ADVERTISEMENT

ಗಜೇಂದ್ರಗಡ: ಸ್ವಚ್ಛತೆ ಕೊರತೆ ಎದುರಿಸುತ್ತಿರುವ ರಾಮಾಪುರ

ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ

ಶ್ರೀಶೈಲ ಎಂ.ಕುಂಬಾರ
Published 6 ನವೆಂಬರ್ 2024, 4:22 IST
Last Updated 6 ನವೆಂಬರ್ 2024, 4:22 IST
ಗಜೇಂದ್ರಗಡ ಸಮೀಪದ ರಾಮಾಪುರ ಗ್ರಾಮದಲ್ಲಿ ರಸ್ತೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೇ ನಿಂತಿರುವುದು
ಗಜೇಂದ್ರಗಡ ಸಮೀಪದ ರಾಮಾಪುರ ಗ್ರಾಮದಲ್ಲಿ ರಸ್ತೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೇ ನಿಂತಿರುವುದು   

ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮದ ಹಲವು ಓಣಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಇದರಿಂದ ಗ್ರಾಮಸ್ಥರಿಗೆ ಸೊಳ್ಳೆ ಕಾಟ, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಪಕ್ಕದ ರಸ್ತೆ, ಪ್ರಭುಲಿಂಗನ ಮಠದ ಹತ್ತಿರದ ಸಿ.ಸಿ ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಶಾಲೆಯ ಮುಂದಿನ ಚರಂಡಿ ಹಾಗೂ ಚರಂಡಿ ಮೇಲಿನ ಸಿಡಿ ಶಿಥಿಲಗೊಂಡಿವೆ. ಸರ್ಕಾರಿ ಪ್ರಾಥಮಿಕ ಶಾಲೆ ಸುತ್ತಲಿನ ಹೊಸ ಬಡಾವಣೆಯಲ್ಲಿ ಮೂಲಸೌಲಭ್ಯಗಳ ಕೊರತೆಯಿದ್ದು, ಚರಂಡಿಯಲ್ಲಿ ಹೂಳು ತುಂಬಿಕೊಂಡು ಆಪು ಬೆಳೆದಿದೆ. ಗ್ರಾಮದಲ್ಲಿ ಜನರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ಸೊಳ್ಳೆ ಕಾಟ ಹೆಚ್ಚಿದೆ. ಸಾಂಕ್ರಾಮಿಕ ರೋಗದ ಭೀತಿಯೂ ಜನರಲ್ಲಿ ಆವರಿಸಿದೆ.

‘ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿನ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಿಸಿಲ್ಲ. ಬಡಾವಣೆಯಲ್ಲಿ ಅಲ್ಲಲ್ಲಿ ಮಳೆ ನೀರು, ಕೊಳಚೆ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿಯವರು ಪರಿಹಾರ ಒದಗಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ADVERTISEMENT

‘ಗ್ರಾಮದಲ್ಲಿ ಆಗಾಗ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಹೊಸ ಬಡಾವಣೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ದೊಡ್ಡ ಕಾಮಗಾರಿಗಳನ್ನು ನಡೆಸಲು ಗ್ರಾಮ ಪಂಚಾಯಿತಿಯಲ್ಲಿ ಹಣಕಾಸಿನ ತೊಂದರೆಯಿದೆ’ ಎಂದು ರಾಮಾಪುರ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಜಗೌಡ ಗೌಡರ ತಿಳಿಸಿದರು.

ಗಜೇಂದ್ರಗಡ ಸಮೀಪದ ರಾಮಾಪುರ ಗ್ರಾಮದ ಚರಂಡಿಯಲ್ಲಿ ಹೂಳು ತುಂಬಿಕೊಂಡು ಆಪು ಬೆಳೆದಿರುವುದು

ಚರಂಡಿ ದುರಸ್ತಿಗೆ ಕ್ರಮ

ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಏಳು ಗ್ರಾಮಗಳು ಒಳಪಡುತ್ತವೆ. ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ರಾಮಾಪುರ ಗ್ರಾಮದ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿರುವುದರಿಂದ ಮುಖ್ಯ ಚರಂಡಿ ನೀರು ಹರಿದು ಹೋಗಲು ತೊಂದರೆಯಾಗಿದೆ. ಹಂತ ಹಂತವಾಗಿ ಚರಂಡಿಗಳ ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ರಾಮಾಪುರ ಗ್ರಾಮ ಪಂಚಾಯಿತಿ ಪಿಡಿಒ ಬಿ.ಎನ್. ಇಟಗಿಮಠ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.