ADVERTISEMENT

ಮೂಲ ಸೌಕರ್ಯಗಳಿಂದ ವಂಚಿತವಾದ ಪುರಸಭೆ ಉಮಾ ವಿದ್ಯಾಲಯದ ಶಾಲೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:15 IST
Last Updated 25 ಜುಲೈ 2024, 5:15 IST
ಲಕ್ಷ್ಮೇಶ್ವರ ಪುರಸಭೆ ಉಮಾ ವಿದ್ಯಾಲಯದ ಕಟ್ಟಡದ ಚಾವಣಿ ಕುಸಿದಿರುವ ನೋಟ
ಲಕ್ಷ್ಮೇಶ್ವರ ಪುರಸಭೆ ಉಮಾ ವಿದ್ಯಾಲಯದ ಕಟ್ಟಡದ ಚಾವಣಿ ಕುಸಿದಿರುವ ನೋಟ   

ಲಕ್ಷ್ಮೇಶ್ವರ: ಎರಡು ವರ್ಷ ಕಳೆದರೆ ಶತಮಾನೋತ್ಸವ ಆಚರಿಸಿಕೊಳ್ಳಲಿರುವ ಇಲ್ಲಿನ ಪುರಸಭೆ ಉಮಾ ವಿದ್ಯಾಲಯದ ಶಾಲೆಯು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ವಿದ್ಯಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಜೋರು ಮಳೆಯಾದರೆ ಸೋರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳಡಿ ನಡೆಯುತ್ತಿರುವ ರಾಜ್ಯದ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಪಟ್ಟಣದ ಉಮಾ ವಿದ್ಯಾಲಯವೂ ಒಂದಾಗಿದೆ. 1926ರಲ್ಲಿ ಖಾಸಗಿ ಕಟ್ಟಡದಲ್ಲಿ ಆರಂಭಗೊಂಡ ವಿದ್ಯಾಲಯವು 1962ರಲ್ಲಿ ಸ್ವಂತ ಕಟ್ಟಡದ ಭಾಗ್ಯ ಕಂಡಿತು. ಆಗಿನ ಗೃಹ ಮಂತ್ರಿ ಆರ್.ಎಂ.ಪಾಟೀಲ ಅವರಿಂದ ಉದ್ಘಾಟನೆಗೊಂಡಿತ್ತು.

ಅಂದಿನಿಂದ 62 ವರ್ಷಗಳಿಂದ ಒಂದೇ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ಇದೀಗ 2026ನೇ ಇಸ್ವಿಯಲ್ಲಿ ಈ ಶಾಲೆಯ ಶತಮಾನೋತ್ಸವ ಸಂಭ್ರಮ ಜರುಗಲಿದೆ. ಈ ಶಾಲೆಯಲ್ಲಿ ಮೊದಲಿನಿಂದಲೂ ಐದನೇ ತರಗತಿಯಿಂದ 10ನೇ ತರಗತಿವರೆಗೆ ವರ್ಗಗಳು ನಡೆಯುತ್ತಿವೆ. ಸಧ್ಯ ಈಗ 242 ಮಕ್ಕಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ADVERTISEMENT

ವಿದ್ಯಾರ್ಥಿಗಳಲ್ಲಿ ಆತಂಕ: ಸರಿಯಾದ ಕಾಳಜಿ ಇಲ್ಲದ್ದರಿಂದ ಶಾಲಾ ಕಟ್ಟಡ ಶಿಥಿಲಗೊಂಡು ಸೋರುತ್ತಿದೆ. ಅಲ್ಲದೆ ಕಟ್ಟಡದ ಚಾವಣಿ ಅಲ್ಲಲ್ಲಿ ಕುಸಿದು ಬೀಳುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಶಾಲಾ ಸಭಾಂಗಣದ ಚಾವಣಿ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಉಂಟಾಗಲಿಲ್ಲ. ಈಗಲೂ ಚಾವಣಿ ಕುಸಿಯುತ್ತಲೇ ಇದ್ದು ಯಾವಾಗ ಅನಾಹುತ ಸಂಭವಿಸುತ್ತದೆಯೋ ಗೊತ್ತಿಲ್ಲ.

ಮುಖ್ಯ ಶಿಕ್ಷಕರ ಕೊಠಡಿ ಸೇರಿದಂತೆ ಹೆಚ್ಚು ಕಡಿಮೆ ಎಲ್ಲ ಕೊಠಡಿಗಳು ಸೋರುತ್ತಿವೆ. ಇದರಿಂದಾಗಿ ಪಾಠ ಮಾಡುವ ಶಿಕ್ಷಕರಿಗೆ ಮತ್ತು ವಿದ್ಯೆ ಕಲಿಯುವ ಮಕ್ಕಳಿಗೆ ಸಮಸ್ಯೆಯಾಗಿದೆ. ಆಗಾಗ ಕಟ್ಟಡವನ್ನು ದುರಸ್ತಿ ಮಾಡಿಸುವ ಜವಾಬ್ದಾರಿ ಪುರಸಭೆಗೆ ಸೇರಿದ್ದು. ಆದರೆ ಈ ವಿಷಯದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

‘ಶಾಲೆ ಕಟ್ಟಡ ಶಿಥಿಲಗೊಳ್ಳುತ್ತಿದೆ. ಇನ್ನು ಇದೇ ಕಟ್ಟಡದಲ್ಲಿ ಪುರಸಭೆಗೆ ಸೇರಿದ ಸಂಯುಕ್ತ ಕಿರಿಯ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು ಅದರ ಕೊಠಡಿಗಳೂ ಸೋರುತ್ತಿವೆ. ಶಾಲೆಯ ಚಾವಣಿ ಕುಸಿದು ಬೀಳುತ್ತಿರುವ ವಿಷಯವನ್ನು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಮುಖ್ಯ ಶಿಕ್ಷಕ ಎಸ್.ಎಚ್. ಪೂಜಾರ ಹೇಳಿದರು.

ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ಉಮಾ ವಿದ್ಯಾಲಯ ಶಾಲಾ ಕಟ್ಟಡವನ್ನು ಪುರಸಭೆ ದುರಸ್ತಿ ಮಾಡಿಸಬೇಕು
ಬಿ.ಎಸ್. ಬಾಳೇಶ್ವರಮಠ ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ
ಸೋರುತ್ತಿರುವ ಪುರಸಭೆ ಉಮಾ ವಿದ್ಯಾಲಯ ಶಾಲೆ ಕೊಠಡಿಗಳನ್ನು ಸಾಮಾನ್ಯ ಖಾತೆಯ ಹಣದಲ್ಲಿ ದುರಸ್ತಿ ಮಾಡಿಲಾಗುವುದು
-ಮಹೇಶ ಹಡಪದ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.