ADVERTISEMENT

ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 13:50 IST
Last Updated 5 ಡಿಸೆಂಬರ್ 2023, 13:50 IST
ಕುರುಬೂರ ಶಾಂತಕುಮಾರ್‌
ಕುರುಬೂರ ಶಾಂತಕುಮಾರ್‌   

ಮುಂಡರಗಿ: ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕೆಂದು ಆಂದೋಲನ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಡಿ.23ರಂದು ರೈತರ ಮಹಾ ಅಧಿವೇಶನ ನಡೆಸಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರೈತರ ಸಾಲಮನ್ನಾ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು ₹12 ಲಕ್ಷ ಕೋಟಿ ಮನ್ನಾ ಮಾಡಿರುವ ರೀತಿ ರೈತರ ಸಾಲಮನ್ನಾ ಆಗಬೇಕು. ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ರಾಜ್ಯ ಸರ್ಕಾರ ₹2 ಸಾವಿರ ಮಾತ್ರ ಪರಿಹಾರ ನೀಡುವುದು ಸರಿಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟ ಆಡುತ್ತಿವೆ. ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೃಷಿ ಪಂಪ್‍ಸೆಟ್‍ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ವೇಳೆ ನಿರಂತರ 10 ತಾಸು ವಿದ್ಯುತ್‍ ನೀಡಬೇಕು. ರೈತರ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ಮಾಬುಸಾಬ ಬಳ್ಳಾರಿ, ಕೋಟೆಪ್ಪ ಚೌಡಗಿ, ಹುಸೇನ್‍ಸಾಬ ಕುರಿ, ರಂಜಿತ್ ಮದ್ಯಪಾಟಿ, ಸಂತೋಷಹಳ್ಳಿ, ಸಿದ್ದಪ್ಪ ಹಲವಾಗಲಿ, ನಿಂಗಪ್ಪ ಬಂಗೇರಿ, ಬಸಣ್ಣ ಬೆಂಡಿಗೇರಿ, ಹನುಮಂತ ಗುಜನೂರು, ರಾಜು ಉಜರತ್ತಿ, ಗಿರೀಶಗೌಡ ಪಾಟೀಲ, ಈಶ್ವರಗೌಡ, ಗಂಗಾಧರ, ಪುಟ್ಟಪ್ಪ, ವಿಶ್ವನಾಥ ಶಿರಹಟ್ಟಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.