ADVERTISEMENT

ನರಗುಂದ | ಸಾಕಾರಗೊಳ್ಳದ ಏತನೀರಾವರಿ: ತಲುಪದ ಕಾಲುವೆ ನೀರು, ಕಿತ್ತುಹೋದ ಪೈಪುಗಳು

ಬಸವರಾಜ ಹಲಕುರ್ಕಿ
Published 11 ನವೆಂಬರ್ 2024, 4:47 IST
Last Updated 11 ನವೆಂಬರ್ 2024, 4:47 IST
ನರಗುಂದ ತಾಲ್ಲೂಕಿನ ಸುರಕೋಡದ ಬೆಣ್ಣೆಹಳ್ಳದ ದಂಡೆಗೆ ನಿರ್ಮಿಸಿದ ಏತ ನೀರಾವರಿ ಜಾಕವೆಲ್ ಸ್ಥಗಿತಗೊಂಡಿದೆ
ನರಗುಂದ ತಾಲ್ಲೂಕಿನ ಸುರಕೋಡದ ಬೆಣ್ಣೆಹಳ್ಳದ ದಂಡೆಗೆ ನಿರ್ಮಿಸಿದ ಏತ ನೀರಾವರಿ ಜಾಕವೆಲ್ ಸ್ಥಗಿತಗೊಂಡಿದೆ   

ನರಗುಂದ: ತಾಲ್ಲೂಕು ಅರೆ ನೀರಾವರಿ ಪ್ರದೇಶವಾಗಿದ್ದು, ಮಲಪ್ರಭಾ ಕಾಲುವೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಯದ ಕಾರಣ ರೈತರು ನಿರಂತರವಾಗಿ ಕಷ್ಟಗಳನ್ನು ಎದುರಿಸುವಂತಾಗಿದೆ. ಪಹಣಿ ಪತ್ರಿಕೆಗಳಲ್ಲಿ ನೀರಾವರಿ ಎಂದು ನಮೂದಾದರೂ ಜಮೀನುಗಳಿಗೆ ಕಾಲುವೆ ನೀರು ಹರಿಯದೇ ಪ್ರತಿವರ್ಷ ಬೆಳೆ ಬೆಳೆಯದ ಸ್ಥಿತಿ ಇಲ್ಲಿದೆ.

ಅದರಲ್ಲೂ ಮಲಪ್ರಭಾ ಕಾಲುವೆಯ ಕೆಳಹಂತದ ರೈತರಿಗೆ ಕಾಲುವೆ ನೀರು ತಲುಪುವುದು ಕನಸಿನ ಮಾತೇ ಸರಿ ಎನ್ನುವಂತಾಗಿದೆ. ಈ ಭಾಗದ ರೈತರಿಗೆ ನೀರು ತಲುಪಿಸುವ ಸಲುವಾಗಿ ಬೆಣ್ಣೆಹಳ್ಳದ ನೀರನ್ನು ಕಾಲುವೆಗಳಿಗೆ ಹರಿಸಲು ಹಳ್ಳದ ದಂಡೆಗೆ ಏತ ನೀರಾವರಿ ಯೋಜನೆ ರೂಪಿಸಲಾಯಿತು. ಎರಡು ದಶಕಗಳ ಹಿಂದೆಯೇ ಏಳು ಏತ ನೀರಾವರಿ ಯೋಜನೆ ಜಾರಿ ಮಾಡಿ ಅಲ್ಲಲ್ಲಿ ಜಾಕವೆಲ್‌ಗಳನ್ನು ನಿರ್ಮಿಸಲಾಯಿತು. ಅವೆಲ್ಲವೂ ಸ್ಥಗಿತಗೊಂಡಿದ್ದು, ಇಂದು ಅಸ್ಥಿಪಂಜರದಂತೆ ಕಾಣುತ್ತಿವೆ. ಜಾಕ್‌ವೆಲ್‌ನ ಯಂತ್ರೋಪಕರಣಗಳು ಹಾಳಾಗಿವೆ. ವಿದ್ಯುತ್‌ ಪರಿವರ್ತಕಗಳು ಕಳವಾಗಿವೆ. ಕಬ್ಬಿಣದ ಪೈಪ್‌ಗಳು ತುಕ್ಕು ಹಿಡಿದಿವೆ.

ಮೂರು ಏತನೀರಾವರಿ ಯೋಜನೆ ರೂಪಿಸಿ ಜಾಕ್‌ವೆಲ್ ನಿರ್ಮಿಸಲಾಯಿತು. ಅವುಗಳು ಸುಸಜ್ಜಿತವಾಗಿ ಆರಂಭಗೊಂಡರೂ ಟಿಸಿ ಕಳವಾದ ಪರಿಣಾಮ ವಿದ್ಯುತ್ ಪೂರೈಕೆಯಾಗದೇ ಅವು ಕೂಡ ಸ್ಥಗಿತಗೊಂಡಿವೆ. ಹೀಗೆ ಒಟ್ಟು 10 ಜಾಕವೆಲ್‌ಗಳನ್ನು ಆರಂಭಿಸಿದರೂ ಅವು ದಾಖಲೆಗಳಲ್ಲಿ ಮತ್ತು ಕಟ್ಟಡ ರೂಪದಲ್ಲಿ ಕಾಣುತ್ತಿವೆಯೇ ಹೊರತು; ಅವುಗಳಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ಹಳ್ಳದ ನೀರು ಪೋಲಾಗುತ್ತಿದೆ. ಇದರ ಜತೆಗೆ ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನ ಕೂಡ ಪೋಲಾದಂತಾಗಿದೆ.

ADVERTISEMENT

ಈ ಸಂಬಂಧ ರೈತರು ಪ್ರತಿಭಟನೆ ನಡೆಸಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದಾಗ ಎಚ್ಚೆತ್ತ ಅಧಿಕಾರಿಗಳು ಆ ಸಂದರ್ಭದಲ್ಲಿ ದುರಸ್ತಿ ಮಾಡಿ ಜಾಕವೆಲ್ ಆರಂಭಿಸಿದ್ದರು. ಆನಂತರ ಮತ್ತೇ ಸ್ಥಗಿತಗೊಂಡಿದ್ದೇ ಹೆಚ್ಚಾಗಿದೆ. ಇದರಿಂದ ರೈತರು ನಮ್ಮ ಜಮೀನುಗಳಿಗೆ ನೀರು ಹರಿಯುವುದಾದರೂ ಯಾವಾಗ? ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. 

ಏನಿದು ಏತನೀರಾವರಿ ಯೋಜನೆ?:

ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾದಾಗ ಮಲಪ್ರಭಾ ನದಿಯ ಸವದತ್ತಿ ಬಳಿಯ ನವಿಲು ತೀರ್ಥ ಜಲಾಶಯದಿಂದ ತಾಲ್ಲೂಕಿನ ಮಲಪ್ರಭಾ ಕಾಲುವೆಗಳಿಗೆ ನೀರು ಹರಿಸುವುದು ಸಾಮಾನ್ಯ.

ಆದರೆ ತಾಲ್ಲೂಕಿನ 10ಕ್ಕೂ ಹೆಚ್ಚು ಗ್ರಾಮಗಳ ಶೇ 50ರಷ್ಟು ಭೂಮಿಗೆ ಕಾಲುವೆಗೆ ನೀರು ಹರಿಯುವುದೇ ಇಲ್ಲ. ಇದರಿಂದ ಅವರು ನೀರಾವರಿಯಿಂದ ವಂಚಿತರಾಗುವಂತಾಗಿತ್ತು. ಇದನ್ನು ಅರಿತ ಅಂದಿನ ಸರ್ಕಾರ ಬೆಣ್ಣೆಹಳ್ಳದಿಂದ ಜಾಕ್‌ವೆಲ್ ಮೂಲಕ ಕಾಲುವೆಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಿತು. ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ ಮುಖ್ಯ ಕಾಲುವೆಗಳವರೆಗೂ ಬೃಹತ್ ಸಿಮೆಂಟ್ ಪೈಪು ಜೋಡಿಸಿ ನೀರು ಹರಿಸಲು ಮುಂದಾಯಿತು.

ಆರಂಭದಲ್ಲಿ ಸುರಕೋಡ, ಮೂಗನೂರ, ಬನಹಟ್ಟಿ, ಕುರ್ಲಗೇರಿ, ರಡ್ಡೇರನಾಗನೂರ, ಕೊಣ್ಣೂರ ಗ್ರಾಮದಲ್ಲಿ ಎರಡು ಸೇರಿದಂತೆ ಏಳು ಜಾಕವೆಲ್ ನಿರ್ಮಿಸಿತು. ಆದರೆ ಇಲ್ಲಿಂದ ನೀರು ಹರಿಯಲು ಅಳವಡಿಸಿದ ಸಿಮೆಂಟ್ ಪೈಪುಗಳು ಅಲ್ಲಲ್ಲಿ ಒಡೆದ ಪರಿಣಾಮ ನೀರು ಹರಿಯಲಿಲ್ಲ. ಇದರಿಂದ ಈ ಯೋಜನೆ ಇದ್ದು ಇಲ್ಲದಂತಾಯಿತು.

ಇವುಗಳಿಗೆ ಕಾವಲಿಲ್ಲದ ಪರಿಣಾಮ ಕಳ್ಳರು ಟಿಸಿಗಳಲ್ಲಿನ ಲಕ್ಷಾಂತರ ರೂಪಾಯಿಯ ಬೆಲೆ ಬಾಳುವ ತಾಮ್ರ ತಂತಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಜಾಕ್‌ವೆಲ್‌ಗಳು ರೈತರಿಗೆ ತೀರಾ ಅಗತ್ಯವಿದ್ದು, ಪೈಪುಗಳನ್ನು ಬದಲಿಸಿ ಕಬ್ಬಿಣದ ಪೈಪುಗಳನ್ನು ಜೋಡಿಸಬೇಕಿದೆ. ಇದು ರೈತರ ಆಗ್ರಹವೂ ಆಗಿದೆ. ಇದಕ್ಕೆ ನೀರಾವರಿ ಇಲಾಖೆ ಮುಂದಾದರೂ ಸರ್ಕಾರದಿಂದ ಇದು ಸಾಕಾರಗೊಳ್ಳದಿರುವುದು ರೈತರು ಆಕ್ರೋಶಗೊಂಡಿದ್ದಾರೆ.

ಜಾಕ್‌ವೆಲ್‌ಗಳ ಟಿಸಿ ಕಳವು: ದಶಕದ ಹಿಂದೆ ನಿರ್ಮಿಸಲಾದ ಗಂಗಾಪುರ, ಮದಗುಣಕಿ, ಜಾಕ್‌ವೆಲ್‌ಗಳಿಗೆ ಕಬ್ಬಿಣದ ಪೈಪು ಅಳವಡಿಸಿ ಇನ್ನೇನು ನೀರು ಹರಿಸುವ ಅಂತಿಮ ಹಂತದಲ್ಲಿ ಇತ್ತು. ನೀರು ಹರಿಸಿ ಪರೀಕ್ಷೆ ಕೂಡ ಮಾಡಲಾಗಿತ್ತು. ಆದರೆ ಕಿಡಿಗೇಡಿಗಳು ತಮ್ಮ ಕೈ ಚಳಕ ಪ್ರದರ್ಶಿಸಿ ಎರಡು ಜಾಕ್‌ವೆಲ್‌ಗಳ ಟಿಸಿ ತೆಗೆದು ಅದರಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ತಾಮ್ರದ ತಂತಿ ಹಾಗೂ ವಿವಿಧ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದರಿಂದ ಇವು ಆರಂಭವಾಗಲಿಲ್ಲ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ಎನ್ನುತ್ತಾರೆ ರೈತರು.

ಹೀಗೆ ಒಂದಿಲ್ಲೊಂದು ಕಾರಣದಿಂದ 10 ಜಾಕ್‌ವೆಲ್‌ಗಳು ಇದ್ದೂ ಇಲ್ಲದಂತಾಗಿವೆ. ನೀರಾವರಿ ಇಲಾಖೆಯ ನಿರ್ಲಕ್ಷ್ಯ ಹಾಗೂ ಜಾಕ್‌ವೆಲ್‌ಗಳ ಅಸಮರ್ಪಕ ನಿರ್ವಹಣೆ, ಕಾವಲು ಕಾಯದೇ ಇರುವ ಕಾರಣ ಇಂದು ಏತ ನೀರಾವರಿ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ದುರಸ್ತಿಗೆ ಅನುದಾನದ ಕೊರತೆ, ನಿರ್ವಹಣೆ ಹಾಗೂ ನೀರಾವರಿ ಇಲಾಖೆಯ ಬೇಜವಾಬ್ದಾರಿ, ಸಿಬ್ಬಂದಿ ಕೊರತೆಯೂ ಕಾರಣವಾಗಿದೆ ಎಂದು ರೈತರು ದೂರಿದ್ದಾರೆ.

ಹಿಂಗಾರು ಬೆಳೆಗಳಿಗೆ ಕಡ್ಡಾಯವಾಗಿ ನೀರಿನ ಅವಶ್ಯಕತೆ ಇದೆ. ಈ ಜಾಕ್‌ವೆಲ್‌ಗಳು ಆರಂಭಗೊಂಡಿದ್ದರೆ 15 ಗ್ರಾಮಗಳ ಸುಮಾರು 25 ಸಾವಿರ ಎಕರೆ ಭೂಮಿಗೆ ನೀರು ಹರಿಯುತ್ತಿತ್ತು. ಆದರೆ ಅನುದಾನ ಬಾರದ ಪರಿಣಾಮ ರೈತರು ಮತ್ತೇ ಜಾಕ್‌ವೆಲ್ ಆರಂಭಗೊಳ್ಳುವುದು ಯಾವಾಗ ಎಂದು ಕನವರಿಸುವಂತಾಗಿದೆ.

ನರಗುಂದ ತಾಲ್ಲೂಕಿನ ಸುರಕೋಡದ ಬೆಣ್ಣೆಹಳ್ಳದ ದಂಡೆಗೆ ನಿರ್ಮಿಸಿದ ಏತ ನೀರಾವರಿಯ ಕಂಟ್ರೋಲ್ ರೂಂ ಗಿಡಗಂಟಿಗಳಲ್ಲಿ ಮುಚ್ಚಿಕೊಂಡಿದೆ

ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ

‘ಜಾಕವೆಲ್ ಸ್ಥಗಿತಗೊಳ್ಳಲು ಮುಖ್ಯವಾಗಿ ಅವುಗಳ ದುರಸ್ತಿಗೆ ಪೈಪ್‌ಗಳ ಬದಲಾವಣೆಗೆ ಅನುದಾನದ ಕೊರತೆ ಇದೆ. ಇದಕ್ಕಾಗಿ ಸರ್ಕಾರಕ್ಕೆ ಶಾಸಕರ ಮೂಲಕ ಮನವಿ ಮಾಡಲಾಗಿದೆ’ ಎಂದು ಸಹಾಯಕ ಕಾರ್ಯನಿರ್ವಾಹಕರ ಎಂಜಿನಿಯರ್ ಮಹೇಶ ಓಲೇಕಾರ ತಿಳಿಸಿದ್ದಾರೆ. ‘ಟಿಸಿ ಕಳವಾದ ಎರಡು ಜಾಕವೆಲ್‌ಗಳ ಆರಂಭಕ್ಕೆ ಇಲಾಖೆಯ ಹಣದ ಮೂಲಕ ಸಾಮಗ್ರಿ ಒದಗಿಸಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಉಳಿದ ಜಾಕವೆಲ್‌ಗಳು ಸಂಪೂರ್ಣ ಅನುದಾನ ಬಂದ ಮೇಲೆ ಪೈಪ್ ಬದಲಾಯಿಸಿ ಆರಂಭಿಸಲಾಗುವುದು. ಮೂಗನೂರ ಜಾಕವೆಲ್ ಸರಿಪಡಿಸಲಾಗಿದ್ದು ಶೀಘ್ರ ಆರಂಭವಾಗಲಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜನರು ಏನಂತಾರೆ?

ಜಾಕ್‌ವೆಲ್ ಸರಿಪಡಿಸಿ

ಹದಲಿ- ಮದಗುಣಕಿ ಗಂಗಾಪುರ ಜಾಕ್‌ವೆಲ್‌ಗಳು  ವ್ಯವಸ್ಥಿತ ವಾಗಿ ನಿರ್ಮಾಣಗೊಂಡಿವೆ. ಆದರೆ ಈಚೆಗೆ ಅವುಗಳ ಟಿಸಿ ಕಳವು ಆಗಿದ್ದರಿಂದ ಬಂದ್ ಆಗಿವೆ. ಈಗ ಹಿಂಗಾರು ಹಂಗಾಮಿಗೆ ಜಾಕ್‌ವೆಲ್ ಅವಶ್ಯವಿದೆ. ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಆದರೆ ಅದರಿಂದ ನೀರು ಪಡೆಯದ ಸ್ಥಿತಿ ಇಲ್ಲಿದೆ. ಎರಡು ವಾರದೊಳಗೆ ನೀರಾವರಿ ಇಲಾಖೆ ಟಿ.ಸಿ. ಅಳವಡಿಸಿ ಜಾಕ್‌ವೆಲ್ ಸರಿಪಡಿಸಬೇಕು.

–ವೀರಣ್ಣ ಸಾಸಳ್ಳಿ ರೈತ ಹದಲಿ

ತುಕ್ಕು ಹಿಡಿದ ಸಾಧನ

20 ವರ್ಷಗಳ ಹಿಂದೆ ನಿರ್ಮಾಣಗೊಂಡ ಸುರಕೋಡ ಜಾಕ್‌ವೆಲ್ ಆರಂಭದಲ್ಲಿ ಎರಡು ತಿಂಗಳು ನೀರು ಹರಿಸಿದ್ದು ಬಿಟ್ಟರೆ ನಂತರ ನೀರು ಹರಿಯಲೇ ಇಲ್ಲ. ಇದಕ್ಕೆ ಯಾರ ಕಾಳಜಿಯೂ ಇಲ್ಲ. ತಾಲ್ಲೂಕಿನಲ್ಲಿಯೇ ಈ ಜಾಕ್‌ವೆಲ್ ಹೆಚ್ಚಿನ ಭೂಮಿಗೆ ನೀರು ಹರಿಸುತ್ತಿತ್ತು. ಈಗಂತೂ ಈ ಜಾಕ್‌ವೆಲ್‌ನ ಎಲ್ಲ ಸಾಮಗ್ರಿಗಳು ಕಳುವಾಗಿವೆ. ಇದ್ದವು ತುಕ್ಕು ಹಿಡಿದಿವೆ. ಸರ್ಕಾರ ರೈತರ ಹಿತದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಜಾಕವೆಲ್ ದುರಸ್ತಿ ಮಾಡಬೇಕು.

–ಜೆ.ಎ.ಮುಲ್ಲಾನವರ ರೈತ ಸುರಕೋಡ

ಇದ್ದರೂ ಇಲ್ಲ

ಏತ ನೀರಾವರಿ ಯೋಜನೆ ಇದ್ದೂ ಇಲ್ಲದಂತಾಗಿದೆ. ನೀರಾವರಿ ಇಲಾಖೆ ರೈತರ ಬವಣೆ ಅರಿತು ಅನುದಾನ ಬಿಡುಗಡೆ ಮಾಡಿ ಜಾಕ್‌ವೆಲ್ ಪೈಪ್ ಬದಲಿಸಿ ದುರಸ್ತಿ ಮಾಡಬೇಕು. –ಯಲ್ಲಪ್ಪ ಚಲುವನ್ನವರ ರೈತ ಕುರ್ಲಗೇರಿ ಹೋರಾಟ ಅನಿವಾರ್ಯ ರೈತರೆಂದರೆ ಸರ್ಕಾರಗಳಿಗೆ ಕಾಳಜಿ ಇಲ್ಲ. ಜಾಕವೆಲ್‌ಗಳ ಸಮಸ್ಯೆ ಎರಡು ದಶಕಗಳದ್ದು. ಎಲ್ಲ ಪಕ್ಷಗಳ ಸರ್ಕಾರ ಆಡಳಿತ ನಡೆಸಿವೆ. ಆದರೆ ದುರಸ್ತಿಗೆ ಕ್ರಮವಹಿಸಿಲ್ಲ. ಎಲ್ಲವನ್ನೂ ಹೋರಾಟ ಮಾಡಿ ಪಡೆಯಬೇಕಿದೆ. ಇದಕ್ಕೂ ಹೋರಾಟ ಮಾಡಬೇಕಾಗುತ್ತದೆ.

–ವಿಠಲ ಜಾಧವ ನರಗುಂದ

₹80 ಕೋಟಿ ಟೆಂಡರ್!

ನವಲಗುಂದ ತಾಲ್ಲೂಕಿನ ಎರಡು ಹಾಗೂ ನರಗುಂದ ತಾಲ್ಲೂಕಿನ 10 ಜಾಕ್‌ವೆಲ್‌ ಪೈಪುಗಳ ಬದಲಾವಣೆ ಹಾಗೂ ಸಂಪೂರ್ಣ ದುರಸ್ತಿಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದು ಲೋಕೋಪಯೋಗಿ ಸಚಿವರಾಗಿದ್ದ ಇಂದಿನ ನರಗುಂದ ಶಾಸಕ ಸಿ.ಸಿ.ಪಾಟೀಲ ಅವರ ಪ್ರಯತ್ನದ ಫಲವಾಗಿ ₹80 ಕೋಟಿ ಅನುದಾನ ಬಿಡುಗಡೆಯಾಗಿ ಭೂಮಿ ಪೂಜೆಯೂ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಸರ್ಕಾರ ಬದಲಾದ ಪರಿಣಾಮ ಆ ಅನುದಾನ ಬರಲೇ ಇಲ್ಲ. ಜಾಕ್‌ವೆಲ್ ಕಾಮಗಾರಿ ನಡೆಯಲೇ ಇಲ್ಲ. ಇಂದಿಗೂ ಕಾಮಗಾರಿ ಆರಂಭಿಸಲು ನೀರಾವರಿ ಇಲಾಖೆಯಿಂದ ನಿರಂತರ ಪ್ರಯತ್ನ ಪತ್ರ ವ್ಯವಹಾರ ನಡೆಯುತ್ತಲೇ ಇದೆ. ಅದು ಸಾಕಾರಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.