ಲಕ್ಷ್ಮೇಶ್ವರ: ಪ್ರಸ್ತುತ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಕ್ಷೇತ್ರದ ದಿಕ್ಕೆ ಬದಲಾಗಿದೆ. ಹಿಂಗಾರು ಕೈ ಹಿಡಿಯುವ ಲಕ್ಷಣಗಳೂ ಕಾಣುತ್ತಿಲ್ಲ. ರೈತರು ಬೆಳೆಗೆ ಹಾಕಿದ ಬಂಡವಾಳವೂ ವ್ಯರ್ಥವಾಯಿತು. ಕೃಷಿ ಜೊತೆಗೆ ಮೇವಿನ ಕೊರತೆಯಿಂದ ಹೈನುಗಾರಿಕೆ ಕೂಡ ನೆಲಕಚ್ಚಿದೆ.
ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಆದರೆ ಮಳೆ ಇಲ್ಲದೆ ಹಸಿರು ಮೇವಿನ ಕೊರತೆ ಉಂಟಾಗಿ ಹಾಲಿನ ಉತ್ಪನ್ನವೂ ಕುಂಠಿತಗೊಳ್ಳುತ್ತಿದೆ.
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಒಟ್ಟು 26,241 ದೊಡ್ಡ ಗಾತ್ರದ ಜಾನುವಾರುಗಳು ಅಂದರೆ ಎತ್ತು, ಎಮ್ಮೆಗಳಿವೆ. 65,237 ಕುರಿ ಮತ್ತು ಮೇಕೆಗಳು ಇವೆ. ‘ಒಂದು ದೊಡ್ಡ ಜಾನುವಾರುವಿನ ಆಹಾರಕ್ಕೆ ದಿನಕ್ಕೆ ಆರು ಕೆಜಿ ಮತ್ತು ಕುರಿ ಆಡು ಮೇಕೆರೆ 0.5 ಕೆಜಿ ಮೇವಿನಂತೆ ದಿನಕ್ಕೆ 1,331 ಕೆಜಿ ಮೇವಿನ ಅಗತ್ಯ ಇದೆ. ಸಧ್ಯ ಲಭ್ಯತೆ ಇರುವ ಮೇವಿನ ಪ್ರಮಾಣ 27,263 ಟನ್. ಅದರಲ್ಲಿ ಈಗಾಗಲೇ 1,331 ಟನ್ ಖರ್ಚು ಆಗಿದ್ದು 25,932 ಟನ್ ಮೇವಿನ ಸಂಗ್ರಹ ಇದೆ. ಇಷ್ಟು ಮೇವು ಮುಂದಿನ 19 ವಾರಗಳವರೆಗೆ ಸಾಕಾಗುತ್ತದೆ’ ಎಂದು ಲಕ್ಷ್ಮೇಶ್ವರದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎನ್.ಎನ್. ಹವಳದ ತಿಳಿಸಿದ್ದಾರೆ.
ಮಳೆ ಇಲ್ಲದ್ದರಿಂದ ಹಸಿ ಮೇವಿನ ಲಭ್ಯತೆ ಕಡಿಮೆ ಇದ್ದು ಕೇವಲ ಒಣ ಮೇವು ಮಾತ್ರ ಇದೆ. ಹಸಿ ಮೇವಿನ ಕೊರತೆ ಹೈನೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಂಭವ ಇದೆ. ಕೇವಲ ಒಣ ಮೇವು ಸೇವಿಸಿದರೆ ನಿಗದಿತ ಪ್ರಮಾಣದಲ್ಲಿ ಜಾನುವಾರುಗಳು ಹಾಲು ಕೊಡುವುದಿಲ್ಲ. ಅವುಗಳಿಗೆ ಹಸಿ ಮೇವಿನ ಅಗತ್ಯವೂ ಇದೆ. ‘ಹಸಿ ಮೇವು ಇಲ್ಲದಿದ್ದರೆ ಆಕಳು, ಎಮ್ಮೆ ಹಾಲು ಕೊಡುವುದನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ರೈತರಿಗೆ ನಷ್ಟ ಆಗುತ್ತದೆ’ ಎಂದು ಸಮೀಪದ ಅಡರಕಟ್ಟಿ ಗ್ರಾಮದ ಯುವ ರೈತ ರವಿ ಹವಳದ ಆತಂಕ ವ್ಯಕ್ತಪಡಿಸಿದರು.
ಇನ್ನು ಜಾನುವಾರು ಮತ್ತು ಕುರಿ, ಮೇಕೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಮುನ್ಸೂಚನೆಗಳು ಗೋಚರಿಸುತ್ತಿವೆ. ಮಳೆ ಆಗಿದ್ದರೆ ಹಳ್ಳಕೊಳ್ಳ, ಚೆಕ್ ಡ್ಯಾಂ, ಕೆರೆಕಟ್ಟೆಗಳು ತುಂಬಿಕೊಳ್ಳುತ್ತಿದ್ದವು. ಆದರೆ ಈ ವರ್ಷ ಜಲಮೂಲಗಳೆಲ್ಲ ನೀರಿಲ್ಲದೆ ಬಣಗುಡುತ್ತಿವೆ. ಇನ್ನೂ ಬೇಸಿಗೆ ಬಂದಿಲ್ಲ. ಈಗಾಗಲೇ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು ಇದು ರೈತರಿಗೆ ಮತ್ತೊಂದು ಸಮಸ್ಯೆ ತಂದಿದೆ.
ಅಗತ್ಯ ಇದ್ದರೆ ಹಸಿರು ಮೇವು ಬೆಳೆಯಲು ಇಲಾಖೆ ಮೇವಿನ ಬೀಜಗಳನ್ನು ವಿತರಿಸಲಿದೆ.ಡಾ.ಎನ್.ಎನ್. ಹವಳದ, ಪಶು ಆಸ್ಪತ್ರೆಯ ವೈದ್ಯಾಧಿಕಾರಿ, ಲಕ್ಷ್ಮೇಶ್ವರ
ಮುಂದಿನ ಮಳೆಗಾಲದವರೆಗೆ ಕುರಿಗಳನ್ನು ಸಾಕುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಇಷ್ಟು ದೊಡ್ಡ ಬರಗಾಲ ಆತಂಕ ಮೂಡಿಸಿದೆ.ಹನಮಂತಪ್ಪ ಕುರಿಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.