ADVERTISEMENT

ಮಹದಾಯಿ: ರಾಜ್ಯವ್ಯಾಪಿ ಹೋರಾಟ-ಎಚ್.ಆರ್. ಬಸವರಾಜಪ್ಪ

ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 13:48 IST
Last Updated 26 ಅಕ್ಟೋಬರ್ 2024, 13:48 IST
ನರಗುಂದದ ಎಪಿಎಂಸಿ ಸಭಾಭವನದಲ್ಲಿ ಶನಿವಾರ ನಡೆದ ರೈತರ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು
ನರಗುಂದದ ಎಪಿಎಂಸಿ ಸಭಾಭವನದಲ್ಲಿ ಶನಿವಾರ ನಡೆದ ರೈತರ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು   

ನರಗುಂದ: ‘ಮಹದಾಯಿ, ಕಳಸಾಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ  ರಾಜ್ಯದಾದ್ಯಂತ ಶೀಘ್ರ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಕರ್ನಾಟಕ ರೈತ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಮಹದಾಯಿ, ಕಳಸಾ–ಬಂಡೂರಿ ಹೋರಾಟ ಸಮಿತಿ ಆಶ್ರಯದಲ್ಲಿ ಶನಿವಾರ
ನಡೆದ ರೈತರ ಸಭೆಯಲ್ಲಿ ಮಾತನಾಡಿದರು.

‘ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಒಂದು ದಿನ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ನರಗುಂದ ಬಂಡಾಯದ ನೆಲದಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದು, ಅದಕ್ಕೆ ಅಂತ್ಯವಿಲ್ಲದಂತಾಗಿದೆ. ಮಹದಾಯಿ ಯೋಜನೆ ಜಾರಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ   ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ಕೊಡಿಸುತ್ತಿಲ್ಲ. ಇದರಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಹೇಳಿದರು.

‘ಕೇಂದ್ರ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಕಳಸಾ–ಬಂಡೂರಿ ಹೋರಾಟದಲ್ಲಿ ಪಾಲ್ಗೊಂಡಿದ್ದ  ಪ್ರಲ್ಹಾದ ಜೋಶಿ ಅವರೇ ಈಗ ಕೇಂದ್ರ ಸಚಿವರಾಗಿದ್ದಾರೆ. ಅವರು ಪ್ರಧಾನಿ ಮೋದಿ ಅವರ ಮನವೊಲಿಸಿ, ಎರಡು ಸರ್ಕಾರಗಳ ಜೊತೆ ಮಾತುಕತೆ ನಡೆಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ರೈತ ಪರ ಸಿದ್ದಾಂತ ಹೊಂದಿದ ಯಾರಾದರೂ ನಮ್ಮ ರೈತ ಸಂಘ ಸೇರಬಹುದು. ಯಾವುದೇ ಸರ್ಕಾರ ಇರಲಿ, ರೈತ ವಿರೋಧಿ ನೀತಿ ಅನುಸರಿಸಿದರೆ ತಕ್ಕ ಪಾಠ ಕಲಿಸಲಾಗುವುದು. ಕೆಲವು ರೈತ ಮುಖಂಡರ ಹೋರಾಟದ ರೀತಿ ಬೇಸರ ತಂದಿದ್ದು, ನಮ್ಮ ಸಂಘ, ನಾವು ಸಿದ್ದಾಂತಕ್ಕೆ ಬದ್ಧರಾಗಿದ್ದೇವೆ’ ಎಂದರು.

ಸಭೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶಿವಪ್ಪ ಅಬ್ಬಣಿ, ಪ್ರಧಾನ ಕಾರ್ಯದರ್ಶಿ ಅಮೀನಪಾಷ ದಿದ್ದಗಿ, ನಜೀರಸಾಬ ಮೂಲಿಮನಿ, ಮಲ್ಲಿಕಾರ್ಜುನ, ಮಹದಾಯಿ ರೈತ ಸಂಘಟನೆಗಳ ಒಕ್ಕೂಟದ ಸಂಚಾಲಕ ಶಂಕರ ಅಂಬಲಿ,ಬಸವರಾಜ ಸಾಬಳೆ,ವಿಠ್ಠಲ ಜಾಧವ, ರಘುನಾಥ್ ರಡ್ಡಿ ನಡುವನಮನಿ, ಎಸ್.ಎಸ್.ಪಾಟೀಲ, ತುಮಕೂರಿನ ಪೂಜೇರಪ್ಪ, ನಬೀಸಾಬ ಕಿಲ್ಲೆದಾರ, ಚನ್ನು ನಂದಿ, ದೇವೇಂದ್ರ ಗುಡಿಸಾಗರ, ಬಡಿಗೇರ, ಕೊಪ್ಪಳ, ಬೆಳಗಾವಿ, ರಾಯಚೂರು ರೈತ ಸಂಘದ ಪದಾಧಿಕಾರಿಗಳು ಇದ್ದರು.

ನರಗುಂದ ನವಲಗುಂದ ರೈತ ಬಂಡಾಯ ಎಲ್ಲರಿಗೂ ಪ್ರೇರಣೆ. ಮಹದಾಯಿ ಹೋರಾಟಕ್ಕೆ ಬೆಂಬಲವಿದ್ದು ಸಂಪೂರ್ಣ ತೊಡಗಿಕೊಳ್ಳಲಾಗುವುದು
ಎಚ್.ಆರ್. ಬಸವರಾಜಪ್ಪ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

‘ಎಕರೆಗೆ ಕನಿಷ್ಠ ₹20 ಸಾವಿರ ನೀಡಿ’

‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಸರ್ಕಾರವೇ ಹಾನಿ ವಿವರ ಪ್ರಕಟಿಸಿದೆ. ಆದರೆ ಬೆಳೆಹಾನಿಗೆ ನೀಡಿದ ಪರಿಹಾರ ಪುಡಿಗಾಸಾಗಿದೆ. ಎನ್‌ಡಿಆರ್‌ಎಫ್‌ ನಿಯಮಗಳೇ ಅವೈಜ್ಞಾನಿಕವಾಗಿವೆ. ಅವುಗಳ ಸಮಗ್ರ ಬದಲಾವಣೆ ಅವಶ್ಯವಿದೆ. ಎಕರೆಗೆ ಕನಿಷ್ಠ ₹20 ಸಾವಿರ ಪರಿಹಾರ ನೀಡುವ ನಿಯಮ ಜಾರಿಯಾಗಬೇಕು’ ಎಂದು ಎಚ್.ಆರ್. ಬಸವರಾಜಪ್ಪ ನುಡಿದರು. ‘ಸರಿಯಾದ ಪ್ರಮಾಣದಲ್ಲಿ ಪರಿಹಾರ ವಿತರಣೆ ಮಾಡಿದರೆ ಮತ್ತೆ ಬಿತ್ತನೆ ಬೀಜ ಗೊಬ್ಬರದ ಖರ್ಚಾದರೂ ಸಿಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರೈತರು ಸಂಕಷ್ಟದಲ್ಲಿದ್ದು ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ವಸೂಲಾತಿ ಮಾಡಬಾರದು. ಒಂದು ವೇಳೆ ಸಾಲ ಕೇಳಲು ಬ್ಯಾಂಕ್ ಅಧಿಕಾರಿಗಳು ಬಂದರೆ ಅವರನ್ನು ಕಂಬಕ್ಕೆ ಕಟ್ಟಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.