ADVERTISEMENT

ಲಕ್ಷ್ಮೇಶ್ವರ | ದುರಸ್ತಿ ಕಾಣದ ರಸ್ತೆ: ತಪ್ಪದ ಪ್ರಯಾಣಿಕರ ಗೋಳು

ನಾಗರಾಜ ಎಸ್‌.ಹಣಗಿ
Published 22 ನವೆಂಬರ್ 2024, 4:21 IST
Last Updated 22 ನವೆಂಬರ್ 2024, 4:21 IST
ಗದಗ ನಗರದಿಂದ ಲಕ್ಷ್ಮೇಶ್ವರದ ಮೂಲಕ ಹಾಯ್ದು ಹೋಗಿರುವ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ಹಾಳಾಗಿರುವ ದೃಶ್ಯ
ಗದಗ ನಗರದಿಂದ ಲಕ್ಷ್ಮೇಶ್ವರದ ಮೂಲಕ ಹಾಯ್ದು ಹೋಗಿರುವ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ಹಾಳಾಗಿರುವ ದೃಶ್ಯ   

ಲಕ್ಷ್ಮೇಶ್ವರ: ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯು ಮಾಗಡಿಯಿಂದ ಲಕ್ಷ್ಮೇಶ್ವರದವರೆಗೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದೆ. ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತು ಬಂದಿದ್ದು ಜಲ್ಲಿಕಲ್ಲುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆ ಹರಡಿಕೊಂಡಿವೆ.

ಹೆಜ್ಜೆ ಹೆಜ್ಜೆಗೂ ಗಜಗಾತ್ರದ ತಗ್ಗುಗಳು ನಿರ್ಮಾಣವಾಗಿವೆ. ಇದರಿಂದಾಗಿ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವ ಸ್ಥಿತಿ ಉದ್ಭವಿಸಿದೆ.

ಮಾಗಡಿ ಗ್ರಾಮದಿಂದ ಲಕ್ಷ್ಮೇಶ್ವರದ ರೆಮೆನಂಟ್ ಸ್ಕೂಲ್‍ವರೆಗೆ ರಸ್ತೆಯಲ್ಲಿ ಮೊಣಕಾಲುದ್ದದ ಗುಂಡಿಗಳು ಪ್ರಯಾಣಿಕರ ಪ್ರಾಣಹರಣಕ್ಕಾಗಿ ಕಾಯುತ್ತಿವೆ. ಹಾಳಾದ ರಸ್ತೆಯಲ್ಲಿ ಸವಾರರು ವಾಹನಗಳನ್ನು ಓಡಿಸಲು ಹರ ಸಾಹಸ ಮಾಡುತ್ತಿದ್ದಾರೆ. ಗುಂಡಿ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಸವಾರರು ಕೈ ಕಾಲು ಮುರಿದುಕೊಳ್ಳುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ನಾಲ್ಕೈದು ದಿನಗಳ ಹಿಂದಷ್ಟೇ ಸಂಜೆ ಸಮಯದಲ್ಲಿ ಗುಂಡಿ ತಪ್ಪಿಸುವ ಭರದಲ್ಲಿ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದರೆ ಮತ್ತೊಬ್ಬ ಬಾಲಕ ಆಸ್ಪತ್ರೆಯಲ್ಲಿ ಅಸು ನೀಗಿದ ಘಟನೆ ಇನ್ನೂ ಜನರ ಮನದಲ್ಲಿ ಹಸಿರಾಗಿದೆ.

ADVERTISEMENT

ರಸ್ತೆಯಲ್ಲಿ ಲೆಕ್ಕವಿಲ್ಲದಷ್ಟು ಗುಂಡಿಗಳಿಂದಾಗಿ ಸಣ್ಣ ವಾಹನ ಹೋದರೂ ಭಾರಿ ದೂಳು ಹಾರುತ್ತಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತರುತ್ತಿದೆ. ಅಲ್ಲದೇ ನಿರಂತರವಾಗಿ ಹಾರುವ ದೂಳು ರಸ್ತೆಯ ಎರಡೂ ಬದಿಗಳಲ್ಲಿ ಇರುವ ಹೊಲಗಳಲ್ಲಿಯ ಬೆಳೆಗಳಿಗೆ ಮಾರಕವಾಗುತ್ತಿದೆ. ಭಾರಿ ವಾಹನದಟ್ಟಣೆ ಇರುವ ರಸ್ತೆಯಲ್ಲಿ ಹಗಲೂ ರಾತ್ರಿ ವಾಹನ ಸಂಚಾರ ಇದ್ದೇ ಇರುತ್ತದೆ. ಹೀಗಾಗಿ ದೂಳು ಈ ರಸ್ತೆಯಲ್ಲಿ ಸಾಮಾನ್ಯವಾಗಿದೆ. ಯಾವಾಗಲೂ ಹಾರುವ ದೂಳಿನಿಂದಾಗಿ ಜೋಳ, ಹತ್ತಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳಿಗೆ ಸಾಕಷ್ಟು ಹಾನಿ ಉಂಟಾಗುತ್ತಿದ್ದು ಇದು ರೈತರನ್ನು ಕಂಗೆಡಿಸಿದೆ.

ಹಾಳಾದ ರಸ್ತೆಯನ್ನು ಆದಷ್ಟು ಬೇಗನೇ ದುರಸ್ತಿ ಮಾಡಿಸುವಂತೆ ಹತ್ತಾರು ಬಾರಿ ಸಾರ್ವಜನಿಕರು ಹೋರಾಟ ಮಾಡಿದ್ದಾರೆ. ಆದರೆ ಅವರ ಹೋರಾಟಕ್ಕೆ ಯಾವುದೇ ಬೆಲೆ ಸಿಗುತ್ತಿಲ್ಲ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ.

‘ಪಾಳಾ-ಬಾದಾಮಿ ರಸ್ತೆಯನ್ನು ದುರಸ್ತಿ ಮಾಡಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರ ಶಾಪ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಟ್ಟುತ್ತದೆ’ ಎಂದು ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಹೇಳಿದರು.

ಸದ್ಯ ರಸ್ತೆಯಲ್ಲಿನ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ. ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು ಅನುದಾನ ಬಂದ ನಂತರ ರಸ್ತೆ ನಿರ್ಮಿಸಲಾಗುವುದು
ಫಕ್ಕೀರೇಶ ತಿಮ್ಮಾಪುರ ಎಇಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.