ಗದಗ: ‘ಕೊರೊನಾ ಕಾಲದ ಅಕ್ರಮದ ಕುರಿತ ತನಿಖೆಗೆ ಸಂವಿಧಾನದತ್ತವಾಗಿ ರಚನೆಯಾದ ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಅವರನ್ನು ಏಜೆಂಟ್ ಎಂದು ಕರೆದು, ಲಘುವಾಗಿ ಟೀಕಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಸಚಿವ ಎಚ್.ಕೆ.ಪಾಟೀಲ ಆಗ್ರಹಿಸಿದರು.
‘ಯಾರು ಸಂವಿಧಾನವನ್ನು ಎತ್ತಿ ಹಿಡಿಯಬೇಕಿತ್ತೋ, ನ್ಯಾಯಾಂಗವನ್ನು ಗೌರವದಿಂದ ನೋಡಬೇಕಿತ್ತೋ ಅಂತಹವರೇ ನ್ಯಾಯಮೂರ್ತಿ ಡಿ. ಕುನ್ಹಾ ಬಗ್ಗೆ ಏಜೆಂಟ್ ಎಂದು ಹೇಳಿರುವುದು, ಆಯೋಗದ ಬಗ್ಗೆ ಲಘುವಾಗಿ ಟೀಕಿಸಿದ್ದು ದುರ್ದೈವ. ರಾಷ್ಟ್ರಪತಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಜೋಶಿ ಅವರನ್ನು ತಕ್ಷಣವೇ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಜಸ್ಟೀಸ್ ಜಾನ್ ಮೈಕೆಲ್ ಡಿ. ಕುನ್ಹಾ ಆಯೋಗವು 50 ಸಾವಿರಕ್ಕೂ ಅಧಿಕ ಕಡತಗಳನ್ನು ಪರಿಶೀಲಿಸಿ, ₹7,223 ಕೋಟಿ ಅವ್ಯವಹಾರ ನಡೆದಿದ್ದರ ಬಗ್ಗೆ ಸತ್ಯಶೋಧನೆ ನಡೆಸಿದೆ. ಯಡಿಯೂರಪ್ಪನವರು ಸಿಎಂ, ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗಿನ ಅವ್ಯವಹಾರ ಎಳೆಎಳೆಯಾಗಿ ಇದರಲ್ಲಿ ಬಿಚ್ಚಿಡಲಾಗಿದೆ’ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.