ನರೇಗಲ್: ಸ್ಥಳೀಯ ಪಟ್ಟಣ ಪಂಚಾಯ್ತಿಯ ವೆಬ್‌ಸೈಟ್ (ಅಂತರ್ಜಾಲ)ನಲ್ಲಿ ನಿರ್ವಹಣೆ ಕೊರತೆಯಿಂದ ಶೃಂಗೇರಿ ಪಟ್ಟಣ ಪಂಚಾಯ್ತಿ ಹಾಗೂ ತಾಲ್ಲೂಕು ಕೇಂದ್ರದ ಮಾಹಿತಿ ತೋರಿಸುತ್ತದೆ. ಅಷ್ಟೇ ಅಲ್ಲದೆ ಪಟ್ಟಣ ಪಂಚಾಯ್ತಿಗೆ ವ್ಯಾಪ್ತಿಗೆ ಒಳಪಡುವ ಯೋಜನೆಗಳ ಮಾಹಿತಿ ಲಭ್ಯವಿಲ್ಲವಾಗಿದೆ. ಇದರಿಂದ ಐಟಿ ಹಾಗೂ ಅಂತರ್ಜಾಲದ ವ್ಯವಸ್ಥೆ ಇದ್ದು ಇಲ್ಲದಂತಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ವೆಬ್‌ಸೈಟ್‌ನಲ್ಲಿ ನರೇಗಲ್‌ನಲ್ಲಿ ಪ್ರವಾಸದ ಮಾಹಿತಿ ಎಂದು ಕ್ಲಿಕ್ ಮಾಡಿದರೆ ಮೇಲ್ಭಾಗದಲ್ಲಿ ನರೇಗಲ್‌ನ ಹುಚ್ಚೀರಪ್ಪಜ್ಜನ ಮಠದ ಮಾಹಿತಿ ಬಂದರೆ ಅದರಲ್ಲಿ ಸಿದ್ದೇಶ್ವರ, ಶೋಭನೇಶ್ವರ ಗುಡಿಗಳ ಕುರಿತು ಕಾಣುತ್ತದೆ, ಅವು ಯಾವವು ನರೇಗಲ್‌ಗೆ ಸಂಬಂಧಪಟ್ಟ ತಾಣಗಳಲ್ಲ. ಕೆಳಭಾಗದಲ್ಲಿ ಗದಗ ದಾವಲಮಲಿಕ ದರ್ಗಾದ ಮಾಹಿತಿ ಕಾಣುತ್ತದೆ. ಇದರಿಂದ ನರೇಗಲ್ ಪಟ್ಟಣದಲ್ಲಿ ಇರುವ ರಾಷ್ಟ್ರಕೂಟರ ಕಾಲದ ಐತಿಹಾಸಿಕ ದೇವಾಲಯ, ಕಲ್ಮೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಸಂತ ಹಜರತ್ ರೆಹಮಾನ್ ಶಾವಲಿಯವರ ದರ್ಗಾ, ಹುಚ್ಚೀರೇಶ್ವರ ಮಠ ಸೇರಿದಂತೆ ಅನೇಕ ವಿಷಯಗಳ ಮಾಹಿತಿ ಇಲ್ಲದಂತಾಗಿದೆ.
ವಿಭಾಗಗಳ (ಡಿಪಾರ್ಟ್‌ಮೆಂಟ್) ಮಾಹಿತಿಗಾಗಿ ಕ್ಲಿಕ್ ಮಾಡಿದರೆ ಇಂಜಿನಿಯರಿಂಗ್ ನಲ್ಲಿ 15 ಹಣಕಾಸಿನ ಜಿಲ್ಲಾಧಿಕಾರಿಗಳ ನಡುವಳಿಕೆಯಿದೆ. ಆರೋಗ್ಯ ವಿಭಾಗ, ಕಂದಾಯ ವಿಭಾಗ, ಟೌನ್ ಪ್ಲಾನಿಂಗ್, ಹಣಕಾಸು ವಿಭಾಗ, ಜನನ-ಮರಣ ವಿಭಾಗ ಎಲ್ಲವೂ ಖಾಲಿಯಾಗಿವೆ. ಯಾವುದೇ ರೀತಿಯ ಮಾಹಿತಿ ಲಭ್ಯವಿರುವುದಿಲ್ಲ. ಆದರೆ ಡೇ ನಲ್ಮನಲ್ಲಿ ಮಾತ್ರ 6 ಮಾಹಿತಿಗಳನ್ನು ಕಾಣಿಸಲಾಗಿದೆ.
ಅದರಂತೆ ನೋಟಿಫಿಕೇಷನ್ ವಿಭಾಗದಲ್ಲಿ ಬರುವ ಸರ್ಕಾರದ ನೋಟಿಫಿಕೇಷನ್, ಸರ್ಕ್ಯೂಲರ್, ಗೇಜೆಟೆಡ್ ನೋಟಿಫಿಕೇಷನ್, ಟೆಂಡರ್, ಸಾರ್ವಜನಿಕ ಮಾಹಿತಿ, ಮೀಟಿಂಗ್ ಪ್ರೋಸಿಡಿಂಗ್ ಮತ್ತು ಇ-ನ್ಯೂಸ್ ಲೆಟರ್ ಖಾಲಿಯಾಗಿದೆ ಅದರ ಜೊತೆಗೆ ಪಟ್ಟಣ ಪಂಚಾಯ್ತಿಯಿಂದ ನಡೆಯುವ ಚಟುವಟಿಕೆಗಳ ಮಾಹಿತಿ, ಗ್ಯಾಲರಿಯ ಮಾಹಿತಿ ಇಲ್ಲವಾಗಿದೆ. ಹೀಗಾಗಿ ವೆಬ್‌ಸೈಟ್ ನಿರ್ವಹಣೆಗೆ ಪಟ್ಟಣ ಪಂಚಾಯ್ತಿಯಲ್ಲಿ ಐಟಿ ವಿಭಾಗದ ಸಿಬ್ಬಂದಿಗಳು ಇದ್ದರು ವ್ಯರ್ಥವಾಗುತ್ತಿದೆ ಎನ್ನುವುದು ಪಟ್ಟಣದ ನಿವಾಸಿಗಳ ಆರೋಪವಾಗಿದೆ.
ಪ.ಪಂ. ಅಧ್ಯಕ್ಷ, ಮುಖ್ಯಾಧಿಕಾರಿಗಳ ಫೋಟೋ ಇತ್ತೀಚೆಗೆ ಬದಲಾವಣೆಯಾಗಿದೆ. ಉಳಿದಂತೆ ಚುನಾಯಿತ ಪ್ರತಿನಿಧಿಗಳ ಹಾಗೂ ಪ.ಪಂ. ಸಿಬ್ಬಂದಿಗಳ ಫೋಟೋ ಅಪ್ಲೋಡ್ ಮಾಡಲಾಗಿದೆ. ಆದರೆ ಯಾವುದು ಸಹ ವ್ಯವಸ್ಥಿತವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡ ಅನುದಾನ ಮೀಸಲಿಡುತ್ತಿದೆ ಆದರೆ ಅದರ ಸದುಪಯೋಗವಾಗುತ್ತಿಲ್ಲ ಎಂದು ಪಟ್ಟಣದ ನಿವಾಸಿ ಐಟಿ ಉದ್ಯೋಗಿ ಟಿ. ಕಿರಣಕುಮಾರ ಹೇಳಿದರು.
ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ ಆದರೆ ವೆಬ್‌ಸೈಟ್‌ನಲ್ಲಿ ಸರಿಯಾದ ಮಾಹಿತಿ ಹಾಕದೇ ಇರುವ ಕಾರಣ ಸ್ಥಳೀಯ ಜನರು ಹಾಗೂ ದೂರದ ಊರುಗಳಲ್ಲಿರುವ ನರೇಗಲ್ ನಿವಾಸಿಗಳಿಗೆ ಪಟ್ಟಣ ಪಂಚಾಯ್ತಿ ಕಾರ್ಯ ಚಟುವಟಿಕೆಗಳ ಬಗ್ಗೆ, ಯೋಜನೆಗಳ ಬಗ್ಗೆ, ಇತರೆ ಅಗತ್ಯ ಮಾಹಿತಿ ಬಗ್ಗೆ ತಿಳಿಯುತ್ತಿಲ್ಲ. ಇನ್ನಾದರು ಅಗತ್ಯವಿರುವ ಬದಲಾವಣೆ ಹಾಗೂ ಅಪ್‌ಡೇಟ್‌ಗೆ ಮುಂದಾಗಬೇಕು ಎಂದು ಪ.ಪಂ. ಸದಸ್ಯೆ ಜ್ಯೋತಿ ಪಾಯಪ್ಪಗೌಡ್ರ ಆಗ್ರಹಿಸಿದರು.
ಕೆಲವೇ ದಿನಗಳಲ್ಲಿ ಈಗಿರುವ ವೆಬ್‌ಸೈಟ್ ಹೋಗಿ ಹೊಸದಾದ, ಅಪ್‌ಡೇಟೆಡ್ ವೆಬ್‌ಸೈಟ್ ಬರಲಿದೆ ಹಾಗಾಗಿ ಕೆಲವು ಮಾಹಿತಿಗಳು ಈಗಿನ ವೆಬ್‌ಸೈಟ್‌ನಲ್ಲಿ ಹಾಕಿಲ್ಲ. ಆದರೂ ಈ ಕೂಡಲೇ ನರೇಗಲ್ ಪ.ಪಂ.ಗೆ ಸಂಬಂಧಿಸಿದ ಮಾಹಿತಿಯನ್ನು ಹಾಕಲಾಗುತ್ತದೆ ಎಂದು ಪ.ಪಂ. ಸಿಬ್ಬಂದಿ ಪ್ರಜಾವಾಣಿಗೆ ಮಾಹಿತಿ ನೀಡಿದರು.
ವೆಬ್‌ಸೈಟ್ ಅನ್ನು ಶೃಂಗೇರಿ ಪ.ಪಂ.ಯವರು ನಿರ್ವಹಣೆ ಮಾಡುತ್ತಾರೆ ಎಂದು ಅಂತರ್ಜಾಲದ ಕೊನೆಯಲ್ಲಿ ಕಾಣಿಸಲಾಗಿದೆ. ಅಷ್ಟೇ ಅಲ್ಲದೆ 2020ರಿಂದ ಇಲ್ಲಿಯವರೆಗೆ ಅಪ್‌ಡೇಟ್ ಮಾಡಿರುವುದಿಲ್ಲರೆಹಮಾನ ನದಾಫ್ ಐಟಿ ಉದ್ಯೋಗಿ ನರೇಗಲ್ ನಿವಾಸಿ
ನಾನು ಮೈಸೂರಿನಲ್ಲಿ ನಡೆಯುತ್ತಿರುವ ತರಬೇತಿಯಲ್ಲಿದ್ದೇನೆ. ಆದಕಾರಣ ವೆಬ್‌ಸೈಟ್ ಅನ್ನು ವೀಕ್ಷಣೆ ಮಾಡಿ ಅಗತ್ಯ ಬದಲಾವಣೆ ಮಾಡುವಂತೆ ಸಿಬ್ಬಂದಿಗೆ ತಿಳಿಸಲಾಗುವುದುಮಹೇಶ ನಿಡಶೇಶಿ ನರೇಗಲ್ ಪ.ಪಂ. ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.