ-ಧಾರವಾಡದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರೂ ಆಗಿದ್ದುಕೊಂಡು ತಮ್ಮ ಕ್ಷೇತ್ರದ ಅವಳಿ ನಗರಗಳ ನೀರಿನ ಸಮಸ್ಯೆಯನ್ನು ಬಗೆಹರಿಸದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಗದಗ ನಗರದ ನೀರಿನ ಸಮಸ್ಯೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ’ ಎಂದು ವ್ಯಂಗ್ಯ ಮಾಡಿದರು.

‘ಶಿರಸಿ-ಯಲ್ಲಾಪುರ ಮಧ್ಯದಲ್ಲಿರು ಬೇಡ್ತಿ-ವರದಾ ನದಿ ಯೋಜನೆ ಜಾರಿ ಬಗ್ಗೆ 2010ರಲ್ಲೇ ಡಿಪಿಆರ್ ಸಿದ್ಧವಿದೆ. ಇದನ್ನು ಸೇರಿಸಿದರೆ 70 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ-ಧಾರವಾಡದ ನೀರಿನ ಸಮಸ್ಯೆ ಬಗೆಹರಿಸಬಹುದು. ಆದರೆ ಈ ಕುರಿತು ಸ್ವತಃ ವರದಾ ನದಿಯಿರುವ ಕ್ಷೇತ್ರದವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಯಾರೂ ಚಕಾರ ಎತ್ತುತ್ತಿಲ್ಲ’ ಎಂದರು.

‘ಗದಗ ಶಾಸಕ ಎಚ್.ಕೆ. ಪಾಟೀಲರು ಸಿಂಗಟಾಲೂರ ಏತ ನೀರಾವರಿ ಯೋಜನೆಯಡಿ ಹಮ್ಮಗಿ ಬ್ಯಾರೇಜಿನ ನೀರನ್ನು 18 ಟಿಎಂಸಿ ಅಡಿಗೆ ಹೆಚ್ಚಿಸಿದ ಪರಿಣಾಮ ಗದಗ ಸೇರಿ ಜಿಲ್ಲೆಯ ಹಲವು ಗ್ರಾಮಗಳು ನೀರಾವರಿ ವ್ಯಾಪ್ತಿಗೆ ಸೇರಿವೆ. ಅವರು ಗ್ರಾಮೀಣಾಭಿವೃದ್ಧಿ ಸಚಿವರಿದ್ದಾಗ ನದಿ ಮೂಲದಿಂದ ಜಿಲ್ಲೆಯ 343 ಹಳ್ಳಿಗಳಿಗೆ ₹1,049 ಕೋಟಿ ವೆಚ್ಚದ ಯೋಜನೆ ಮೂಲಕ ನೀರು ತಲುಪಿಸಿದ್ದಾರೆ’ ಎಂದರು.

ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಅಶೋಕ ಹುರಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.