ADVERTISEMENT

ರೋಣ ಬಸ್ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ: ರಾತ್ರಿ 9ರ ನಂತರ ಬಸ್‌ಗಳ ಸೌಲಭ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 5:25 IST
Last Updated 4 ನವೆಂಬರ್ 2024, 5:25 IST
ರೋಣ ನಗರದ ಬಸ್ ನಿಲ್ದಾಣ
ರೋಣ ನಗರದ ಬಸ್ ನಿಲ್ದಾಣ   

ರೋಣ: ತಾಲ್ಲೂಕಿನ ಅಭಿವೃದ್ಧಿಯು ಆ ತಾಲ್ಲೂಕು ಹೊಂದಿರುವ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯ ಮೇಲೆ ಆಧಾರಿತವಾಗಿರುತ್ತದೆ. ತಾಲ್ಲೂಕು ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದಿದೆ ಎಂಬ ಮಾತು ಹಲವು ದಶಕಗಳಿಂದ ಕೇಳಿ ಬರುತ್ತಿದ್ದು; ಇದಕ್ಕೆ ಪ್ರಮುಖ ಕಾರಣ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯ ಕೊರತೆಯೂ ಒಂದಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಿಂತ ಮೊದಲು ಇದ್ದ ಮೈಸೂರು ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಕಾಲಾವಧಿಯಲ್ಲಿಯೇ ರೋಣ ನಗರಕ್ಕೆ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಅದಕ್ಕೂ ಪೂರ್ವದಲ್ಲಿಯೇ ರೋಣ ನಗರದ ಅಂದಿನ ಜನಪ್ರಿಯ ಉದ್ಯಮಿ ವೀರಪ್ಪಜ್ಜ ಬಸರಿಗಿಡದ ಅವರು ತಮ್ಮ ಖಾಸಗಿ ಕಂಪನಿಯ ಬಸ್ ವ್ಯವಸ್ಥೆ ಒದಗಿಸಿದ್ದರು. ಬಹು ಹಿಂದೆಯೇ ಬಸ್ ಸಂಪರ್ಕ ಪಡೆದ ಪಟ್ಟಣವಾದರೂ ಇಂದಿನವರೆಗೆ ಸಾರಿಗೆ ವ್ಯವಸ್ಥೆಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿಲ್ಲ ಎಂಬುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ಪ್ರಸ್ತುತ ಬಸ್ ಕಾರ್ಯಾಚರಿಸುತ್ತಿರುವ ರೋಣ ಬಸ್‌ ನಿಲ್ದಾಣ 2014ರಲ್ಲಿ ಉದ್ಘಾಟನೆಯಾಗಿದ್ದು, ಇಂದಿಗೂ ಹಲವು ಸಮಸ್ಯೆಗಳಿಂದ ಬಳಲುತ್ತಿದೆ.

ADVERTISEMENT

ಸಮರ್ಪಕ ಬಸ್ ವ್ಯವಸ್ಥೆ ಇಲ್ಲ: ರೋಣ ಪಟ್ಟಣಕ್ಕೆ ಬರಲು ಜನರಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದು ದೊಡ್ಡ ತೊಂದರೆಯಾಗಿದೆ. ರೋಣ ಪಟ್ಟಣಕ್ಕೆ ಗದಗ ನಗರದಿಂದ ರಾತ್ರಿ 9.15, ಗಜೇಂದ್ರಗಡದಿಂದ 8.30, ಬದಾಮಿಯಿಂದ 8, ನವಲಗುಂದದಿಂದ 8.30 ಹಾಗೂ ನರಗುಂದದಿಂದ ರಾತ್ರಿ 8.30ಕ್ಕೆ ಕೊನೆಯ ಬಸ್ ಇದ್ದು, ತದನಂತರ ರೋಣ ಪಟ್ಟಣಕ್ಕೆ ಬರಲು ಯಾವುದೇ ಬಸ್‌ ಸೌಲಭ್ಯ ಇಲ್ಲ. ಸಾರ್ವಜನಿಕರು ರೋಣಕ್ಕೆ ಬರಲು ಖಾಸಗಿ ವಾಹನಗಳ ಮೊರೆ ಹೋಗಬೇಕು. ಖಾಸಗಿ ವಾಹನಗಳವರು ‌ಮನಬಂದಂತೆ ಹಣ ಪೀಕುತ್ತಾರೆ ಎಂಬುದು ಜನರ ಆರೋಪವಾಗಿದೆ.

ಬಸ್ ನಿಲ್ದಾಣದಲ್ಲಿಯೇ ಅವ್ಯವಸ್ಥೆ: ರೋಣ ಬಸ್‌ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ. ಇಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ರಾತ್ರಿ 9ರ ನಂತರ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಕೂಡ ಮುಚ್ಚಲಾಗುತ್ತದೆ. ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವ್ಯಾಪಾರಿಗಳು ಕುಳಿತು ಹಣ್ಣು ಹೂ ವ್ಯಾಪಾರ ಮಾಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. 

ಬೇರೆ ಊರುಗಳಿಗೆ ತೆರಳಲು ಮಹಿಳೆಯರು ಬಸ್ ನಿಲ್ದಾಣದಲ್ಲಿ ಕುಳಿತರೆ ರಾತ್ರಿ ಸಮಯದಲ್ಲಿ ಕುಡುಕರ ಹಾವಳಿ ಇದೆ. ಮಂಗ ಮತ್ತು ಬೀದಿನಾಯಿಗಳ ಹಾವಳಿಗೆ ಪ್ರಯಾಣಿಕರು ಬಸವಳಿದಿದ್ದಾರೆ. ಖರೀದಿಸಿದ ತಿಂಡಿ–ತಿನಿಸುಗಳು ನಾಯಿ ಮತ್ತು ಮಂಗಗಳ ಪಾಲಾಗುತ್ತಿದ್ದು ಇವುಗಳ ಹಾವಳಿ ನಿಯಂತ್ರಿಸುವಲ್ಲಿ ಸಾರಿಗೆ ಸಂಸ್ಥೆ ವಿಫಲವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ತಾಲ್ಲೂಕಿನ ಇನ್ನೆರಡು ಪ್ರಮುಖ ಬಸ್ ನಿಲ್ದಾಣಗಳಾದ ಹೊಳೆಆಲೂರು ಮತ್ತು ಬೆಳವಣಿಕಿ ಗ್ರಾಮಗಳ ಬಸ್ ನಿಲ್ದಾಣಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಪಾಳು ಬಿದ್ದ ಹಳೆ ಡಿಪೊ: ಬಸ್ ನಿಲ್ದಾಣಕ್ಕೆ ಹೊಂದಿಕೊಂಡೇ ಇರುವ ಹಳೆಯ ಡಿಪೊ ವಿಶಾಲವಾದ ಭೂಮಿ ಹೊಂದಿದ್ದರೂ ಅದನ್ನು ಪಾಳುಗೆಡವಲಾಗಿದೆ. ಸದ್ಯ ಅದನ್ನು ವಾಹನಗಳ ನಿಲುಗಡೆಗೆ ಬಳಸಲಾಗುತ್ತಿದೆ. ಕೆಲವು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸುತ್ತಿದ್ದು ಬಸ್ ಚಾಲಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದೆ. ಹಳೆಯ ಡಿಪೊ ಇರುವ ಜಾಗವನ್ನು ನಿಲ್ದಾಣಕ್ಕೆ ಬಳಸಿಕೊಂಡು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳುವ ಬಸ್ ಪ್ಲಾಟ್‌ಫಾರ್ಮ್‌ಗಳಾಗಿ ರೂಪಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಬಸ್ ನಿಲ್ದಾಣದ ಒಳಗಡೆ ಪ್ರವೇಶ ದ್ವಾರದ ಬಳಿ ಹಣ್ಣು ಹೂಗಳನ್ನು ಮಾರುತ್ತಿರುವ ವ್ಯಾಪಾರಸ್ಥರು
ರೋಣ ಬಸ್ ನಿಲ್ದಾಣದಲ್ಲಿಯ ಜನಜಂಗುಳಿ
ಪಾಳು ಬಿದ್ದಿರುವ ಹಳೆಯ ಬಸ್ ಡಿಪೊ
ರೋಣ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಕೊಳವೆಗಳು ಇರುವ ಸ್ಥಳ ಮಲಿನವಾಗಿದೆ
ರೋಣ ಬಸ್ ನಿಲ್ದಾಣದ ಆವರಣದಲ್ಲಿ ನಿಂತಿರುವ ತ್ಯಾಜ್ಯ ನೀರು
ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಿ ರೋಣ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದ್ದು ತಾಲ್ಲೂಕಿನ ಅಭಿವೃದ್ಧಿಯ ವೇಗ ಹೆಚ್ಚಿಸಲು ರೋಣ ನಗರದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು
-ಅಬ್ದುಲ್ ಸಾಬ್, ಹೊಸಮನಿ ಹಿರಿಯ ಸಾಮಾಜಿಕ ಕಾರ್ಯಕರ್ತ
ರೋಣ ಬಸ್‌ ನಿಲ್ದಾಣ 24/7 ಕಾರ್ಯ ನಿರ್ವಹಿಸಲಿ ರೋಣ ನಗರದ ಅಭಿವೃದ್ಧಿಗೆ ಸುಸಜ್ಜಿತ ಮತ್ತು ಸಮರ್ಪಕ ಸಂಚಾರ ವ್ಯವಸ್ಥೆ ಅಗತ್ಯವಾಗಿ ಬೇಕಿದ್ದು ದೇಶದ ಅತ್ಯುನ್ನತ ಸಾರಿಗೆ ವ್ಯವಸ್ಥೆ ಎಂದು ಹೆಸರು ಪಡೆದ ಕೆಎಸ್ಆರ್‌ಟಿಸಿ ನಗರದ ಬಸ್ ನಿಲ್ದಾಣವನ್ನು 24/7 ಬಸ್ ನಿಲ್ದಾಣವನ್ನಾಗಿ ಘೋಷಿಸಿ ನಿಲ್ದಾಣಕ್ಕೆ ಮೂಲಸೌಲಭ್ಯ ಕಲ್ಪಿಸಬೇಕು
-ವೆಂಕಣ್ಣ ಬಂಗಾರಿ, ರೋಣ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ
ರಾತ್ರಿ ವೇಳೆ ಬಸ್‌ಗಳ ಸಂಖ್ಯೆ ಹೆಚ್ಚಿಸಿ ರೋಣ ಬಸ್ ನಿಲ್ದಾಣ ಜಿಲ್ಲೆಯ ಪ್ರಮುಖ ನಿಲ್ದಾಣಗಳ ಪೈಕಿ ಒಂದಾಗಿದ್ದು ರಾತ್ರಿ 9ರ ನಂತರ ಜಿಲ್ಲಾ ಕೇಂದ್ರವಾದ ಗದಗ ನಗರದಿಂದ ಬಸ್ ವ್ಯವಸ್ಥೆ ಇಲ್ಲ. ಈ ಕಾರಣದಿಂದಾಗಿ ಫಸಲು ಮಾರಾಟ ಮಾಡಲು ಗದಗ ಎಪಿಎಂಸಿಗೆ ತೆರಳುವ ತಾಲ್ಲೂಕಿನ ಬಹುತೇಕ ರೈತರಿಗೆ ತೀವ್ರ ತೊಂದರೆಯಾಗಿದೆ. ರಾತ್ರಿ ವೇಳೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು
-ದೊಡ್ಡಬಸಪ್ಪ ನವಲಗುಂದ, ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ರೋಣ ತಾಲ್ಲೂಕು

Cut-off box - ಜನರು ಏನಂತಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.