ADVERTISEMENT

ಶಿರಹಟ್ಟಿ: ಅನಾರೋಗ್ಯ ಪೀಡಿತ ಆಸ್ಪತ್ರೆಗಳಿಗೆ ಬೇಕಿದೆ ಚಿಕಿತ್ಸೆ!

ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಚಿಕಿತ್ಸೆ: ಸಣ್ಣ ಚಿಕಿತ್ಸೆಗೂ ಜಿಮ್ಸ್‌ಗೆ ಸಾಗ ಹಾಕುವ ವೈದ್ಯರು, ಔಷಧಿಗೂ ಪರದಾಟ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 7:00 IST
Last Updated 7 ಅಕ್ಟೋಬರ್ 2024, 7:00 IST

ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯ ಹೊರನೋಟ

ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯ ಹೊರನೋಟ

ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಿರಹಟ್ಟಿ ತಾಲ್ಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ADVERTISEMENT

‘ಶಿರಹಟ್ಟಿ ಮೀಸಲು ಮತಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿರುವ ಡಾ.ಚಂದ್ರು ಲಮಾಣಿ ಶಾಸಕರಾಗುವುದಕ್ಕೂ ಮುನ್ನ ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ಆಡಳಿತ ಅಧಿಕಾರಿಯಾಗಿದ್ದರು. ಇವರು ನಮ್ಮ ಪ್ರತಿನಿಧಿಯಾದರೆ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸರಿಪಡಿಸುತ್ತಾರೆ ಎಂಬ ಆಸೆಯೊಂದಿಗೆ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಗೆದ್ದ ನಂತರ ಅವರು ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆಗಳನ್ನೇ ಮರೆತಿದ್ದಾರೆ’ ಎಂದು ಜನರು ದೂರಿದ್ದಾರೆ.

‘ತಾಲ್ಲೂಕಿನ ಬಡ ರೋಗಿಗಳು ಚಿಕಿತ್ಸೆಗೆಂದು ನಿತ್ಯ ತಾಲ್ಲೂಕು ಆಸ್ಪತ್ರೆಗೆ ಬರುತ್ತಿದ್ದು, ಆಸ್ಪತ್ರೆಯಲ್ಲಿನ ವೈದ್ಯರು ಅವರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸಣ್ಣ ಅಪಘಾತ ಸೇರಿದಂತೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವಂತಿದ್ದರೂ ಅವರನ್ನು ವಿನಾಕಾರಣ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇಲ್ಲವೇ, ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲಿ ಇಬ್ಬರು, ಮೂವರು ರೋಗಿಗಳನ್ನು ಒಟ್ಟಿಗೆ ಕರೆದೊಯ್ಯುತ್ತಾರೆ‘ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಎಬಿಆರ್‌ಕೆ ಅನುದಾನ ಬಳಕೆ ವಿಫಲ: ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಅಡಿಯಲ್ಲಿ ಮಾರಣಾಂತಿಕ ಕಾಯಿಲೆಗಳ ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಬಹುದು. ಈ ಸೌಲಭ್ಯಕ್ಕೆ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳ ಶಿಫಾರಸು ಪತ್ರ ಬೇಕಿದ್ದು, ಇದು ಸಿಗುತ್ತಿಲ್ಲ. ವಿನಾಕಾರಣ ರೋಗಿಗಳನ್ನು ಸತಾಯಿಸಲಾಗುತ್ತದೆ ಎಂಬ ದೂರುಗಳು ಕೂಡ ಇವೆ.

ಅಲ್ಲದೇ ಸಹಜ ಹೆರಿಗೆಯ ಸ್ತ್ರೀ ರೋಗಿಗಳನ್ನು ಹೊರತುಪಡಿಸಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ಪ್ರತಿಯೊಬ್ಬ ರೋಗಿಯ ಆರೈಕೆಗೆ ಸರ್ಕಾರ ಒಂದು ದಿನಕ್ಕೆ ₹900 ಹಣ ನೀಡುತ್ತದೆ. ಹೀಗೆ ಒಂದು ತಿಂಗಳಿಗೆ ಸುಮಾರು 200ರಿಂದ 250 ರೋಗಿಗಳು ದಾಖಲಾಗುತ್ತಾರೆ. ಇದರಿಂದ 3 ಇಲ್ಲವೇ 4 ತಿಂಗಳಿಗೊಮ್ಮೆ ಲಕ್ಷಾಂತರ ಹಣ ಬಿಡುಗಡೆಯಾಗುತ್ತಿದ್ದರೂ ಅದು ಅಭಿವೃದ್ಧಿಗೆ ಬಳಕೆ ಆಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ.

ಕೇವಲ ದಾಖಲೆಗಳಲ್ಲಿ ಔಷಧಿಗಳು: ಸ್ಥಳೀಯ ತಾಲ್ಲೂಕು ಕೇಂದ್ರಕ್ಕೆ ಒಂದು ತಿಂಗಳಿಗೊಮ್ಮೆ ಇಲ್ಲವೇ ತಿಂಗಳಲ್ಲಿ ಎರಡು ಬಾರಿ ಔಷಧಿಗಳ ಬೇಡಿಕೆ ಸಲ್ಲಿಸಲಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಔಷಧಿಗಳು ಪೂರೈಕೆ ಆಗುತ್ತಿರುವುದು ಕೇವಲ ದಾಖಲೆಗಳಲ್ಲಿ ಮಾತ್ರ. ಸಾಕಷ್ಟು ಔಷಧಿ ಪೂರೈಕೆಯಾಗುತ್ತಿದ್ದರೂ ರೋಗಿಗಳನ್ನು ಮಾತ್ರ ಖಾಸಗಿ ಮೆಡಿಕಲ್ ಸ್ಟೋರ್‌ಗೆ ಕಳುಹಿಸುತ್ತಿದ್ದಾರೆ ಎಂದು ರೋಗಿಗಳು ಆಕ್ರೋಶ ಹೊರಹಾಕಿದ್ದಾರೆ.

‘ಹೆರಿಗೆಗೆ ಬರುವ ಗರ್ಭಿಣಿಯರಿಂದ ಹಣ ತೆಗೆದುಕೊಳ್ಳುವುದರ ಬಗ್ಗೆ ಸಾಕಷ್ಟು ಸಾರಿ ಹೇಳಿದರು ಅದು ನಿಂತಿಲ್ಲ. ಹತ್ತು ವರ್ಷಗಳಿಂದ  ಇದೇ ಆಸ್ಪತ್ರೆಯಲ್ಲಿರುವ ಕೆಲವರು ಆಸ್ಪತ್ರೆಯ ಔಷಧಿಗಳನ್ನು ಹೊರಗಡೆ ಮಾರಾಟ ಮಾಡುತ್ತಾರೆ. ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ಮಾಡುವ ಸಿಬ್ಬಂದಿ ಸರ್ಕಾರಿ ಆಸ್ಪತ್ರೆಯ ಎದುರುಗಡೆಯೇ ಖಾಸಗಿ ರಕ್ತ ತಪಾಸಣೆ ಕೇಂದ್ರ ನಡೆಸುತ್ತಾರೆ. ಈ ಬಗ್ಗೆ ಹಲವಾರು ಬಾರಿ ಮೇಲಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಆರೋಗ್ಯ ರಕ್ಷಾ ಸಮಿತಿ ಮಾಜಿ ಸದಸ್ಯ ಈರಣ್ಣ ಕೋಟಿ ಆರೋಪ ಮಾಡಿದ್ದಾರೆ.

ಶಿರಹಟ್ಟಿ ತಾಲ್ಲೂಕಿನಲ್ಲಿ ಹದಗೆಟ್ಟಿರುವ ಆರೋಗ್ಯ ವ್ಯವಸ್ಥೆಗೆ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮುತುವರ್ಜಿವಹಿಸಿ ಚಿಕಿತ್ಸೆ ನೀಡಬೇಕು. ಬಡಜನರಿಗೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ವೈದ್ಯರು ಹಾಗೂ ಸಿಬ್ಬಂದಿ ಕೊರತೆ

ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯಲ್ಲಿ ಎಲುಬು-ಕೀಲು ತಜ್ಞ, ಅರವಳಿಕೆ ತಜ್ಞ, ಚಿಕ್ಕಮಕ್ಕಳ ತಜ್ಞರು ಸೇರಿದಂತೆ ಹಲವಾರು ವೈದ್ಯರ ಕೊರತೆ ಇದೆ. ಅಲ್ಲದೇ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳಡಿಯಲ್ಲಿ ಕಾರ್ಯನಿರ್ವಹಿಸುವ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಕೂಡ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಹೆಬ್ಬಾಳ ಪ್ರಾಥಮಿಕ ಉಪಕೇಂದ್ರದ ವ್ಯಾಪ್ತಿಯ ಹೊಳೆಇಟಗಿ, ಕೊಗನೂರು, ವಡವಿ,‌ ಕೊಂಚಿಗೇರಿ ಸೇರಿದಂತೆ ಬೆಳ್ಳಟ್ಟಿ ಎರಡು ಉಪ ಕೇಂದ್ರದ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ಇಲ್ಲ ಕಾರಣ, ಸಾರ್ವಜನಿಕರಿಗೆ ಆರೋಗ್ಯ ಸೇವೆ ಸಿಗುತ್ತಿಲ್ಲ. ‘ಆಸ್ಪತ್ರೆಗೆ ಬರುವ ರೋಗಿಗಳ ಜತೆಗೆ ಸಿಬ್ಬಂದಿ ಹಾಗೂ ವೈದ್ಯರು ಸರಿಯಾಗಿ ನಡೆದುಕೊಳ್ಳುವುದಿಲ್ಲ. ಉಚಿತ ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುವ ಬಡರೋಗಿಗಳನ್ನು ಔಷಧಿಗಾಗಿ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೇ ಹೆರಿಗೆಗೆಂದು ಬರುವ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೆರಿಗೆಯಾದ ಬಾಣಂತಿಯರಿಂದ ಹಣ ಕಿತ್ತುಕೊಳ್ಳುವ ಕೆಟ್ಟ ಪ್ರವೃತ್ತಿ ಸರ್ಕಾರಿ ಆಸ್ಪತ್ರೆಗಳಲ್ಲಿದೆ. ಸಿ–ಸೆಕ್ಷನ್‌ ಮೂಲಕ ಹೆರಿಗೆಗೆ ಒಳಪಡುವ ರೋಗಿಗಳ ಕಡೆಯಿಂದ ಅರವಳಿಕೆ ತಜ್ಞರ ನೆಪದಲ್ಲಿ ₹3000 ತೆಗೆದುಕೊಳ್ಳುತ್ತಾರೆ’ ಎಂದು ರೋಗಿಗಳ ಸಂಬಂಧಿಕರು ಆರೋಪ ಮಾಡಿದ್ದಾರೆ.

100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ?

ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಮೇಲ್ದರ್ಜೆಗೇರಿಸಬೇಕು ಎಂಬುದು ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದೆ. ಜನರ ಈ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಲವಾರು ಸಂಘಟನೆಗಳು ಮನವಿ ಮಾಡುತ್ತಾ ಬಂದಿವೆ. ಆದರೆ, ಹಲವಾರು ವರ್ಷಗಳಿಂದ ಶಿರಹಟ್ಟಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಸಕರು ಸೇರಿದಂತೆ ಸಂಸದ, ವಿಧಾನ ಪರಿಷತ್ ಸದಸ್ಯ ಹೀಗೆ ಯಾರೊಬ್ಬರೂ ಸಮಸ್ಯೆ ಬಗೆಹರಿಸಲು ಗಮನ ಹರಿಸಿಲ್ಲ. ಸ್ಥಳೀಯರ ಹೋರಾಟದ ಫಲವಾಗಿ ಸದ್ಯ 100 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ನಿವೇಶನ ಖರೀದಿಸಲಾಗಿದೆ. ಇನ್ನು ಆಸ್ಪತ್ರೆ ಕಟ್ಟಡ ಕಾಮಗಾರಿ ಯಾವಾಗ ಪ್ರಾರಂಭವಾಗುತ್ತದೆಯೋ ಎಂದು ಜನರು ಕಾಯುತ್ತಿದ್ದಾರೆ.

ಶಿರಹಟ್ಟಿ ತಾಲ್ಲೂಕಿನ ಗ್ರಾಮೀಣ ಭಾಗದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ಕೊರತೆ ಇದ್ದು, ಭರ್ತಿ ಮಾಡುವಂತೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು
ಸುಬಾಸ ದಾಯಗೊಂಡ, ತಾಲ್ಲೂಕು ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.