ADVERTISEMENT

ಶರೀರದ ಮಹತ್ವ ಅರಿಯಿರಿ: ಕಾಶೀ ಜಗದ್ಗುರು

‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:32 IST
Last Updated 11 ಜುಲೈ 2024, 12:32 IST
‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಕಾಶೀ ಪೀಠದ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿದರು
‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಕಾಶೀ ಪೀಠದ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿದರು   

ಗದಗ: ‘ಶಿವಯೋಗದ ಸಾಧನೆಗೆ ಶರೀರ ಮುಖ್ಯಪಾತ್ರ ವಹಿಸಿತ್ತದೆ. ಶರೀರವನ್ನು ಕಾಪಾಡಿಕೊಂಡು ಹೋದಾಗ ಮಾತ್ರ ಶಿವಯೋಗ ಸಾಧನೆ ಮಾಡಲು ಸಾಧ್ಯ’ ಎಂದು ಕಾಶೀ ಪೀಠದ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಜಗದ್ಗುರು ವಿಶ್ವಾರಾಧ್ಯ ಎಜುಕೇಶನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಷಾಢ ಮಾಸದ ಅಂಗವಾಗಿ ಬುಧವಾರ ನಡೆದ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಶರೀರದ ಮಹತ್ವ ಅರಿತುಕೊಳ್ಳಬೇಕಿದೆ. ಮಾನವ ಜನ್ಮ ತಾಳಿ ಏನು ಮಾಡಬೇಕು ಎಂಬುದನ್ನು ನಾವು ಮರೆತಿದ್ದೇವೆ. ಆದ್ದರಿಂದ ನಮ್ಮ ಸಂಸ್ಕೃತಿ, ವೀರಶೈವ ಪರಂಪರೆಯ ಸಂಪ್ರದಾಯವನ್ನು ಅರಿತುಕೊಂಡು ಶಿವಯೋಗ ಸಾಧನೆ ಮಾಡಬೇಕು ಎಂದು ಹೇಳಿದರು.

ADVERTISEMENT

ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ಧಾಂತ ಶಿಖಾಮಣಿ ಗ್ರಂಥವು ಶಿವಯೋಗದ ಮಹತ್ವನ್ನು ತಿಳಿಸಿಕೊಂಡು ಬರುತ್ತಿದೆ. ನಾವು ಮಾಡುವ ಇಷ್ಟಲಿಂಗ ಪೂಜೆಯನ್ನು ಶಿವಯೋಗ ಎಂತಲೂ ಕರೆಯುತ್ತಾರೆ. ಅಂಗಗುಣಗಳನ್ನು ಕಳೆದುಕೊಂಡು ಲಿಂಗಗುಣಗಳನ್ನು ಅಳವಡಿಸಿಕೊಳ್ಳುವವನು ಯೋಗಿಯಾಗುತ್ತಾನೆ. ಲಿಂಗಗುಣಗಳಾದ ಅಹಿಂಸೆ, ದಾನ, ಕ್ಷಮೆಯನ್ನು ಅಳವಡಿಸಿಕೊಂಡಾಗ ಜೀವಾತ್ಮ ಪರಮಾತ್ಮನಾಗುತ್ತಾನೆ ಎಂದು ಹೇಳಿದರು.

ಶರೀರಕ್ಕೆ ತನು, ದೇಹ, ಕಾಯ, ಭೋಗಾಯತನ, ಅಂಗ ಎಂಬ ಹೆಸರುಗಳಿವೆ. ಶರೀರಕ್ಕೆ ಮೊದಲನೇ ಹೆಸರು ತನು. ತನು ಎಂದರೆ ಚಿಕ್ಕದು, ಸಣ್ಣದು ಎಂಬ ಭಾವ ಬರುತ್ತದೆ. ನಿರಾಕಾರನಾಗಿರುವ ಪರಮಾತ್ಮ ಜೀವಾತ್ಮನಾಗಿ ಶರೀರ ಪ್ರವೇಶ ಮಾಡುವುದರಿಂದ ತನು ಎಂದು ಕರೆದರು. ದೇಹ ಎಂದರೆ ದಹಿಸಲ್ಪಡುವುದರಿಂದ ಶರೀರವನ್ನು ದೇಹ ಎಂದು ಕರೆದರು. ಕಾಯ ಎಂದರೆ ಕಷ್ಟಗಳನ್ನು ಸಹಿಸಿಕೊಂಡು ಬರುವುದರಿಂದ ಕಾಯ. ಅಂಗ ಎಂದರೆ ವೀರೇಶ್ವರ ಧರ್ಮದ ಪಾರಮಾರ್ಥಿಕ ಭಾಷೆ ಪರಮಾತ್ಮನನ್ನು ಕೂಡುವ ಸ್ಥಳವಾಗಿದ್ದರಿಂದ ಶರೀರಕ್ಕೆ ಅಂಗ ಎಂದು ಕರೆಯಲಾಗಿದೆ. ಪರಮಾತ್ಮ ಕೊಟ್ಟಿರುವ ಈ ಶರೀರವನ್ನು ಶಿವಯೋಗ ಸಾಧನೆಗೆ ಬಳಸಿಕೊಳ್ಳಬೇಕು ಎಂದರು.

ಶಹಪೂರದ ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ, ನಾಗನಸೂರಿನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ಕಾರ್ಯಾಧ್ಯಕ್ಷ ಸಿದ್ದಲಿಂಗಪ್ಪ ಚಳಗೇರಿ, ಉಮಾಪತಿ ಭೂಸನೂರಮಠ, ಎಸ್.ಎಸ್.ಮೇಟಿ, ವೀರಭದ್ರಯ್ಯ ಧನ್ನೂರಹಿರೇಮಠ, ಆರ್.ಕೆ.ಮಠ, ಡಾ. ಶೇಖರ ಸಜ್ಜನರ ಇದ್ದರು.

ಅಕ್ಷತಾ ಹಿರೇಮಠ ಪ್ರಾರ್ಥಿಸಿದರು. ವೀರೇಶ ಕೂಗು ಸ್ವಾಗತಿಸಿದರು. ಜಗದ್ಗುರು ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಗುರುಶಿದ್ದಯ್ಯ ಹಿರೇಮಠ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.