ADVERTISEMENT

ಇದೇನು ಬಿಹಾರ, ಉತ್ತರ ಪ್ರದೇಶವೇ?: ಲೋಕಾಯುಕ್ತ ಡಿವೈಎಸ್‌ಪಿ

ಜನಸಂಪರ್ಕ ಸಭೆ: ತಾ.ಪಂ. ಅಧಿಕಾರಿಗೆ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:59 IST
Last Updated 10 ಜುಲೈ 2024, 15:59 IST
ರೋಣ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು
ರೋಣ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು   

ರೋಣ: ‘ರೋಣ ಮತ್ತು ಗಜೇಂದ್ರಗಡ ತಾಲ್ಲೂಕುಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾನೂನಿನ ನಿಯಮ ಮೀರಿ ಲೇಔಟ್‌ಗಳ ನಿರ್ಮಾಣಕ್ಕೆ ಅವಕಾಶ ನೀಡುತ್ತಿರುವುದಕ್ಕೆ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಸರ್ಕಾರದ ಕಾನೂನು ಪಾಲಿಸದೇ ತಮಗೆ ಮನಬಂದಂತೆ ಪಿಡಿಒಗಳು ಅಧಿಕಾರ ನಡೆಸುತ್ತಾರೆ. ಇದೇನು ಬಿಹಾರ ಹಾಗೂ ಉತ್ತರ ಪ್ರದೇಶ ಎಂದು ತಿಳಿದುಕೊಂಡಿದ್ದಾರೆಯೇ’ ಎಂದು ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ತಾಲ್ಲೂಕು ಪಂಚಾಯಿತಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಹಶಿಲ್ದಾರ್‌ ಕಾರ್ಯಾಲಯದಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯ ಆಡಳಿತ ವೈಖರಿಯನ್ನು ನೋಡಿದರೆ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳ ವ್ಯವಸ್ಥೆ ಬಿಹಾರ ಹಾಗೂ ಉತ್ತರ ಪ್ರದೇಶಗಳನ್ನು ಕಂಡಂತಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಹಾಗೂ ಪಿಡಿಒಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸಾರ್ವಜನಿಕರು ಹದ್ದುಬಸ್ತಿಗೆ ಅರ್ಜಿ ಹಾಕಿದರೆ ಭೂ ಮಾಪನ ಇಲಾಖೆಯವರು 2 ವರ್ಷಗಳ ಕಾಲ ಅವರನ್ನು ಅಲೆದಾಡಿಸುತ್ತಿರುವ ಕುರಿತು ಅನೇಕ ದೂರುಗಳು ಬಂದಿವೆ. ಭೂ ಮಾಪನ ಮಾಡಲು ಅರ್ಜಿ ಸಲ್ಲಿಸಿದಾಗ ಪಿಟಿಸಿಟ್ ಲಭ್ಯವಿಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿ ಸಾರ್ವಜನಿಕರನ್ನು ಸತಾಯಿಸುವ ದೂರುಗಳು ಕೇಳಿ ಬರುತ್ತಿವೆ. ಪಿಟಿಸಿಟ್ ಇಲ್ಲ ಎಂದು ಸರ್ವೇ ಮಾಡುತ್ತಿಲ್ಲ ಏಕೆ’ ಎಂದು ಎಡಿ.ಎಲ್.ಆರ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ADVERTISEMENT

ಈ ಮಧ್ಯೆ ತಾಲೂಕಿನ ಅಂಗನವಾಡಿಗಳಲ್ಲಿ ಹಾಲಿನ ಪ್ಯಾಕೆಟ್ ಹೆಚ್ಚಿಗೆ ಪಡೆಯುತ್ತಿದ್ದು ವಿನಾಕಾರಣ ಹಾಳು ಮಾಡುತ್ತಿರುವುದು ಕಂಡುಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ಸಿಡಿಪಿಯು ಹಾಗೂ ಅಕ್ಷರ ದಾಸೋಹದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಪ್ರಾಣಿಗಳು ಸಹಿತ ತಿನ್ನಲಾರದ ಬೆಲ್ಲವನ್ನು ಮಕ್ಕಳಿಗೆ ಏಕೆ ನೀಡುತ್ತಿದ್ದೀರಿ ಎಂದು ಮತ್ತು ಅವಧಿ ಮೀರಿದ ಆಹಾರ ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಶಿಕ್ಷಣ ಇಲಾಖೆಗೆ ಚಾಟಿ: ‘ತಾಲ್ಲೂಕಿನ ಶಾಲಾ ಮಕ್ಕಳು ಇಂಗ್ಲಿಷ್ ಕಲಿಕೆಯಲ್ಲಿ ಹಿಂದುಳಿದಿದ್ದು ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಸರಿಯಾಗಿ ಇಂಗ್ಲಿಷ್ ಬಾರದಿರುವುದು ಕಂಡುಬಂದಿದೆ. ಕೆಲ ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬಾರದಿರುವ ಬಗ್ಗೆ ಗಮನಕ್ಕೆ ಬಂದಿದ್ದು ಸೂಕ್ತ ತರಬೇತಿ ನೀಡಬೇಕು’ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕಳಪೆ ರಸ್ತೆ ಕಾಮಗಾರಿ, ವೃದ್ಧಾಪ್ಯ ವೇತನ, ಹೊಲದ ರಸ್ತೆ, ಸೇರಿದಂತೆ 6 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಭೆಯಲ್ಲಿ ತಹಶಿಲ್ದಾರ್‌ ಕೆ.ನಾಗರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ರೋಣ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ್ ಅವರಿಗೆ ದೂರು ನೀಡುತ್ತಿರುವ ವೃದ್ಧ

‘ಪ್ರಜಾವಾಣಿ’ ವರದಿ ಪರಿಣಾಮ

ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುರಿತು ಪ್ರಕಟವಾಗಿದ್ದ ‘ಪ್ರಜಾವಾಣಿ’ ವರದಿ ಆಧರಿಸಿ ಶಾಲೆಯ ದಾರಿಯನ್ನು ಆಕ್ರಮಿಸಿಕೊಂಡ ಬಗ್ಗೆ ಮಾಹಿತಿ ಪಡೆದ ವಿಜಯ ಬಿರಾದಾರ ತಕ್ಷಣವೇ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಸತಿ ಶಾಲೆಗಳ ಬಗ್ಗೆ ದೂರು

ತಾಲ್ಲೂಕಿನ ಇಟಗಿ ಹಾಸ್ಟೆಲ್ ವಾರ್ಡನ್ ಪ್ರತಿನಿತ್ಯ ಹಾಸ್ಟೆಲ್‌ಗೆ ಭೇಟಿ ನೀಡುತ್ತಿಲ್ಲ ಮತ್ತು ಕೆಲ ಕಡೆಗಳಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರ ಹತ್ತಿರ ನೆಲ ಒರೆಸುವ ಕಸಗೂಡಿಸುವ ಕೆಲಸ ಮಾಡಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ವಸತಿ ನಿಲಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಅಂತಹ ಕೆಲಸಗಳನ್ನು ಮಾಡಿಸಕೂಡದು. ಸ್ವಚ್ಛತೆಗೆ ಹಾಸ್ಟೆಲ್ ವಾರ್ಡನ್‌ಗಳು ಗಮನಕೊಡಬೇಕು ಹಾಸ್ಟೆಲ್ ಸುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.