ADVERTISEMENT

ಡಂಬಳ ಉಪ ಕೃಷಿ ಉತ್ಪನ್ನ ಮಾರುಕಟ್ಟೆ | ಸೌಕರ್ಯ ಕೊರತೆ: ರೈತರಿಗೆ ಸಂಕಷ್ಟ

ಲಕ್ಷ್ಮಣ ಎಚ್.ದೊಡ್ಡಮನಿ
Published 17 ಅಕ್ಟೋಬರ್ 2024, 5:25 IST
Last Updated 17 ಅಕ್ಟೋಬರ್ 2024, 5:25 IST
ಡಂಬಳದ ಉಪ ಕೃಷಿ ಉತ್ಪನ ಮಾರುಕಟ್ಟೆ ಆವರಣದಲ್ಲಿ ರೈತರು ಈರುಳ್ಳಿ ಸ್ವಚ್ಛಗೊಳಿಸಿದರು
ಡಂಬಳದ ಉಪ ಕೃಷಿ ಉತ್ಪನ ಮಾರುಕಟ್ಟೆ ಆವರಣದಲ್ಲಿ ರೈತರು ಈರುಳ್ಳಿ ಸ್ವಚ್ಛಗೊಳಿಸಿದರು   

ಡಂಬಳ: ಇಲ್ಲಿನ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿ ಮರೀಚಿಕೆಯಾಗಿದ್ದು, ವಿಶಾಲವಾದ ಆವರಣದಲ್ಲಿ ಮುಳ್ಳುಕಂಟಿಗಳು, ಕಸ, ತಿಪ್ಪೆಯೇ ಕಣ್ಣಿಗೆ ರಾಚುತ್ತದೆ. ಕೃಷಿ ಉತ್ಪನ್ನಗಳನ್ನು ಇದರ ನಡುವೆಯೇ ಹಾಕುವ ಪರಿಸ್ಥಿತಿ ಇದೆ.

ಡಂಬಳ ಸೇರಿದಂತೆ ಈ ಭಾಗದ ರೈತರು ಈರುಳ್ಳಿ, ಮೆಕ್ಕೆಜೋಳ, ಹೆಸರು, ಶೇಂಗಾ, ಬಿಳಿಜೋಳ, ಹತ್ತಿ, ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ. ಇವುಗಳ ಮಾರಾಟಕ್ಕೆ ಉಪಕೃಷಿ ಉತ್ಪನ್ನ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಆದರೆ, ಇಲ್ಲಿ ಸೂಕ್ತ ವ್ಯವಸ್ಥೆ ಹಾಗೂ ಸ್ವಚ್ಛತೆ ಇಲ್ಲದ ಕಾರಣ ರೈತರು ತೊಂದರೆ ಅನುಭವಿಸುವಂತಾಗಿದೆ.

‘ಮಾರುಕಟ್ಟೆ ಆವರಣದ ಸುತ್ತಲಿನ ರಸ್ತೆಯಲ್ಲಿ ತಗ್ಗು–ಗುಂಡಿಗಳೇ ಇವೆ. ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಪ್ರಯಾಸಪಡಬೇಕು. ಹಂದಿಗಳು ಹಾಗೂ ಜಾನುವಾರಗಳ ಕಾಟ ಹೆಚ್ಚಿದೆ. ಮಳೆ ಬಂದರೆ ರೈತರು ಪರಿಸ್ಥಿತಿ ಹೇಳತೀರದಾಗಿದೆ. ಮುಂಡರಗಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ’ ಎಂದು ರೈತ ಮುಖಂಡ ರುದ್ರಪ್ಪ ಕೊರ್ಲಗಟ್ಟಿ ಆರೋಪಿಸಿದರು.

ADVERTISEMENT

‘7 ಎಕರೆಗೂ ಹೆಚ್ಚು ಪ್ರದೇಶವಿದ್ದರು ಕೇವಲ ಎರಡು ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದೆ. ಡಂಬಳ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ರೈತರು ಕ್ವಿಂಟಲ್‌ಗಟ್ಟಲೆ ಮೆಕ್ಕೆಜೋಳ, ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಮಾರಾಟಕ್ಕೆ ಇಲ್ಲಿಗೆ ತರುತ್ತಾರೆ. ಅವರಿಂದ ವರ್ತಕರು ಖರೀದಿಸಿದ ಬೆಳೆಯನ್ನು ದಾಸ್ತಾನು ಮಾಡಲು ಸರಿಯಾದ ಸ್ಥಳವಿಲ್ಲ’ ಎಂದು ಸೋಮಶೇಖರ ಚಿಕರಡ್ಡಿ ತಿಳಿಸಿದರು.

‘ಈ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತದೆ. ಆದರೆ, ಆವರಣದ ಸುತ್ತ ಕಾಂಪೌಂಡ್‌ ನಿರ್ಮಿಸಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಮಂಜಯ್ಯಸ್ವಾಮಿ ಅರವಟಿಗಿಮಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.