ನರೇಗಲ್: ‘ಉತ್ತಮ ಭಾಷೆ ಮನುಷ್ಯನ ಮನಸ್ಸನ್ನು ಪರಿವರ್ತಿಸುವಂತೆ ಅಂದ ಹಾಗೂ ಶುದ್ಧ ಬರವಣಿಗೆ ಶಿಕ್ಷಣದ ಪ್ರಗತಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ವಿಷಯ ಶಿಕ್ಷಕರು ವಿದ್ಯಾರ್ಥಿಗಳ ಭಾಷಾ ಸುಧಾರಣೆಗೆ ಹೆಚ್ಚು ಗಮನ ಹರಿಸಬೇಕು’ ಎಂದು ಸಂಪನ್ಮೂಲ ವ್ಯಕ್ತಿ ಕೆ.ಪಿ. ಸಾಲಿಮಠ ಹೇಳಿದರು.
ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಈಚೆಗೆ ನಡೆದ ಪ್ರೌಢಶಾಲಾ ಭಾಷಾ ಶಿಕ್ಷಕರ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರತಿ ವಿದ್ಯಾರ್ಥಿಯಲ್ಲೂ ಭಾಷಾ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರ ತರುವ ಹಾಗೂ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಯ ಬರವಣಿಗೆ, ವ್ಯಾಕರಣ ಹಾಗೂ ವಿಷಯ ಪ್ರಸ್ತುತಿಯ ಕಡೆ ಗಮನ ಹರಿಸಬೇಕು. ನಿರಂತರ ಅಧ್ಯಯನದ ಕಡೆ ಹೆಚ್ಚು ಒತ್ತು ನೀಡಿದರೆ ಸುಧಾರಿತ ಫಲಿತಾಂಶ ದೊರೆಯುತ್ತದೆ’ ಎಂದರು.
ಪ್ರೌಢಶಾಲೆ ಭೂದಾನಿ ಆನಂದ ಕುಲಕರ್ಣಿ ಮಾತನಾಡಿ, ‘ಮಕ್ಕಳ ಕಲಿಕೆಗಾಗಿ ಶಿಕ್ಷಕರು ಪಟ್ಟ ಪರಿಶ್ರಮ ಸಾರ್ಥಕವಾಗಬೇಕಾದರೆ ಪಾಲಕರು ಮಕ್ಕಳ ಕಲಿಕೆಯ ಬಗ್ಗೆ ಕಾಳಜಿ ವಹಿಸಬೇಕು. ಶಾಲೆಯಲ್ಲಿ ನಡೆಯುವ ಪಾಲಕರ ಸಭೆಗೆ ಹಾಜಾರಾಗಿ ಮಗುವಿನ ಕಲಿಕೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬೇಕು ಹಾಗೂ ನಿರಂತರ ಸಂಪರ್ಕದಲ್ಲಿರಬೇಕು’ ಎಂದರು.
ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿ, ‘8ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶುದ್ಧ ಭಾಷಾ ಸಾಮರ್ಥ್ಯ, ಸುಂದರ ಬರವಣಿಗೆ, ಸರಿಯಾದ ವ್ಯಾಕರಣ ಕಲಿಸಿದರೆ ಬುನಾದಿ ಭದ್ರವಾಗಿ ಮುಂದಿನ ಎಲ್ಲ ಫಲಿತಾಂಶಗಳಲ್ಲಿ ಉತ್ತಮ ಫಲಶ್ರುತಿ ಸಿಗುತ್ತದೆ’ ಎಂದರು.
ಸಂಪನ್ಮೂಲ ವ್ಯಕ್ತಿ ನಾಗಯ್ಯ ಹಿರೇಮಠ, ಎನ್.ಡಿ. ಪವಾರ, ಟಿ. ಸೋಮಶೇಖರ್ ಹವಾಲ್ದಾರ್, ಎಂ.ಎನ್. ಕಾಗದಾಳ ತರಬೇತಿ ನೀಡಿದರು. ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ ನೂರಾರು ಶಿಕ್ಷಕರು ತರಬೇತಿಯ ಪ್ರಯೋಜನ ಪಡೆದರು. ಮುಖ್ಯ ಶಿಕ್ಷಕಿ ಮುಂಡೆವಾಡಿ, ಈಸಿೊ ಲೋಕೇಶ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್, ಬಿಂಗಿ, ಜೆ.ಎಂ. ಜೋಶಿ, ಎಂ.ವಿ. ಜಾಧವ, ಡಿ.ಎಸ್. ಬಡಿಗೇರ, ಬಿ.ಟಿ. ತಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.