ಮುಂಡರಗಿ: ‘ಮಹಾತ್ಮ ಗಾಂಧಿ ಅವರು ಪ್ರತಿಪಾದಿಸಿದ್ದ ಸತ್ಯ ಹಾಗೂ ಅಹಿಂಸೆಗಳು ಸರ್ವಕಾಲಕ್ಕೂ ಪ್ರಸ್ತುತ. ಸತ್ಯ ಹಾಗೂ ಅಹಿಂಸೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ ತಿಳಿಸಿದರು.
ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಗಾಂಧಿ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಗಾಂಧೀಜಿ ಅವರು ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ ನೀಡಿದರು. ಅವರು ಪ್ರತಿಪಾದಿಸಿದ ತತ್ವಾದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ತತ್ವಗಳನ್ನು ತಿಳಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಾಂಧಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಪಟ್ಟಣದ ಕೋಟೆ ಆಂಜನೇಯನ ದೇವಸ್ಥಾನದಿಂದ ಆರಂಭವಾದ ಗಾಂಧಿ ನಡಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಪುರಸಭೆ ಗಾಂಧಿ ಭವನ ತಲುಪಿತು. ಅಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾಂಗ್ರೆಸ್ ಮುಖಂಡರಾದ ಹೇಮಂತಗೌಡ ಪಾಟೀಲ, ರಾಮು ಕಲಾಲ, ಶೋಭಾ ಮೇಟಿ, ಧ್ರುವಕುಮಾರ ಹೊಸಮನಿ, ಅಶೋಕ ಹುಬ್ಬಳ್ಳಿ, ರಾಮು ಭಜಂತ್ರಿ, ಯಲ್ಲಪ್ಪ ಹೊಂಬಳಗಟ್ಟಿ, ವಿನೋದ, ಸುರೇಶ ಮಾಗಡಿ, ಜ್ಯೋತಿ ಕುರಿಯವರ, ರಾಜಾಬಕ್ಷಿ ಬೆಟಗೇರಿ, ನಬಿಸಾಬ್ ಕೆಲೂರ, ಪ್ರತಿಭಾ ಹೊಸಮನಿ, ಸೀತಾ ಬಸಾಪೂರ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.