ಗದಗ: ಶ್ರೀಮಂತ ಇತಿಹಾಸ, ಪರಂಪರೆ ಹೊಂದಿದ್ದರೂ ಇಷ್ಟು ವರ್ಷ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಲಕ್ಕುಂಡಿಯ ಗತವೈಭವ ಮರುತರಲು ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಜೊತೆಗೂಡಿ ಪಾರಂಪರಿಕ ಪ್ರದೇಶ ವ್ಯಾಪ್ತಿಯ ಪ್ರಾಚ್ಯಾವಶೇಷಗಳ ಅನ್ವೇಷಣೆ ನಡೆಸಲಿವೆ. ಉತ್ಖನನ ನಡೆಸುವ ಚಿಂತನೆ ಹೊಂದಿವೆ.
ಲಕ್ಕುಂಡಿಯ ಇತಿಹಾಸ, ಪರಂಪರೆಯ ಶ್ರೀಮಂತಿಕೆ ಕುರಿತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ಪ್ರಾಚ್ಯಾವಶೇಷಗಳ ಸಂಗ್ರಹಣೆ ಬಗ್ಗೆ ಬರೆದ ಎರಡು ಪುಟಗಳ ಪತ್ರವನ್ನು ಅಧಿಕಾರಿಗಳು ಲಕ್ಕುಂಡಿಯ ಪ್ರತಿ ಮನೆಗೂ ತಲುಪಿಸಿದ್ದಾರೆ. ಜನರಿಂದ ಸಿಗುವ ಪ್ರಾಚ್ಯಾವಶೇಷಗಳ ಸಂಗ್ರಹಕ್ಕೆ ಪಲ್ಲಕ್ಕಿ ಸಿದ್ಧಪಡಿಸಲಾಗಿದೆ.
ಇದಕ್ಕೆ ಪೂರಕವಾಗಿ ಪ್ರಾಚ್ಯಾವಶೇಷಗಳು ಎಲ್ಲೆಲ್ಲಿ ಇವೆ ಎಂಬುದರ ಬಗ್ಗೆ ಅಧ್ಯಯನ, ಮನೆ ಮನೆ ಸಮೀಕ್ಷೆ ಮತ್ತು ಗುರುತಿಸುವಿಕೆ ಕೆಲಸ ನಡೆದಿದೆ. ಇದನ್ನು ಲಕ್ಕುಂಡಿ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ತಜ್ಞರು ಮತ್ತು ನಾಯಕರನ್ನು ಒಳಗೊಂಡ ಹತ್ತು ತಂಡ ನಿರ್ವ ಹಿಸಿವೆ. ಭಾನುವಾರ (ನ.24) ಅಮೂಲ್ಯವಾದ ಶಿಲ್ಪಕಲೆಗಳು, ತಾಳೆಗರಿ, ನಾಣ್ಯಗಳನ್ನು ಜನರಿಂದ ಸಂಗ್ರಹಿಸುವ ಕೆಲಸ ನಡೆಯಲಿದೆ.
ಪ್ರಾಚ್ಯಾವಶೇಷಗಳ ಸಂಗ್ರಹಣೆ ಅಭಿಯಾನಕ್ಕೆ ರಾಜ್ಯದ ಪ್ರಮುಖ ಇತಿಹಾಸಕಾರರು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಕೈಜೋಡಿಸುವರು.
‘ಸದ್ಯ ₹5 ಕೋಟಿ ವೆಚ್ಚದಲ್ಲಿ ಲಕ್ಕುಂಡಿಯ 13 ಪಾರಂಪರಿಕ ತಾಣಗಳ ಜೀರ್ಣೋದ್ಧಾರ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ.ಪ್ರಾಚ್ಯಾವಶೇಷಗಳ ಸಂಗ್ರಹಣೆ ಮುಗಿದು, ಉತ್ಖನನ ಆರಂಭ ಗೊಂಡರೆ ಲಕ್ಕುಂಡಿಯ ಇತಿಹಾಸ ಮರುಸೃಷ್ಟಿ ಕೆಲಸ ಇನ್ನೊಂದು ಹಂತಕ್ಕೆ ಮೇಲೇರಲಿದೆ’ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಾಚ್ಯಾವಶೇಷಗಳ ಅನ್ವೇಷಣೆ ಲಕ್ಕುಂಡಿ ಇತಿಹಾಸದಲ್ಲಿ ಮಹತ್ವದ ಘಟನೆಗೆ ಸಾಕ್ಷಿಯಾಗಲಿದೆ.ಎಚ್.ಕೆ.ಪಾಟೀಲ, ಪ್ರವಾಸೋದ್ಯಮ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.