ADVERTISEMENT

ಸಹಕಾರ ಬ್ಯಾಂಕ್ ಬಲವರ್ಧನೆಗೆ ಕ್ರಮ: ಸಚಿವ ರಾಜಣ್ಣ

ಸರ್ಕಾರಿ ಯೋಜನೆಗಳ ಹಣ ಸಹಕಾರ ಬ್ಯಾಂಕ್‌ನಲ್ಲಿ ಇರಿಸುವ ಕುರಿತು ಸಿ.ಎಂ ಜತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 15:34 IST
Last Updated 4 ಅಕ್ಟೋಬರ್ 2024, 15:34 IST
ಗದಗ ನಗರದ ಕೆಸಿಸಿ ಬ್ಯಾಂಕ್‌ ಶಾಖೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿದರು
ಗದಗ ನಗರದ ಕೆಸಿಸಿ ಬ್ಯಾಂಕ್‌ ಶಾಖೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿದರು   

ಗದಗ: ‘ಗ್ರಾಮೀಣ ಪ್ರದೇಶದ ರೈತರು ಮತ್ತು ಬಡವರ್ಗದ ಜನರಿಗೆ ಆರ್ಥಿಕ ಸಾಲ ಸೌಲಭ್ಯ ಕಲ್ಪಿಸುವಲ್ಲಿ ಸಹಕಾರ ಬ್ಯಾಂಕ್‌ಗಳ ಪಾತ್ರ ಪ್ರಮುಖವಾಗಿದೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ನಗರದ ಕೆಸಿಸಿ ಬ್ಯಾಂಕ್‌ ಶಾಖೆಗೆ ಗುರುವಾರ ಭೇಟಿ ನೀಡಿದ ಅವರು, ಅಧಿಕಾರಿಗಳ ಜತೆಗೆ ಸಭೆ ನಡೆಸಿ ಮಾತನಾಡಿದರು.

‘ಸಹಕಾರ ಬ್ಯಾಂಕ್‌ಗಳ ಆರ್ಥಿಕ ಬಲವರ್ಧನೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಅನುದಾನವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳ ಬದಲಿಗೆ, ಜಿಲ್ಲಾ ಕೇಂದ್ರ ಬ್ಯಾಂಕ್‌ಗಳಲ್ಲಿ ಇಡುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಕೆಸಿಸಿ ಬ್ಯಾಂಕ್‌ ಆರ್ಥಿಕವಾಗಿ ಪ್ರಗತಿಯತ್ತ ಸಾಗಿದ್ದು, ಹೆಚ್ಚು ಕೃಷಿಯೇತರ ಸಾಲ ಸೌಲಭ್ಯಗಳನ್ನು ವಿತರಿಸಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೂಡ ಬಲಪಡಿಸಬೇಕು. ಸಹಕಾರ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಾಲಕಾಲಕ್ಕೆ ತರಬೇತಿ ಕೊಡಿಸಬೇಕು. ಸಹಕಾರ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮೇಲೆ ಆಡಳಿತವರ್ಗ ನಿಯಂತ್ರಣ ಹೊಂದಿರಬೇಕು. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುವ ಸೇವೆ ಒದಗಿಸಲು ಮತ್ತು ಸಹಕಾರ ಸಂಸ್ಥೆಗೆ ಯಾವುದೇ ಹಾನಿಯಾಗದಂತೆ ಆಡಳಿತವರ್ಗ ಸೂಕ್ತ ನಿಗಾ ವಹಿಸಬೇಕು’ ಎಂದು ತಿಳಿಸಿದರು.

ಕೆಸಿಸಿ ಬ್ಯಾಂಕ್‌ನ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ, ಬ್ಯಾಂಕ್‌ನ ಪ್ರಗತಿಗಾಗಿ ರೂಪಿಸಿರುವ ಅಭಿವೃದ್ಧಿಪರ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ರೈತ ಸದಸ್ಯರ ಪರವಾಗಿ ಕೃಷಿ ಸಂಬಂಧಿತ ಸಾಲ ಸೌಲಭ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸುವ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು.

ಬ್ಯಾಂಕ್ ನಿರ್ದೇಶಕರಾದ ಮಲ್ಲಪ್ಪ ಎಫ್. ಕಲಗುಡಿ, ಸಿ.ಎಂ. ಪಾಟೀಲ, ಜಿ.ವಿ. ಪಾಟೀಲ, ಸಿ.ಬಿ. ದೊಡ್ಡಗೌಡ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಎಸ್. ರಮಣರೆಡ್ಡಿ, ಕೃಷ್ಣಗೌಡ ಪಾಟೀಲ, ಕೆಸಿಸಿ ಬ್ಯಾಂಕ್‌ನ ಅಧಿಕಾರಿಗಳಾದ ಎಸ್.ಜಿ. ಆಲದಕಟ್ಟಿ, ವಸೂಲಾಧಿಕಾರಿ ಬಿ.ಬಿ. ನಾಯಕ, ಶಾಖಾ ವ್ಯವಸ್ಥಾಪಕಿ ಆರ್.ಎಸ್. ತಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.