ADVERTISEMENT

ಗದಗ | ರಾಜಿಗೆ 4,297 ಪ್ರಕರಣಗಳ ಗುರುತು: 16 ಬೆಂಚ್‌ ರಚನೆ

ರಾಷ್ಟ್ರೀಯ ಲೋಕ ಅದಾಲತ್ ಜುಲೈ 13ಕ್ಕೆ: ನ್ಯಾಯಾಧೀಶ ಬಸವರಾಜ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:19 IST
Last Updated 4 ಜುಲೈ 2024, 14:19 IST
ಗದಗ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಸವರಾಜ (ಬಲತುದಿ) ಅವರು ಜುಲೈ 13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಕುರಿತಾದ ಮಾಹಿತಿ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ಹಾಜರಿದ್ದರು
ಗದಗ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಸವರಾಜ (ಬಲತುದಿ) ಅವರು ಜುಲೈ 13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಕುರಿತಾದ ಮಾಹಿತಿ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ಹಾಜರಿದ್ದರು   

ಗದಗ: ‘ಜಿಲ್ಲೆಯಲ್ಲಿ ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಜಿ ಆಗಬಹುದಾದ 4,297 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ತಿಳಿಸಿದರು.

‘ಜಿಲ್ಲೆಯಲ್ಲಿ ರಾಜಿ ಸಂಧಾನಕ್ಕಾಗಿ ಪ್ರತಿಯೊಂದು ನ್ಯಾಯಾಲಯಕ್ಕೆ ಒಂದು ಬೆಂಚ್‌ನಂತೆ ಒಟ್ಟು 16 ಬೆಂಚ್‌ಗಳನ್ನು ರಚಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಒಟ್ಟು 20,130 ವಿವಿಧ ಬಗೆಯ ಚಾಲ್ತಿ ಪ್ರಕರಣಗಳಿದ್ದು, ಅದರಲ್ಲಿ ಈಗಾಗಲೇ ರಾಜಿ ಆಗಬಹುದಾದ 4,297 ಪ್ರಕರಣಗಳನ್ನು ಗುರುತಿಸಲಾಗಿದೆ’ ಎಂದು ಗುರುವಾರ ಮಾಹಿತಿ ನೀಡಿದರು.

‘ರಾಜಿಗೆ ಗುರುತಿಸಿರುವ ಪ್ರಕರಣಗಳಲ್ಲಿ ಸಿವಿಲ್ ದಾವೆಗಳು ಅಂದರೆ ಜಮೀನುಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು, ಮನೆ ಹಾಗೂ ನಿವೇಶನಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್‌ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಮರಳು ಕಳ್ಳ ಸಾಗಣೆ ಪ್ರಕರಣಗಳು, ಚೆಕ್‍ಬೌನ್ಸ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ರಾಜಿ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ಗುರುತಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ರಾಜಿಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂಧಪಟ್ಟ ವಕೀಲರು ಹಾಗೂ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ತಿಳಿಸಲಾಗಿದೆ. ರಾಜಿ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಅವರಿಗೆ ತಿಳಿ ಹೇಳಲಾಗಿದೆ. ಜತೆಗೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಹಾಗೂ ನಿಗಮ ಮಂಡಳಿಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ತಿಳಿಯಪಡಿಸಲಾಗಿದೆ’ ಎಂದು ಹೇಳಿದರು.

‘ಪ್ರಕರಣಗಳಿಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳವರು ಜುಲೈ 13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಪಾಲ್ಗೊಂಡು ತಮ್ಮ ವ್ಯಾಜ್ಯಗಳನ್ನು ರಾಜಿ ಮೂಲಕ ಪರಿಹರಿಸಿಕೊಂಡರೆ ಆರ್ಥಿಕ ಹೊರೆ ಹಾಗೂ ಸಮಯ ಪೋಲಾಗುವುದನ್ನು ತಪ್ಪಿಸಬಹುದು. ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥವಾದರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು. ಒಮ್ಮೆ ಇಲ್ಲಿ ಇತ್ಯರ್ಥವಾದರೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ’ ಎಂದು ತಿಳಿಸಿದರು.

‘ಜಿಲ್ಲೆಗೆ ಸಂಬಂಧಿಸಿದ ಅಪಘಾತ ಪರಿಹಾರ, ಜೀವನಾಂಶ, ಚೆಕ್ ಬೌನ್ಸ್ ಸೇರಿದಂತೆ ಇತರೆ ಒಟ್ಟು 14 ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿವೆ. ಇವರುಗಳನ್ನು ಸಹ ಲೋಕ ಅದಾಲತ್‍ನಲ್ಲಿ ರಾಜಿಗೆ ಪರಿಗಣಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಇದ್ದರು.

23420 ಪ್ರಕರಣಗಳ ಇತ್ಯರ್ಥ

2024ರ ಮಾರ್ಚ್‌ನಲ್ಲಿ ನಡೆದ ಲೋಕ ಅದಾಲತ್‍ನಲ್ಲಿ 2033 ಚಾಲ್ತಿ ಪ್ರಕರಣಗಳನ್ನು ಹಾಗೂ 21387 ವ್ಯಾಜ್ಯಪೂರ್ವ ಪ್ರಕರಣಗಳನ್ನು ಸೇರಿ ಒಟ್ಟು 23420 ಪ್ರಕರಣಗಳ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಸವರಾಜ ತಿಳಿಸಿದರು. ‘ಇದರಲ್ಲಿ ವಿಶೇಷವಾಗಿ 16 ಕೌಟುಂಬಿಕ ಪ್ರಕರಣಗಳನ್ನು ಪುನಃ ಒಂದುಗೂಡಿಸಿ ಕಳುಹಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.