ADVERTISEMENT

ಲಕ್ಷ್ಮೇಶ್ವರ | ಮಳೆಗೆ ಸಿಲುಕಿದ ಫಸಲು: ದರ ಕುಸಿತದ ಭೀತಿ

ನಾಗರಾಜ ಎಸ್‌.ಹಣಗಿ
Published 30 ಅಕ್ಟೋಬರ್ 2024, 5:06 IST
Last Updated 30 ಅಕ್ಟೋಬರ್ 2024, 5:06 IST
ಲಕ್ಷ್ಮೇಶ್ವದಲ್ಲಿ ಬಿಸಿಲಿಗೆ ಗೋವಿನಜೋಳ ಫಸಲನ್ನು ಒಣ ಹಾಕಿರುವುದು
ಲಕ್ಷ್ಮೇಶ್ವದಲ್ಲಿ ಬಿಸಿಲಿಗೆ ಗೋವಿನಜೋಳ ಫಸಲನ್ನು ಒಣ ಹಾಕಿರುವುದು   

ಲಕ್ಷ್ಮೇಶ್ವರ: ಈ ವರ್ಷ ಸುರಿದ ಮುಂಗಾರು ಮಳೆಗೆ ಗೋವಿನಜೋಳ, ಹತ್ತಿ, ಕಂಠಿ ಶೇಂಗಾ ಚೆನ್ನಾಗಿ ಬೆಳೆದಿದ್ದವು. ಇನ್ನೇನು ಕಟಾವು ಮಾಡಿ ಫಸಲು ಮಾರಾಟ ಮಾಡಲು ರೈತ ಸಿದ್ಧತೆ ನಡೆಸಿದ್ದ. ಆದರೆ ಅಕ್ಟೋಬರ್ ತಿಂಗಳು ಸುರಿದ ಸತತ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ನಿರಂತರ ಮಳೆಗೆ ಎರೆ ಹೊಲಗಳಲ್ಲಿ ನೀರು ನಿಂತು ಹೊಲದೊಳಗೆ ಹೋಗದ ಸ್ಥಿತಿ ಇದೆ. ನೂರಾರು ಎಕರೆ ಎರೆ ಹೊಲಗಳಲ್ಲಿಯೇ ಗೋವಿನಜೋಳ ಮತ್ತು ಹತ್ತಿ ಕಟಾವಿಗೆ ಕಾಯುತ್ತಿವೆ. ಮೂರ್ನಾಲ್ಕು ದಿನಗಳಿಂದ ಮಳೆ ಸ್ವಲ್ಪ ಬಿಡುವು ನೀಡಿತ್ತು. ಹೀಗೆಯೇ ಇನ್ನೊಂದು ವಾರ ಮಳೆ ಬಿಡುವು ನೀಡಬೇಕು ಎಂದು ರೈತ ಪ್ರಾರ್ಥಿಸಿದ್ದ. ಆದರೆ ಸೋಮವಾರದಿಂದ ತಾಲ್ಲೂಕಿನಲ್ಲಿ ಮಳೆ ಸುರಿಯಲು ಆರಂಭಿಸಿದ್ದು ರೈತರಲ್ಲಿ ಆತಂಕ ಮೂಡಿದೆ.

ಗೋವಿನಜೋಳದ ತೆನೆ ಮುರಿದು ಒಕ್ಕಣೆ ಮಾಡಿ ಮಾರಾಟ ಮಾಡಬೇಕು ಎಂದು ರೈತ ಲೆಕ್ಕಾಚಾರ ಹಾಕಿದ್ದ. ಆದರೆ ಆತನ ಲೆಕ್ಕಾಚಾರ ಉಲ್ಟಾ ಆಗಿದೆ. ಹೊಲಗಳಲ್ಲಿ ಭರ್ತಿ ತೇವಾಂಶ ಇರುವುದರಿಂದ ಬೆಳೆ ಕಟಾವಿಗೆ ಅವಕಾಶ ಇಲ್ಲ. ಇನ್ನು ಮಸಾರಿ ಹೊಲಗಳಲ್ಲಿಯ ಬೆಳೆ ಕಟಾವು ಆಗಿದೆ. ಆದರೆ ಅದನ್ನು ಒಣಗಿಸಿ ಮಾರಾಟ ಮಾಡುವಷ್ಟರಲ್ಲಿ ಮತ್ತೆ ಮಳೆ ಸುರಿಯಲು ಶುರು ಮಾಡಿದೆ. ಇನ್ನೂ ಶೇ 75ರಷ್ಟು ರೈತರು ಗೋವಿನಜೋಳದ ಒಕ್ಕಣೆ ಮಾಡಬೇಕಾಗಿದೆ. ಈಗಾಗಲೇ ಬೆಳೆ ಕಟಾವು ಮಾಡಿದ ರೈತರು ಇಳುವರಿಯನ್ನು ಮಾರುಕಟ್ಟೆಗೆ ತಂದರೆ ಖರೀದಿದಾರರೇ ಸಿಗುತ್ತಿಲ್ಲ. ಬೆಳೆ ಮಳೆಗೆ ಸಿಕ್ಕ ಕಾರಣ ಖರೀದಿದಾರರು ಫಸಲು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲ ಖರೀದಿದಾರರು ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಫಸಲನ್ನು ಮಾರಾಟ ಮಾಡದೇ ಇಟ್ಟರೆ ಅದು ಮತ್ತಷ್ಟು ಕೆಡುತ್ತದೆ. ಹಾಗೆಯೇ ಮಾರಿದರೆ ನಷ್ಟ ಆಗುತ್ತದೆ. ಹೀಗಾಗಿ ಇತ್ತ ಫಸಲನ್ನು ಇಡಲು ಆಗದೇ ಅತ್ತ ಮಾರಾಟ ಮಾಡಲೂ ಆಗದೆ ರೈತ ಒದ್ದಾಡುತ್ತಿದ್ದಾನೆ. ಒಟ್ಟಿನಲ್ಲಿ ಗೋವಿನಜೋಳ ರೈತರ ಪಾಲಿಗೆ ಬಿಸಿ ತುಪ್ಪವಾಗಿ ಕಾಡುತ್ತಿದೆ.

ADVERTISEMENT

ಇನ್ನೊಂದು ವಾರ ಮಳೆ ಬರದಿದ್ದರೆ ಗೋವಿನಜೋಳ ಒಕ್ಕಣೆಯೇ ಮುಗಿಯುತ್ತಿತ್ತು. ಆದರೆ ಅಷ್ಟರಲ್ಲಿಯೇ ಮಳೆ ಆಗುತ್ತಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆ ಕಡಿಮೆ ಆದಾಗ ಬಿಸಿಲಿಗೆ ಒಣ ಹಾಕುವುದು. ಮೋಡ ಕವಿಯುತ್ತಲೇ ರಾಶಿಯನ್ನು ಮುಚ್ಚುವುದೇ ರೈತರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆ ಮಳೆಗೆ ಕಣ್ಣ ಮುಂದೆಯೇ ಹಾಳಾಗುತ್ತಿರುವುದನ್ನು ನೋಡುವುದು ಸಹಿಸಲು ಆಗುತ್ತಿಲ್ಲ.

ಇನ್ನೊಂದು ವಾರ ಮಳಿ ಹೊರಪು ಕೊಟ್ಟಿದ್ರ ಗ್ವಾನ ಜ್ವಾಳದ ಒಕ್ಕಲಿ ಮುಗೀತಿತ್ತು. ಆದರ ಅಷ್ಟರಾಗ ಮತ್ತ ಮಳಿ ಬರಾಕತ್ತೇತಿ. ಹಿಂಗಾದರ ರೈತರ ಪರಿಸ್ಥಿತಿ ಹ್ಯಾಂಗ್ರಿ
ಶಂಕ್ರಣ್ಣ ಕಾಳೆ ರೈತ ರಾಮಗೇರಿ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.