ADVERTISEMENT

ಲ್ಯಾಪ್‌ಟಾಪ್ ವಿತರಣೆಯಲ್ಲಿ ಗೊಂದಲ; ತಾರತಮ್ಯ ಆರೋಪ: ಅಧಿಕಾರಿಗಳಿಗೆ ಪೋಷಕರ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:58 IST
Last Updated 8 ಜುಲೈ 2024, 15:58 IST
ಕಾರ್ಮಿಕ ಇಲಾಖೆಯು ಮುಂಡರಗಿ ಪುರಸಭೆ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಲ್ಯಾಪ್‌ಟಾಪ್ ವಿತರಣಾ ಸಮಾರಂಭದಲ್ಲಿ ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು
ಕಾರ್ಮಿಕ ಇಲಾಖೆಯು ಮುಂಡರಗಿ ಪುರಸಭೆ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಲ್ಯಾಪ್‌ಟಾಪ್ ವಿತರಣಾ ಸಮಾರಂಭದಲ್ಲಿ ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು   

ಮುಂಡರಗಿ: ಅಧಿಕಾರಿಗಳು, ಕಾರ್ಮಿಕ ಮುಖಂಡರು ಹಾಗೂ ವಿದ್ಯಾರ್ಥಿಗಳ ಮಾತಿನ ಚಕಮಕಿಯಿಂದ ಕಾರ್ಮಿಕ ಇಲಾಖೆಯು ಪಟ್ಟಣದ ಪುರಸಭೆ ಗಾಂಧಿಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣಾ ಸಮಾರಂಭವು ಗೊಂದಲದ ಗೂಡಾಗಿ ಮಾರ್ಪಟ್ಟಿತು.

ಸಮಾರಂಭ ಆರಂಭಕ್ಕೂ ಪೂರ್ವದಲ್ಲಿ ವೇದಿಕೆಯ ಮುಂಭಾಗದಲ್ಲಿ ಜಮಾಯಿಸಿದ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಪಾಲಕರು ಲ್ಯಾಪ್‌ಟಾಪ್ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳು ತಾರತಮ್ಯ ಎಸಗಿದ್ದು, ಮೊದಲು ಯಾದಿಯನ್ನು ಸರಿಪಡಿಸಬೇಕು. ನಂತರ ಲ್ಯಾಪ್‌ಟಾಪ್ ವಿತರಿಸಬೇಕು ಎಂದು ತಕರಾರು ತಗೆದರು.

ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಫಲಾನುಭವಿಗಳ ಯಾದಿಯನ್ನು ತಯಾರಿಸಿದ್ದಾರೆ. ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರಲ್ಲದವರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದ್ದು, ಅನ್ಯಾಯವನ್ನು ಸರಿಪಡಿಸಿ ಲ್ಯಾಪ್‌ಟಾಪ್ ವಿತರಿಸಬೇಕು. ಇಲ್ಲದಿದ್ದರೆ ಯಾರಿಗೂ ಲ್ಯಾಪ್‌ಟಾಪ್ ವಿತರಿಸಬಾರದು ಎಂದು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ADVERTISEMENT

‘ಕಾರ್ಮಿಕ ಇಲಾಖೆಯ ಅಧಿಕಾರಿಗಳು ಯಾವ ಕಾರ್ಮಿಕ ಸಂಘಟನೆಗಳಿಗೂ ಲ್ಯಾಪ್‌ಟಾಪ್ ವಿತರಣಾ ಸಮಾರಂಭದ ಮಾಹಿತಿ ನೀಡಿರುವುದಿಲ್ಲ. ಹೀಗಾಗಿ ಸಾಕಷ್ಟು ಕಾರ್ಮಿಕರಿಗೆ ಸಮಾರಂಭ ಹಾಗೂ ಲ್ಯಾಪ್‌ಟಾಪ್ ವಿತರಣೆಯ ವಿಷಯ ಗೊತ್ತಿಲ್ಲ. ಯಾರಿಗೆ ವಿತರಿಸಲಾಗುತ್ತಿದೆ ಎನ್ನುವುದು ಎಲ್ಲ ಕಾರ್ಮಿಕರಿಗೂ ತಿಳಿಯುವಂತಾಗಬೇಕು’ ಎಂದು ಕಾರ್ಮಿಕ ಮುಖಂಡರು ಒತ್ತಾಯಿಸಿದರು.

‘ಅಧಿಕಾರಿಗಳು ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ, ವಾಸ್ತವಾಂಶಗಳನ್ನು ಅರಿತುಕೊಳ್ಳದೆ ತಮ್ಮ ಮನ ಬಂದಂತೆ ಯಾದಿಯನ್ನು ತಯಾರಿಸಿದ್ದಾರೆ. ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಕಡೆಗಣಿಸಿ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ಮೊದಲು ಯಾದಿಯನ್ನು ಸರಿಪಡಿಸಿ ನಂತರ ಲ್ಯಾಪ್ ಟಾಪ್ ವಿತರಿಸಬೇಕು’ ಎಂದು ಕಾರ್ಮಿಕ ಮಹಮ್ಮದ್‌ ರಫಿ ಹವಾಲ್ದಾರ ಅವರು ತಮ್ಮ ಮಗಳನ್ನು ವೇದಿಕೆ ಮುಂದೆ ಕುಳ್ಳರಿಸಿ ಪ್ರತಿಭಟನೆಗೆ ಮುಂದಾದರು.

ಅಂಕಗಳನ್ನು ಆಧರಿಸಿ ಅಧಿಕಾರಿಗಳು ತಯಾರಿಸಿದ ಯಾದಿಯನ್ನು ಪ್ರದರ್ಶಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಭಗವಂತ ಪತ್ತಾರ ಮಾತನಾಡಿ, ‘ಈ ಹಿಂದಿನ ಅಧಿಕಾರಿಗಳು ತಯಾರಿಸಿದ ಯಾದಿಯ ಪ್ರಕಾರ ಲ್ಯಾಪ್‌ಟಾಪ್ ವಿತರಿಸಲಾಗುತ್ತದೆ. ಯಾದಿಯಲ್ಲಿರುವ ಒಬ್ಬ ವಿದ್ಯಾರ್ಥಿಯ ಮಾಹಿತಿಯನ್ನು ಪುನರ್ ಪರಿಶೀಲಿಸಲಾಗುವುದು. ಇನ್ನುಳಿದ 9 ಫಲಾನುಭವಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುವುದು. ಅನ್ಯಾಯವಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುವುದು’ ಎಂದು ತಿಳಿಸಿದರು.

ನಂತರ ಶಾಸಕ ಡಾ.ಚಂದ್ರು ಲಮಾಣಿ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು.
ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಕಾರ್ಮಿಕ ಮುಖಂಡರಾದ ಅಡಿವೆಪ್ಪ ಚಲುವಾದಿ, ರೆಹಮಾನ್ ಸಾಬ್, ಬಸಯ್ಯ ನಿಸರ್ಗಮಠ, ರಾಮಪ್ಪ ಪವಾರ ಇದ್ದರು.

ಶಾಸಕ ಲಮಾಣಿ ಮಧ್ಯಪ್ರವೇಶ

ಲ್ಯಾಪ್‌ಟಾಪ್‌ ಸಂಬಂಧಿಸಿ ಗಲಾಟೆ ಹೆಚ್ಚುತ್ತಿದ್ದಂತೆಯೇ ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಶಾಸಕ ಡಾ.ಚಂದ್ರು ಲಮಾಣಿ ಮಧ್ಯಪ್ರವೇಶಿಸಿದರು.

‘ಲ್ಯಾಪ್‌ಟಾಪ್ ಪಡೆದುಕೊಳ್ಳಲು ತಾಲ್ಲೂಕಿನಾದ್ಯಂತ ಒಟ್ಟು 724 ಅರ್ಜಿಗಳು ಬಂದಿದ್ದವು. ಕಾರ್ಮಿಕರ ಮಕ್ಕಳಿಗೆ ವಿತರಿಸಲು ಕೇವಲ 10 ಲ್ಯಾಪ್‌ಟಾಪ್ ಬಂದಿವೆ. ಫಲಾನುಭವಿಗಳ ಯಾದಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಯಾದಿ ತಯಾರಿಕೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಶಾಸಕ ಲಮಾಣಿ ಸ್ಪ‍ಷ್ಟಪಡಿಸಿದರು.

‘ಅನ್ಯಾಯವಾಗುವ ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ವಂತ ಹಣದಿಂದ ಅವರಿಗೆ ಲ್ಯಾಪ್‌ಟಾಪ್ ಕೊಡಬೇಕು. ಅಥವಾ ಫಲಾನುಭವಿಗಳ ಯಾದಿಯನ್ನು ಪುನರ್ ಪರಿಶೀಲಿಸಿ ಹೊಸ ಯಾದಿಯನ್ನು ತಯಾರಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.