ADVERTISEMENT

ಚಾಲಕ ನಿರ್ವಾಹಕರ ಮೇಲೆ ಹಲ್ಲೆ: ರಕ್ಷಣೆ ಒದಗಿಸಿ

ಸಾರಿಗೆ ಸಿಬ್ಬಂದಿಯಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:39 IST
Last Updated 22 ನವೆಂಬರ್ 2024, 15:39 IST
ಗದಗ ನಗರದ ಮುಳಗುಂದ ನಾಕಾ ಬಳಿ ಇರುವ ಸಂಸ್ಥೆಯ ವಿಭಾಗೀಯ ಕಚೇರಿಯಿಂದ ಕಾರ್ಮಿಕ ಸಂಘಟನೆ ಮುಖಂಡರು ಗದಗ ಡಿವೈಎಸ್‌ಪಿ ಕಾರ್ಯಾಲಯವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು
ಗದಗ ನಗರದ ಮುಳಗುಂದ ನಾಕಾ ಬಳಿ ಇರುವ ಸಂಸ್ಥೆಯ ವಿಭಾಗೀಯ ಕಚೇರಿಯಿಂದ ಕಾರ್ಮಿಕ ಸಂಘಟನೆ ಮುಖಂಡರು ಗದಗ ಡಿವೈಎಸ್‌ಪಿ ಕಾರ್ಯಾಲಯವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು   

ಗದಗ: ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಚಾಲಕ– ನಿರ್ವಾಹಕರು ಹಗಲು ರಾತ್ರಿ ಎನ್ನದೇ ಶ್ರದ್ಧೆಯಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ನಮ್ಮ ಸೇವೆಯ ಮಹತ್ವ ಅರಿಯದ ಕೆಲವು ಕಿಡಿಗೇಡಿಗಳು ಕ್ಷುಲ್ಲಕ ವಿಚಾರಗಳಿಗೆ ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದು, ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಕಾರ್ಮಿಕ ಮುಖಂಡ ಶಾಂತಣ್ಣ ಮುಳವಾಡ ಆಗ್ರಹಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಚಾಲಕ, ನಿರ್ವಾಹಕರ ಮೇಲೆ ಆಗುತ್ತಿರುವ ಹಲ್ಲೆಗಳಿಂದ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಸಂಸ್ಥೆಯ ವಿವಿಧ ಕಾರ್ಮಿಕ ಸಂಘಟನೆಗಳವರು ಗದಗ ಡಿವೈಎಸ್‌ಪಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು.

‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಬಸ್‌ ಚಾಲಕ ಮತ್ತು ನಿರ್ವಾಹಕರು ಶ್ರಮಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್‍ಗಳಲ್ಲಿ ಪ್ರಯಾಣಿಕರ ದಟ್ಟಣೆ, ಗದ್ದಲ ಹೆಚ್ಚಾಗಿದೆ. ಸ್ಟೇಜ್ ದಾಟುವುದರೊಳಗೆ ಟಿಕೆಟ್‌ ನೀಡಬೇಕು. ಟಿಕೆಟ್‌ ನೀಡಲು ಬಸ್ ನಿಲ್ಲಿಸುತ್ತಿದ್ದಂತೆಯೇ ಕೆಲವು ಕಿಡಿಗೇಡಿ ಪ್ರಯಾಣಿಕರು ಚಾಲಕ, ನಿರ್ವಾಹಕರ ಮೇಲೆ ಸಿಟ್ಟಾಗುವುದು, ಬೈದಾಡುವುದು ಅಷ್ಟೇ ಅಲ್ಲದೇ ವಾಗ್ವಾದಕ್ಕಿಳಿದು ಹಲ್ಲೆ ನಡೆಸುವಂತಹ ಕೃತ್ಯಕ್ಕೂ ಮುಂದಾಗುತ್ತಿರುವುದು ಕಳವಳಕಾರಿ ಸಂಗತಿ’ ಎಂದು ತಿಳಿಸಿದರು.

ADVERTISEMENT

‘ಒಂದು ವೇಳೆ ಸ್ಟೇಜ್ ದಾಟಿ, ಟಿಕೆಟ್‌ ನೀಡದಿರುವುದು ಕಂಡುಬಂದರೆ ನಮ್ಮ ನೌಕರಿಗೆ ಕುತ್ತು ಬರುತ್ತದೆ. ಇದರಿಂದಾಗಿ ಉದ್ಯೋಗ ಮಾಡುವುದೇ ಕಷ್ಟವಾಗಿದೆ. ಆದ ಕಾರಣ ನಮ್ಮ ಸಂಸ್ಥೆಯ ನೌಕರರು, ಸಿಬ್ಬಂದಿಯ ಮೇಲೆ ಆಗುತ್ತಿರುವ ಮತ್ತು ಆಗಬಹುದಾದ ಹಲ್ಲೆಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಂಡು ರಕ್ಷಣೆ ನೀಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.

‘ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಈ ರೀತಿಯ ಹಲ್ಲೆಗಳು ನಡೆಯುತ್ತಿದ್ದು, ಶಿರಹಟ್ಟಿಯಲ್ಲೂ ಸಹ ಇಂತಹ ಘಟನೆಗಳು ನಡೆದು ಪ್ರಕರಣ ದಾಖಲಾಗಿದೆ. ಇದರಿಂದಾಗಿ ಸಂಸ್ಥೆಯ ನೌಕರರು, ಕಾರ್ಮಿಕರು ಭೀತಿಯಲ್ಲಿಯೇ ಕರ್ತವ್ಯ ನಿರ್ವಹಿಸುವಂತಾಗಿದೆ. ಇದರಿಂದಾಗಿ ನಮ್ಮ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ’ ಎಂದು ತಿಳಿಸಿದರು. 

ಕಾರ್ಮಿಕ ಮುಖಂಡರಾದ ನಾಗರಾಜ ಬಳ್ಳಾರಿ, ಎಸ್.ಎಫ್. ಸಂಗಣ್ಣವರ, ಸಂತೋಷ ಕುಲಕರ್ಣಿ, ಗೋಪಾಲ ರಾಯರು, ಎಂ.ಎಚ್. ಪೂಜಾರ, ಎಫ್.ಎಚ್.ಗೌಡರ, ಎ.ಜಿ. ಸುಂಕದ, ಬಿ.ಎಚ್. ರಾಮೇನಹಳ್ಳಿ, ಎಚ್.ಸಿ. ಕೊಪ್ಪಳ, ಎಂ. ಆಂಜನೇಯ, ಎಸ್.ಕೆ. ಭಜಂತ್ರಿ, ಎಸ್.ಕೆ. ಅಯ್ಯನಗೌಡರ, ಎ.ಕೆ. ಕರ್ನಾಚಿ, ಜಿ.ಆರ್. ಆದಿ, ಆಂಜನೇಯ ಕುಂಬಾರ, ಲಕ್ಷ್ಮೀ ಸಾಲಮನಿ, ವಿದ್ಯಾ ಮೇಘರಾಜ, ವೀಣಾ ಚವ್ಹಾಣ, ಜೆ.ಜೆ. ಪಠಾಣ, ಸಿದ್ಧಪ್ಪ ಗದಗಿನ, ಮಲ್ಲಪ್ಪ ಅವ್ವಣ್ಣವರ, ಅಶೋಕ ಸಂಗಟಿ, ಕೆಂಚಪ್ಪ ಡೊಳ್ಳಿನ, ಈರಣ್ಣ ಜವಳಿ, ಬಸವರಡ್ಡಿ, ವಿ.ವಿ. ಗೋದಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.