ADVERTISEMENT

‘ಶಕ್ತಿ’ ಯೋಜನೆ: ಲಕಮಾಪುರ ಮಹಿಳೆಯರು ವಂಚಿತ

ಮೂರು ಕಿ.ಮೀ ನಡೆದು ಬಸ್‌ ಹತ್ತಬೇಕಾದ ಪರಿಸ್ಥಿತಿ: ಶೀಘ್ರ ಬಸ್‌ ಆರಂಭಕ್ಕೆ ಆಗ್ರಹ

ಬಸವರಾಜ ಹಲಕುರ್ಕಿ
Published 16 ಜೂನ್ 2023, 6:30 IST
Last Updated 16 ಜೂನ್ 2023, 6:30 IST
ಶಕ್ತಿ ಸ್ಮಾರ್ಟ್‌ ಕಾರ್ಡ್‌
ಶಕ್ತಿ ಸ್ಮಾರ್ಟ್‌ ಕಾರ್ಡ್‌   

ನರಗುಂದ: ‘ರಾಜ್ಯದಾಗ ಎಲ್ಲಾ ಕಡೆ ಉಚಿತ ಬಸ್ ಪ್ರಯಾಣ ಜಾರಿಯಾದರೂ ಅದರ ಲಾಭ ಮಾತ್ರ ನಮ್ಗ ಸಿಗವಲ್ದ. ಯಾಕಂದ್ರ, ನಮ್ಮ ಊರಿಗೆ ಬಸ್ ಬರೂದಿಲ್ಲ...’ ಎಂದು ತಾಲ್ಲೂಕಿನ ಲಕಮಾಪುರ, ವಾಸನ ಗ್ರಾಮದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ 33 ಗ್ರಾಮಗಳ ಪೈಕಿ ಈ ಎರಡು ಗ್ರಾಮಗಳಿಗೆ ಸರ್ಕಾರಿ ಬಸ್ ಸೌಲಭ್ಯವೇ ಇಲ್ಲ. ಇದರಿಂದ ಈ ಗ್ರಾಮಸ್ಥರು ರಾಜ್ಯ ಸರ್ಕಾರದ ಮೊದಲ ಗ್ಯಾರಂಟಿ ಯೋಜನೆ ‘ಶಕ್ತಿ'ಯಿಂದ ವಂಚಿತರಾಗುವಂತಾಗಿದೆ.

ತಾಲ್ಲೂಕು ಕೇಂದ್ರ ನರಗುಂದದಿಂದ 25 ಕಿ.ಮೀ  ಅಂತರದಲ್ಲಿ ಲಕಮಾಪುರ ಇದೆ. ಆದರೆ, ಗ್ರಾಮಸ್ಥರು ಗ್ರಾಮದಿಂದ ಮೂರು ಕಿ.ಮೀ  ಅಂತರದಲ್ಲಿರುವ ರಾಮದುರ್ಗ ರಸ್ತೆಗೆ ನಡೆದುಕೊಂಡು ಬಂದು ಅಲ್ಲಿಂದ ಕೊಣ್ಣೂರ ಹಾಗೂ ರಾಮದುರ್ಗ ಕಡೆಗೆ ತೆರಳಬೇಕಿದೆ.

ADVERTISEMENT

ನೇರವಾಗಿ ತಮ್ಮ ಊರುಗಳಿಗೆ ಬಸ್ ಬರದೇ ಇರುವುದರಿಂದ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ನಡೆದುಕೊಂಡು ಅಥವಾ ಟಂಟಂ, ಬೈಕ್, ಟ್ರ್ಯಾಕ್ಟರ್ ಮೂಲಕ ಸಂಚರಿಸುವುದು ಸಾಮಾನ್ಯವಾಗಿದೆ.

ತಾಲ್ಲೂಕಿನ ಗಡಿ ಗ್ರಾಮವಾದ ಲಕಮಾಪುರ ಪದೇ ಪದೇ ಮಲಪ್ರಭಾ ಪ್ರವಾಹಕ್ಕೆ ತುತ್ತಾಗುತ್ತದೆ. ಇಲ್ಲಿಯ ಜನರು ಕಳೆದ ಎರಡು ದಶಕಗಳಿಂದ ಸ್ಥಳಾಂತರಕ್ಕೆ ಆಗ್ರಹಿಸುವ ಕೂಗು ಕೇಳಿಬರುತ್ತಿದೆ. ಇದರಿಂದಾಗಿ ಈ ಗ್ರಾಮ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದೆ. ಅದರಲ್ಲೂ ಕೆಎಸ್ಆರ್‌ಟಿಸಿ ಮಾತ್ರ  ಇಲ್ಲಿಗೆ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಮಹಿಳೆಯರು, ವೃದ್ಧರು ನಡೆದುಕೊಂಡೆ ಬರಬೇಕಿದೆ. ಈಗ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಗ್ರಾಮಸ್ಥರು ಬಸ್ ಬೇಡಿಕೆಗೆ ಆಗ್ರಹಿಸಿದ್ದು, ಸಾರಿಗೆ ಸಂಸ್ಥೆ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಮಾಧ್ಯಮಗಳಲ್ಲಿ ಬಂದಾಗ ಎರಡು ದಿನ ಬಸ್ ಓಡಿಸಿ ಮತ್ತೇ ಬಸ್ ಸ್ಥಗಿತಗೊಳಿಸುವ ಚಾಳಿ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಕೊನೆಗೆ ಈಗಲಾದರೂ ಮಹಿಳೆಯರಿಗೋಸ್ಕರ, ವಿದ್ಯಾರ್ಥಿಗಳಿಗೋಸ್ಕರ ಬಸ್‌ಗಳನ್ನು ಆರಂಭಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಸರ್ಕಾರದ ಯೋಜನೆ ನಮಗೂ ಸಿಗಬೇಕು. ನಾವೂ ಬಸ್ ಹತ್ತಿ ಉಚಿತ ಪ್ರಯಾಣ ಮಾಡಬೇಕು. ಕೆಎಸ್ಆರ್‌ಟಿಸಿ ಬಸ್‌ ಗ್ರಾಮಕ್ಕೆ ನೇರವಾಗಿ ಬರಬೇಕು. ಆಗ ನಮಗೂ ಶಕ್ತಿ ಲಾಭ ಸಿಗತೈತಿ
ಸುಲೋಚನಾ ಲಕಮಾಪುರ ಗ್ರಾಮದ ಮಹಿಳೆ

‘ಪ್ರವಾಹಕ್ಕೆ ಒಳಗಾಗಿ ಲಕಮಾಪುರಕ್ಕೆ ಬಸ್‌ಗಳು ಸಂಚರಿಸಲು ಸರಿಯಾದ ಮಾರ್ಗವಿರಲಿಲ್ಲ. ಸೇತುವೆ ಕಾಮಗಾರಿ ನಡೆದಿತ್ತು. ಈಗ ಮುಗಿದಿದೆ. ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲಿಸಲಾಗಿದೆ. ಎರಡು ಗ್ರಾಮಕ್ಕೂ ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಹೇಳಿದರು.

‘ನಿತ್ಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರು ಕಿ.ಮೀ. ನಡೆದುಕೊಂಡೇ ರಾಮದುರ್ಗ ಕ್ರಾಸ್‌ಗೆ ತೆರಳಿ ಬಸ್‌ ಹಿಡಿಯಬೇಕು. ಮಹಿಳೆಯರ ಪಾಡಂತೂ ಹೇಳತೀರದು. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಹಾಗೂ ಶಕ್ತಿ ಯೋಜನೆಯ ಸಲುವಾಗಿ ಬೇಗನೇ ಬಸ್ ಸೇವೆ ಆರಂಭಿಸಬೇಕು’ ಎಂದು ಲಕಮಾಪುರ ನಿವಾಸಿ, ವಕೀಲ ಅಶೋಕ ದೇವರಮನಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.