ADVERTISEMENT

ಲಕ್ಷ್ಮೇಶ್ವರ | ಬಸ್ ಪ್ರಯಾಣ: ಬಲು ಹೈರಾಣ

ನಾಗರಾಜ ಎಸ್‌.ಹಣಗಿ
Published 28 ಅಕ್ಟೋಬರ್ 2024, 4:56 IST
Last Updated 28 ಅಕ್ಟೋಬರ್ 2024, 4:56 IST
ಲಕ್ಷ್ಮೇಶ್ವರದ ನಿಲ್ದಾಣದಲ್ಲಿ ಬಸ್ ಹತ್ತಲು ಮುಗಿ ಬಿದ್ದಿರುವ ಪ್ರಯಾಣಿಕರು
ಲಕ್ಷ್ಮೇಶ್ವರದ ನಿಲ್ದಾಣದಲ್ಲಿ ಬಸ್ ಹತ್ತಲು ಮುಗಿ ಬಿದ್ದಿರುವ ಪ್ರಯಾಣಿಕರು   

ಲಕ್ಷ್ಮೇಶ್ವರ: ಇಲ್ಲಿನ ಸಾರಿಗೆ ಘಟಕದಲ್ಲಿ ಸಾಕಷ್ಟು ಬಸ್‌ಗಳು ಇಲ್ಲ, ಇರುವ ಬಸ್‍ಗಳ ‘ಆರೋಗ್ಯ’ ಕೂಡ ಸರಿ ಇಲ್ಲ, ದುರಸ್ತಿಗೆ ಬಂದರೆ ವಾಹನ ಬಿಡಿಭಾಗಗಳು ಸಿಗುವುದಿಲ್ಲ, ಸರಿಯಾದ ವೇಳೆಗೆ ಬಸ್‍ಗಳು ಸಂಚರಿಸುವುದಿಲ್ಲ, ಅಗತ್ಯ ಇರುವಷ್ಟು ಸಿಬ್ಬಂದಿ ಕೂಡ ಇಲ್ಲ, ಇರುವ ಸಿಬ್ಬಂದಿ ನಡುವೆ ಹೊಂದಾಣಿಕೆ ಇಲ್ಲ. ನಾಲ್ಕು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಲಕ್ಷ್ಮೇಶ್ವರ ಸಾರಿಗೆ ಘಟಕದ ಚಿತ್ರಣ ಇದು...

– ಹೀಗೆ ಈ ಎಲ್ಲ ‘ಇಲ್ಲಗಳ’ ನಡುವೆಯೇ ಲಕ್ಷ್ಮೇಶ್ವರ ಸಾರಿಗೆ ಘಟಕ ಕಾರ್ಯನಿರ್ವಹಿಸುತ್ತಿರುವುದೇ ಅಚ್ಚರಿ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ದಿನದಿಂದ ದಿನಕ್ಕೆ ತಾಲ್ಲೂಕಿನ ಜನತೆಗೆ ಸಾರಿಗೆ ಬಸ್ ಪ್ರಯಾಣ ಎಂಬುದು ಹೈರಾಣವಾಗುತ್ತಿದೆ. ಹತ್ತು ಹಲವು ಕಾರಣಗಳಿಂದಾಗಿ ಘಟಕದಿಂದ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಮರೀಚಿಕೆ ಆಗಿದೆ. ನಲವತ್ತು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಘಟಕ ಆರಂಭದಲ್ಲಿ ಉತ್ತಮ ಸೇವೆ ಸಲ್ಲಿಸುವುದರೊಂದಿಗೆ ಹೆಚ್ಚು ಆದಾಯ ಗಳಿಸುವ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇದೀಗ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದು ಘಟಕ ಮುಚ್ಚುವ ಸ್ಥಿತಿಗೆ ಬಂದಿರುವುದು ದೌರ್ಭಾಗ್ಯವೇ ಸರಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

80ಕ್ಕೂ ಹೆಚ್ಚು ಶೆಡ್ಯೂಲ್‍ಗಳಿದ್ದ ಘಟಕದಲ್ಲಿ ಇದೀಗ ಅವುಗಳ ಸಂಖ್ಯೆ 64ಕ್ಕೆ ಕುಸಿದಿದೆ. ಇದಕ್ಕೆ ಮುಖ್ಯವಾಗಿ ಬಸ್ ಮತ್ತು ಅಗತ್ಯ ಸಿಬ್ಬಂದಿ ಕೊರತೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದಕ್ಕೆ ಇತರೆ ಕಾರಣಗಳೂ ಇವೆ.

ಸದ್ಯ ಘಟಕದಲ್ಲಿ 68 ಬಸ್‌ಗಳು ಇದ್ದು ಅವುಗಳಲ್ಲಿ ಬಹಳಷ್ಟು ಬಸ್‍ಗಳು ಸಾಕಷ್ಟು ಹಳೆಯದಾಗಿವೆ. 11 ಬಸ್‍ಗಳು 9 ಲಕ್ಷಕ್ಕಿಂತ ಹೆಚ್ಚು ಕಿ.ಮೀ. ಓಡಿವೆ. 14ರಿಂದ 15 ಲಕ್ಷ ಕಿ.ಮೀ. ಓಡಿದ 10 ಬಸ್‌ಗಳು ಮತ್ತು 15 ಲಕ್ಷಕ್ಕಿಂತ ಹೆಚ್ಚು ಕಿ.ಮೀ. ಸಂಚರಿಸಿದ 8 ಬಸ್‍ಗಳು ಇವೆ.

ತಾಲ್ಲೂಕು ಘೋಷಣೆ ನಂತರ ಲಕ್ಷ್ಮೇಶ್ವರದ ಹದಿನಾಲ್ಕು ಗ್ರಾಮ ಪಂಚಾಯಿತಿಗಳ 90ಕ್ಕೂ ಹೆಚ್ಚು ಹಳ್ಳಿಗಳಿಗೆ ಬಸ್ ಸಂಚಾರ ಕಲ್ಪಿಸಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲೆ ಇದೆ. ಅದರೊಂದಿಗೆ ಹುಬ್ಬಳ್ಳಿ, ಗದಗ, ಹಾವೇರಿ ಸೇರಿದಂತೆ ದೊಡ್ಡ ನಗರ ಮತ್ತು ಪಟ್ಟಣ ಪ್ರದೇಶಗಳಿಗೂ ಬಸ್ ಓಡಿಸಬೇಕಾಗಿದೆ.

ಲಕ್ಷ್ಮೇಶ್ವರದಿಂದ ಪ್ರತಿದಿನ ಶಾಲೆ– ಕಾಲೇಜುಗಳ ನೂರಾರು ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಹಾವೇರಿ, ಗದಗ, ಹುಬ್ಬಳ್ಳಿಗೆ ಹೋಗಿ ಬರುತ್ತಾರೆ. ಅಲ್ಲದೇ ತಾಲ್ಲೂಕಿನ ಹತ್ತಾರು ಗ್ರಾಮಗಳಿಂದ ನೂರಾರು ಶಾಲಾ ಮಕ್ಕಳು ಲಕ್ಷ್ಮೇಶ್ವರದ ಶಾಲೆ–ಕಾಲೇಜುಗಳಿಗೆ ಬರುತ್ತಾರೆ. ಇದರೊಂದಿಗೆ ಸಾವಿರಾರು ಜನರೂ ಬಂದು ಹೋಗುತ್ತಾರೆ. ಆದರೆ ಎಲ್ಲೆಡೆ ಬಸ್ ಓಡಿಸಲು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಅದರಲ್ಲೂ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಅನುಷ್ಠಾನದ ನಂತರ ಬಸ್ ಸಂಚಾರ ಸಮಸ್ಯೆ ಮತ್ತಷ್ಟು ಉಲ್ಭಣಿಸಿದೆ.

ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಬಸ್‍ನಲ್ಲಿ ಪ್ರಯಾಣಿಸಲು ಜನರು ಪರದಾಡುತ್ತಿದ್ದಾರೆ. ಆಸನಕ್ಕಾಗಿ ಪ್ರತಿದಿನ ಮಹಿಳಾ ಪ್ರಯಾಣಿಕರು ಹೊಡೆದಾಡಿಕೊಳ್ಳುತ್ತಲೇ ಇದ್ದಾರೆ. ಯೋಜನೆ ನಂತರ ಹೊಸ ಬಸ್‍ಗಳನ್ನು ಕೊಡಬೇಕಾಗಿತ್ತು. ಆದರೆ ಸರ್ಕಾರ ಇತ್ತ ಗಮನ ಹರಿಸಿಲ್ಲ.

ಬಸ್ ಬಾಗಲಿಗೆ ಜೋತು ಬಿದ್ದಿರುವ ಪ್ರಯಾಣಿಕರು

ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದು ಹಾಳಾಗಿವೆ. ಕೆಲವು ಕಡೆಗಳಲ್ಲಿ ದ್ವಿಚಕ್ರ ವಾಹನಗಳು ಸಂಚರಿಸಲೂ ಆಗದಷ್ಟರ ಮಟ್ಟಿಗೆ ರಸ್ತೆಗಳು ಹದಗೆಟ್ಟಿವೆ. ಸೂರಣಗಿಯಿಂದ ಬಾಲೆಹೊಸೂರು ಮೂಲಕ ಗುತ್ತಲಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಂತೂ ಗುಂಡಿಮಯವಾಗಿದೆ. ಹೆಜ್ಜೆ ಹೆಜ್ಜೆಗೂ ಬೃಹತ್ ಗಾತ್ರದ ತಗ್ಗುಗಳಿಂದಾಗಿ ಸರಿಯಾದ ಸಮಯಕ್ಕೆ ಬಸ್ ಸಂಚರಿಸಲು ಅಡ್ಡಿಯಾಗಿದೆ. ಎಲ್ಲ ಹಳ್ಳಿಗಳ ರಸ್ತೆಗಳ ಪರಿಸ್ಥಿತಿಯೂ ಇದೇ ಆಗಿದೆ.

ಮೊದಲೇ ಹಳೆಯದಾಗಿರುವ ಬಸ್‍ಗಳು ಇಂಥ ರಸ್ತೆಯಲ್ಲಿ ಸಂಚರಿಸುತ್ತಲೇ ಹಾಳಾಗುತ್ತಿವೆ. ಕಡೇ ಪಕ್ಷ ಬಸ್ ದುರಸ್ತಿ ಮಾಡಲು ಬಿಡಿಭಾಗಗಳು ಕೂಡ ಪೂರೈಕೆ ಆಗುತ್ತಿಲ್ಲ ಎಂಬ ಆರೋಪಗಳು ಇವೆ. ಈ ಎಲ್ಲ ಕಾರಣಗಳಿಂದಾಗಿ ಬಸ್ ಪ್ರಯಾಣ ಜನತೆಗೆ ಹೊರೆಯಾಗುತ್ತಿದೆ.

ಲಕ್ಷ್ಮೇಶ್ವರದ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯಿತ್ತಿರುವ ಪ್ರಯಾಣಿಕರು

ಇನ್ನು ಸಿಬ್ಬಂದಿ ಕೊರತೆ ಅಧಿಕಾರಿಗಳಿಗೆ ಮತ್ತೊಂದು ಸಮಸ್ಯೆಯಾಗಿದೆ. ಇಂಥ ಸ್ಥಿತಿಯಲ್ಲಿ ಸದ್ಯ 10ಕ್ಕೂ ಹೆಚ್ಚು ಸಿಬ್ಬಂದಿಗೆ ವರ್ಗಾವಣೆ ಆಗಿದೆ. ಮೊದಲೇ ಸಿಬ್ಬಂದಿ ಇಲ್ಲದೇ ನರಳುತ್ತಿರುವ ಘಟಕ ಸಿಬ್ಬಂದಿ ವರ್ಗಾವಣೆಗೊಂಡರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ. ಸದ್ಯ ಈ ಘಟಕದಲ್ಲಿ 190 ಚಾಲಕ– ನಿರ್ವಾಹಕರು, 290 ಆಡಳಿತ ಹಾಗೂ ಸಿಬ್ಬಂದಿ ಇದ್ದು ಇನ್ನೂ ಹತ್ತು ಹೊಸ ಬಸ್ ಮತ್ತು ಇನ್ನಷ್ಟು ಸಿಬ್ಬಂದಿಯ ಅವಶ್ಯಕತೆ ಇದೆ.

ಸರ್ಕಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ‘ಶಕ್ತಿ’ ಯೋಜನೆ ಅನುಷ್ಠಾನದ ಜತೆಗೆ ಅದರ ನಿರ್ವಹಣೆಗೆ ಅನುಕೂಲವಾಗುವಂತೆ ಹೆಚ್ಚಿನ ಬಸ್‌ಗಳನ್ನು ಒದಗಿಸಬೇಕು. ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಲಕ್ಷ್ಮೇಶ್ವರ ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಗೆ ಶಾಸಕರು, ಸ್ಥಳೀಯ ಆಡಳಿತ, ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಾಲ್ಲೂಕಿನ ಜನರು ಆಗ್ರಹಿಸಿದ್ದಾರೆ.

ಜನರು ಏನಂತಾರೆ?

ಪ್ರತಿದಿನ ಬೆಳಿಗ್ಗೆ ಲಕ್ಷ್ಮೇಶ್ವರದಿಂದ ಸವಣೂರು ಕಡೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಬೇಕು.
ಕುಮಾರ ಬಾಳೇಶ್ವರಮಠ ಶಿಕ್ಷಕ ಲಕ್ಷ್ಮೇಶ್ವರ
ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿರುವುದು ಜನರಿಗೆ ಅನುಕೂಲವಾಗಿದೆ. ಆದರೆ ಅದಕ್ಕೆ ತಕ್ಕಂತೆ ಹೆಚ್ಚಿನ ಬಸ್‍ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಬೇಕಾಗಿತ್ತು. ಕೇವಲ ಪ್ರಚಾರಕ್ಕಾಗಿ ಯೋಜನೆ ಎನ್ನುವಂತಾಗಿದೆ.
ಸೋಮಣ್ಣ ಡಾಣಗಲ್ಲ ಸಾಮಾಜಿಕ ಕಾರ್ಯಕರ್ತ ಶಿಗ್ಲಿ
ಕೆಲವು ದಿನಗಳಿಂದ ನಮ್ಮ ತಾಲ್ಲೂಕಿನಲ್ಲಿ ಸರಿಯಾಗಿ ಬಸ್ ಸಂಚರಿಸುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಮತ್ತು ಶಾಲೆ– ಕಾಲೇಜು ಮಕ್ಕಳಿಗೆ ಬಹಳಷ್ಟು ತೊಂದರೆ ಉಂಟಾಗಿದೆ.
ವಿರೂಪಾಕ್ಷಪ್ಪ ಮುದಕಣ್ಣವರ ಹುಲ್ಲೂರು ಗ್ರಾಮದ ನಿವಾಸಿ
ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸರಿಯಾಗಿ ಬಸ್‍ಗಳ ಓಡುತ್ತಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆಯ ಕೊರತೆ ಇರಬಹುದು. ಹೀಗಾಗಿ ಬಸ್ ಸಂಚಾರದಲ್ಲಿ ಸಮಸ್ಯೆ ಇದೆ.
ಚಂದ್ರು ತಳವಾರ ಗೋವನಾಳ ಗ್ರಾಮದ ನಿವಾಸಿ

ನಿತ್ಯವೂ ಪರದಾಟ

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಸಾರಿಗೆ ಬಸ್ ಹತ್ತಲು ಪ್ರಯಾಣಿಕರು ನಿತ್ಯವೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ‌ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಗದಗಕ್ಕೆ ತೆರಳುವ ಪ್ರಯಾಣಿಕರು ಬವಣೆ ಪಡುತ್ತಿದ್ದಾರೆ.

ಶಾಲಾ ಕಾಲೇಜು ಬಿಡುವ ವೇಳೆಗೆ ಬಸ್‍ಗಳೇ ಇರುವುದಿಲ್ಲ. ಕೆಲವು ಬಾರಿ ಬಸ್‍ಗಾಗಿ ಒತ್ತಾಯಿಸಿ ಸಂಘಟನೆಗಳು ಹೋರಾಟ ಕೂಡ ಮಾಡಿವೆ. ರಸ್ತೆ ಸ್ಥಿತಿ ಸರಿ ಇದ್ದಾಗ ಗದಗ ಹಾವೇರಿ ಶಿರಹಟ್ಟಿ ಸವಣೂರು ಹುಬ್ಬಳ್ಳಿ ಘಟಕಗಳಿಂದ ಹತ್ತಾರು ಬಸ್‍ಗಳು ಲಕ್ಷ್ಮೇಶ್ವರದ ಮೂಲಕ ಹಾಯ್ದು ಹೋಗುತ್ತಿದ್ದವು. ಆಗ ಪ್ರಯಾಣಿಕರಿಗೆ ಅಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆದರೆ ರಸ್ತೆಗಳು ಹಾಳಾದ ನಂತರ ಬೇರೆ ಘಟಕಗಳ ಬಸ್‍ಗಳು ಬರುತ್ತಿಲ್ಲ. ಹೀಗಾಗಿ ಬಸ್ ಸಮಸ್ಯೆ ಎದುರಾಗಿದೆ ಎಂದು ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

ಸಾಕಷ್ಟು ಬಸ್‌ಗಳು ಇಲ್ಲ

ಗ್ರಾಮೀಣ ಪ್ರದೇಶಗಳಿಗೆ ಸರಿಯಾಗಿ ಸೇವೆ ಕೊಡಬೇಕಾದರೆ ಘಟಕದಲ್ಲಿ ಸಾಕಷ್ಟು ಬಸ್‍ಗಳು ಇಲ್ಲ. ಅಲ್ಲದೇ ತಾಲ್ಲೂಕಿನಲ್ಲಿ ಬಹುತೇಕ ಮುಖ್ಯ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಈ ರಸ್ತೆಯಲ್ಲಿ ಬಸ್ ಸಂಚರಿಸಿದರೆ ಪದೇ ಪದೇ ಹಾಳಾಗುತ್ತಿವೆ. ಅಗತ್ಯ ಸಿಬ್ಬಂದಿ ಇಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ
ಸವಿತಾ ಆದಿ ಲಕ್ಷ್ಮೇಶ್ವರ ಸಾರಿಗೆ ಘಟಕದ ವ್ಯವಸ್ಥಾಪಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.