ADVERTISEMENT

ಲಕ್ಷ್ಮೇಶ್ವರ: ಸೋಮೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

ನಾಗರಾಜ ಎಸ್‌.ಹಣಗಿ
Published 18 ನವೆಂಬರ್ 2024, 4:45 IST
Last Updated 18 ನವೆಂಬರ್ 2024, 4:45 IST
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ   

ಲಕ್ಷ್ಮೇಶ್ವರ: 11ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿರುವ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಯಲಯದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಲಕ್ಷದೀಪೋತ್ಸವ ನಡೆಯುತ್ತಿದ್ದು ಮೂರನೇ ಕಾರ್ಯಕ್ರಮ ನ. 18ರಂದು ಸಂಜೆ 6ಕ್ಕೆ ನಡೆಯಲಿದೆ. ಹೀಗಾಗಿ ದೇವಸ್ಥಾನವನ್ನು ವಿದ್ಯುತ್ ದೀಪ ಮತ್ತು ಹೂಗಳಿಂದ ಸಿಂಗರಿಸಲಾಗಿದೆ.

ಸಂಕ್ಷಿಪ್ತ ಪರಿಚಯ: ದೇವಾಲಯ ಭವ್ಯವಾದ ಬಯಲಿನಲ್ಲಿ ನಿರ್ಮಿಸಲ್ಪಟ್ಟಿದ್ದು ದೇವಸ್ಥಾನದ ಸುತ್ತಲೂ ಬೃಹತ್ ಕಲ್ಲಿನಿಂದ ಕಟ್ಟಿದ ಎತ್ತರದ ಗೋಡೆ ಇದೆ. ಇದು ದೇವಸ್ಥಾನಕ್ಕೆ ರಕ್ಷಣೆ ಒದಗಿಸುತ್ತದೆ. ಪೂರ್ವ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಿಂದ ದೇವಾಲಯ ಪ್ರವೇಶಿಸಲು ಮುಖ್ಯ ಮೂರು ದ್ವಾರಗಳಿವೆ.

ವಿಶಿಷ್ಠ ಮೂರ್ತಿ: ದೇವಸ್ಥಾನದ ಗರ್ಭ ಗುಡಿಯಲ್ಲಿನ ಪೂಜಾ ಮೂರ್ತಿ ಬಹಳ ಅಪರೂಪದ್ದಾಗಿದ್ದು ಅಷ್ಟೇ ಸುಂದರವಾಗಿದೆ. ಇಲ್ಲಿ ಪರಶಿವನ ಹಿಂದೆ ಪಾರ್ವತಿ ದೇವಿಯು ನಂದಿಯನ್ನೇರಿ ಕುಳಿತ್ತಿದ್ದಾಳೆ. ಇಂಥ ಅಪರೂಪದ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ. ಮೂರ್ತಿಯು ಅಂದಾಜು 4 ಅಡಿ ಎತ್ತರ 3 ಅಡಿ ಅಗಲವಿದೆ. ಪೂಜೆ, ಅಲಂಕಾರಗೊಂಡಾಗ ಶಿವ ಪಾರ್ವತಿಯರು ನಂದಿ ಆರೂಢರಾಗಿ ನಗರ ಪ್ರದಕ್ಷಿಣೆಗೆ ಹೊರಟಿರುವಂತೆ ಭಾಸವಾಗುತ್ತದೆ. ಮೂರ್ತಿಯನ್ನು ಶಿವಶರಣ ಆದಯ್ಯನು ಸೌರಾಷ್ಟ್ರದಿಂದ ತಂದು ಸ್ಥಾಪಿಸಿದನೆಂದು ದಾಖಲೆಗಳಲ್ಲಿ ಉಲ್ಲೇಖ ಇದೆ.

ADVERTISEMENT

ದೇವಸ್ಥಾನದ ಆವರಣದಲ್ಲಿ ಸೋಮತೀರ್ಥ, ಓಕಳಿ ಹೊಂಡ ಸೇರಿದಂತೆ ಅನೇಕ ಚಿಕ್ಕ ಚಿಕ್ಕ ದೇವಾಲಯಗಳು ಇವೆ. ದೇವಸ್ಥಾನ ಸೇರಿ ಇವೆಲ್ಲವೂಗಳೂ ಅವಸಾನದ ಅಂಚಿಗೆ ತಲುಪಿದ್ದವು. ಆದರೆ ಇದೀಗ ಅವುಗಳು ಹೊಸ ಕಳೆಯೊಂದಿಗೆ ಭಕ್ತರನ್ನು ಆಕರ್ಷಿಸುತ್ತಿವೆ. ಕಲ್ಲಿನಿಂದಲೇ ನಿರ್ಮಿಸಿದ ಬೃಹತ ಬಾವಿ ಇದೀಗ ದುರಸ್ತಿಗೊಂಡಿದ್ದು ಅದರ ಸುತ್ತಲೂ ಉದ್ಯಾನ ಬೆಳೆಸಲಾಗಿದೆ.

ದೇವಸ್ಥಾನದ ವಾಸ್ತುಶಿಲ್ಪ ನಕ್ಷತ್ರಾಕಾರದಲ್ಲಿದೆ. ದೇವಾಲಯದ ಚಾವಣಿಯಲ್ಲಿ ಭೈರವಿ, ಶಿವ, ವಿಷ್ಣು, ಶಕ್ತಿ, ನಟರಾಜ, ಗಣೇಶ, ವೀರಭದ್ರ, ವೇಣುಗೋಪಾಲರ ಶಿಲ್ಪಗಳನ್ನು ಅಲ್ಲಲ್ಲಿ ಕೆತ್ತಲಾಗಿದೆ. ಶಿಖರದ ದಕ್ಷಿಣ ಭಾಗದಲ್ಲಿ ಬ್ರಹ್ಮ, ಯಕ್ಷರನ್ನು, ಪಶ್ಚಿಮ ಭಾಗದಲ್ಲಿ ಶಕ್ತಿ-ಸರಸ್ವತಿಯರನ್ನು, ಉತ್ತರದಲ್ಲಿ ಶಿವನ ಮೂರ್ತಿಗಳು ಕಂಡು ಬರುತ್ತವೆ. ದೇವಾಲಯದ ಕಂಬಗಳು ಗಿಡ ಬಳ್ಳಿಗಳಿಂದ ಅಲಂಕೃತಗೊಂಡಿದ್ದು ನಯನಮನೋಹರ ಕೆತ್ತನೆಗಳಿಂದ ಕೂಡಿವೆ. ಉತ್ತರ ದಿಕ್ಕಿನಿಂದ ದೇವಾಲಯ ಪ್ರವೇಶಿಸುವ ಭಕ್ತರಿಗೆ ಓಕಳಿಹೊಂಡ ನಂತರ ಪೂರ್ವಾಭಿಮುಖವಾಗಿರುವ ವಿಘ್ನನಾಶಕ ಗಜಾನನ ದರ್ಶನವಾಗಿ ಒಳಗಡೆ ಕಾಲಿಟ್ಟ ತಕ್ಷಣ ಭವ್ಯ ಕಲಾಕೃತಿಯ ದೇವಸ್ಥಾನದ ಮಂಟಪ ಕಣ್ಣಿಗೆ ಬೀಳುತ್ತದೆ.

ಸುಧಾಮೂರ್ತಿಯವರ ಕಳಕಳಿ: ಶಿಥಿಲಗೊಂಡಿದ್ದ ದೇವಸ್ಥಾನವನ್ನು ಇನ್ಫೋಸಿಸ್‍ನ ಸುಧಾ ಮೂರ್ತಿಯವರು ₹ 5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿ ದೇವಾಲಯಕ್ಕೆ ಗತವೈಭವದ ಕಳೆ ತಂದಿದ್ದಾರೆ. 2014ರಲ್ಲಿ ಜೀರ್ಣೋದ್ಧಾರಗೊಂಡು ದೇವಾಲಯ ಲೋಕಾರ್ಪಣೆಗೊಂಡಿದೆ.

ಅಂದಿನಿಂದ ಪ್ರತಿವರ್ಷ ಇನ್ಫೋಸಿಸ್‍ನವರು ಪುಲಿಗೆರೆ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ. ಅದರೊಂದಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಲಕ್ಷದೀಪೋತ್ಸವ ನೆರವೇರಿಸಲು ಸುಧಾ ಮೂರ್ತಿಯವರು ಸಲಹೆ ನೀಡುವುದರೊಂದಿಗೆ ದೀಪೋತ್ಸವಕ್ಕೆ ಚಾಲನೆ ನೀಡಿದ್ದು ಇತಿಹಾಸ.

ಸದ್ಯ ಮೂರನೇ ದೀಪೋತ್ಸವ ಜರುಗಲಿದ್ದು ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ದೇವಸ್ಥಾನವು ವಿದ್ಯುತ್ ದೀಪಾಲಂಕಾರದಿಂದ ಹೊಳೆಯುತ್ತಿದೆ. ಬಜಾರದ ಹಾವಳಿ ಹನುಮಪ್ಪನ ದೇವಸ್ಥಾನದಿಂದ ಶಿಗ್ಲಿ ನಾಕಾದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ದೇವಸ್ಥಾನದ ಪೂರ್ವ ದ್ವಾರದಿಂದ ಆದಯ್ಯನ ವರ್ತುಲ, ದಕ್ಷಿಣ ದ್ವಾರದಿಂದ ಪುರಸಭೆ, ಉತ್ತರ ದ್ವಾರದಿಂದ ಜಂತ್ಲಿ ಬಸವೇಶ್ವರ ದೇವಸ್ಥಾನದವರೆಗೆ ಮತ್ತು ಸೋಮೇಶ್ವರ ತೇರಿನ ಮನೆಯಿಂದ ಸೋಮೇಶ್ವರ ಪಾದಗಟ್ಟೆವರೆಗೆ ದೀಪ ಹಚ್ಚಲು ವ್ಯವಸ್ಥೆ ಮಾಡಲಾಗಿದೆ.

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ
ಏಕಕಾಲಕ್ಕೆ ದೀಪ ಹಚ್ಚುವ ವ್ಯವಸ್ಥೆ
ಸೋಮನಾಥನ ಎದುರು ದೀಪ ಬೆಳಗಿಸಿದ ನಂತರ ಏಕಕಾಲಕ್ಕೆ ದೀಪ ಹಚ್ಚುವ ವ್ಯವಸ್ಥೆ ಸಿದ್ಧವಾಗಿದೆ. ಇದಕ್ಕಾಗಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ಅಧ್ಯಕ್ಷರು ಸದಸ್ಯರು ಭಕ್ತರು ಶಿಕ್ಷಕರು ಸಾರ್ವಜನಿಕರು ಶ್ರಮ ವಹಿಸುತ್ತಿದ್ದಾರೆ. ಇನ್ನು ದೇವಸ್ಥಾನದ ಹತ್ತಿರವೇ ಇರುವ ಪಾಟೀಲ ಕುಲಕರ್ಣಿ ಅವರ ಮನೆಯ ವಿಶಾಲ ಬಯಲಿನಲ್ಲಿ ಸಾಮೂಹಿಕ ಅನ್ನಸಂತರ್ಪಣೆಯ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದಿದೆ. ಅಂದಾಜು 20 ಸಾವಿರ ಜನರಿಗೆ ಅನ್ನಪ್ರಸಾದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.