ADVERTISEMENT

ಮುಂಡರಗಿ: ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಸೌಲಭ್ಯಗಳಿಲ್ಲದೆ ನಲುಗಿದ ಬರದೂರು

ಕಾಶಿನಾಥ ಬಿಳಿಮಗ್ಗದ
Published 28 ಫೆಬ್ರುವರಿ 2024, 5:01 IST
Last Updated 28 ಫೆಬ್ರುವರಿ 2024, 5:01 IST
ಮುಂಡರಗಿ ತಾಲ್ಲೂಕಿನ ಬರದೂರು ಗ್ರಾಮದ ಅಂಗನವಾಡಿ ಕೇಂದ್ರದ ಮುಂದೆ ಸಂಗ್ರಹವಾಗಿರುವ ಕಸ, ಕಡ್ಡಿ ಹಾಗೂ ಚರಂಡಿ ನೀರು
ಮುಂಡರಗಿ ತಾಲ್ಲೂಕಿನ ಬರದೂರು ಗ್ರಾಮದ ಅಂಗನವಾಡಿ ಕೇಂದ್ರದ ಮುಂದೆ ಸಂಗ್ರಹವಾಗಿರುವ ಕಸ, ಕಡ್ಡಿ ಹಾಗೂ ಚರಂಡಿ ನೀರು   

ಮುಂಡರಗಿ: ತಾಲ್ಲೂಕಿನ ಮೇವುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದೂರು ಗ್ರಾಮದಲ್ಲಿ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ, ಸಾರ್ವಜನಿಕರು ಬಳಸಿದ ಗಲೀಜು ನೀರು ಹರಿದು ಹೋಗುವುದಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದೆ ಗ್ರಾಮದ ಜನರು ಹಲವು ದಶಕಗಳಿಂದ ಪರದಾಡುತ್ತಿದ್ದಾರೆ.

ತಾಲ್ಲೂಕು ಕೇಂದ್ರ ಸ್ಥಳದಿಂದ ಕೇವಲ ಐದು ಕಿ.ಮೀ. ದೂರದಲ್ಲಿರುವ ಬರದೂರು ಗ್ರಾಮವು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮಸ್ಥರು ಹಲವಾರು ಸಮಸ್ಯೆಗಳ ನಡುವೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಾ ದಿನಗಳೆಯುತ್ತಿದ್ದಾರೆ.

ಗ್ರಾಮವು ಬೇಕಾಬಿಟ್ಟಿಯಾಗಿ ನಿರ್ಮಾಣವಾಗಿದ್ದು, ಈಗಲೂ ಅದಕ್ಕೆ ಒಂದು ನಿಶ್ಚಿತ ರೂಪ ಕೊಡುವುದು ಅಧಿಕಾರಿಗಳಿಗೆ ಕಷ್ಟಸಾಧ್ಯವಾಗಿದೆ. ಗ್ರಾಮದಲ್ಲಿ ಎಲ್ಲಂದರಲ್ಲಿ ಇಕ್ಕಟ್ಟಾದ ಮನೆಗಳನ್ನು ನಿರ್ಮಿಸಿರುವುದರಿಂದ ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ಹಾಗೂ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ತೀವ್ರ ತೊಂದೆಯಾಗಿದೆ.

ADVERTISEMENT

ಬರದೂರು ಗ್ರಾಮವು ಮುಂಡರಗಿ-ಗದಗ ರಾಜ್ಯ ಹೆದ್ದಾರಿ ಪಕ್ಕದಲ್ಲಿ (ಅರಬಾವಿ-ಚಳ್ಳಕೇರಿ ರಸ್ತೆ) ಹಾಯ್ದು ಹೋಗಿದ್ದು, ಸುಮಾರು 3,600 ಜನಸಂಖ್ಯೆ ಹೊಂದಿದೆ. ಗ್ರಾಮದ ಒಳಭಾಗವು ತುಂಬಾ ಕಿರಿದಾದ ಮತ್ತು ಇಕ್ಕಟ್ಟಾದ ರಸ್ತೆಗಳನ್ನು ಒಳಗೊಂಡಿದೆ. ಬಹುತೇಕ ರಸ್ತೆಗಳು ಟ್ರ್ಯಾಕ್ಟರ್, ಕಾರು ಹಾಗೂ ಮತ್ತಿತರ ನಾಲ್ಕು ಚಕ್ರದ ವಾಹನಗಳು ಸಂಚರಿಸಲು ಬಾರದಷ್ಟು ಕಿರಿದಾಗಿವೆ. ಇದರಿಂದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ವಾಹನ ಹಾಗೂ ಮತ್ತಿತರ ವಾಹನಗಳು ಊರಿನ ಒಳಗೆ ಪ್ರವೇಶಿಸದಂತಾಗಿವೆ.

ರಸ್ತೆಗಳು ಅಗಲವಾಗಿ ಮತ್ತು ನೇರವಾಗಿ ಇಲ್ಲದ್ದರಿಂದ ರಸ್ತೆಯ ಅಕ್ಕಪಕ್ಕದಲ್ಲಿ ಚರಂಡಿಗಳನ್ನು ನಿರ್ಮಿಸಲು ಬಾರದಂತಾಗಿದೆ. ಹೀಗಾಗಿ ಗ್ರಾಮಸ್ಥರು ಬಳಸಿದ ಗಲೀಜು ನೀರು ರಸ್ತೆ ಮಧ್ಯದಲ್ಲಿ ಹರಿದು ಹೋಗಬೇಕಾಗಿದೆ. ಕೆಲವು ರಸ್ತೆಗಳಲ್ಲಿ ಗಲೀಜು ನೀರು ರಸ್ತೆಯ ಮಧ್ಯದಲ್ಲಿ ಸಂಗ್ರಹವಾಗುತ್ತದೆ. ಇದರಿಂದಾಗಿ ಗ್ರಾಮದಲ್ಲಿ ಸೊಳ್ಳೆ ಹಾಗೂ ಮತ್ತಿತರ ಕ್ರಿಮಿಕೀಟಗಳು ಹೆಚ್ಚಾಗಿದ್ದು, ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ಗ್ರಾಮದಲ್ಲಿ ಬಹುತೇಕ ನಳಗಳಿಗೆ ಟ್ಯಾಪ್‌ಗಳನ್ನು ಅಳವಡಿಸದೆ ಇರುವುದರಿಂದ ನಿತ್ಯ ಅಪಾರ ಪ್ರಮಾಣದ ನೀರು ಹರಿದು ರಸ್ತೆ ಪಾಲಾಗುತ್ತಲಿದೆ. ಜೊತೆಗೆ ಗ್ರಾಮಸ್ಥರು ಬಳಸಿದ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳಿಲ್ಲದ್ದರಿಂದ ಗಲೀಜು ನೀರು ಗ್ರಾಮದ ಅಂಗನವಾಡಿ ಕೇಂದ್ರದ ಮುಂದೆ ಸಂಗ್ರಹವಾಗತೊಡಗಿದೆ. ಅಪಾರ ಪ್ರಮಾಣದ ಗಲೀಜು ನೀರು ಹಾಗೂ ಕಸಕಡ್ಡಿ ಕೇಂದ್ರದ ಮುಂದೆ ಸಂಗ್ರಹವಾಗಿದ್ದು, ಮಕ್ಕಳು ಅಂತಹ ವಾತಾವರಣದಲ್ಲಿಯೇ ಶಾಲೆ ಕಲಿಯಬೇಕಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮದ ಪಕ್ಕದ ಕಲ್ಲಿನ ಕ್ವಾರಿಯಲ್ಲಿ ಸಣ್ಣ ಕೆರೆಯೊಂದಿದ್ದು, ಅದಕ್ಕೆ ಸುತ್ತಲೂ ಬೇಲಿ ನಿರ್ಮಿಸಿ ಅದಕ್ಕೆ ಸೂಕ್ತ ರಕ್ಷಣೆ ನೀಡಬೇಕಿದೆ. ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮದ ಸುತ್ತಲೂ ಗ್ರಾಮಸ್ಥರು ಕಸ ಚೆಲ್ಲುತ್ತಿದ್ದಾರೆ. ಕೆಲವರು ರಸ್ತೆಯ ಪಕ್ಕದಲ್ಲಿ ದನ, ಕರುಗಳನ್ನು ಕಟ್ಟಿ, ತಿಪ್ಪೆಗಳನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಗ್ರಾಮದ ವಾತಾವರಣ ಹಾಳಾಗುತ್ತಿದ್ದು, ಗ್ರಾಮ ಪಂಚಾಯ್ತಿಯವರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂಡರಗಿ ತಾಲ್ಲೂಕಿನ ಬರದೂರು ಗ್ರಾಮದ ರಸ್ತೆಗಳ ಮಧ್ಯದಲ್ಲಿ ಸಂಗ್ರಹವಾಗಿರುವ ಗಲೀಜು ನೀರು
ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ನಿತ್ಯ ಅಪಾರ ಪ್ರಮಾಣದ ಗಲೀಜು ನೀರು ಸಂಗ್ರಹವಾಗುತ್ತಿದ್ದು ಗ್ರಾಮ ಪಂಚಾಯ್ತಿಯವರು ಅದಕ್ಕೆ ಶಾಶ್ವತ ಪರಿಹಾರ ನೀಡಬೇಕು. ಮಕ್ಕಳು ಸ್ವಚ್ಛವಾದ ವಾತಾವರಣದಲ್ಲಿ ಶಾಲೆ ಕಲಿಯುವಂತಾಗಬೇಕು
–ಮೌನೇಶ ಬಡಿಗೇರ, ಬರದೂರ ಗ್ರಾಮಸ್ಥ
ಗ್ರಾಮದಲ್ಲಿರುವ ಕೆಲವು ಚರಂಡಿಗಳನ್ನು ಹಾಗೂ ರಸ್ತೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಸಾಧ್ಯವಿರುವ ಭಾಗಗಳಲ್ಲಿ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
–ಸಂತೋಷ ಹೂಗಾರ, ಪಿಡಿಒ ಮೇವುಂಡಿ ಗ್ರಾಮ ಪಂಚಾಯ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.