ಲಕ್ಕುಂಡಿ: ‘ಆಯಾ ಪ್ರದೇಶದಲ್ಲಿ ಕುಟುಂಬವೊಂದಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ ಇದ್ದು, ಗಂಡು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಯ್ಯ ಕೊರವನವರ ಹೇಳಿದರು.
ಇಲ್ಲಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಗ್ರಾಮಸಭೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, 2025–26ನೇ ಸಾಲಿನ ಕಾರ್ಮಿಕ ಆಯವ್ಯಯ ಹಾಗೂ ಕ್ರಿಯಾಯೋಜನೆ, ‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ನಿಗದಿಪಡಿಸಿದ ಕೆಲಸದ ಅಳತೆ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿಯಲ್ಲಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ 50ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸಬೇಕಾದ ಸೌಲಭ್ಯಗಳು ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ‘ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಲ್ಲಿ ಭಾಗವಹಿಸಬೇಕು. ಇದರ ಜತೆಗೆ ವೈಯಕ್ತಿಕ ಕಾಮಗಾರಿ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ ಕೆಂಚಪ್ಪ ಪೂಜಾರ, ‘ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳಿಗೆ ಗುಳೆ ಹೋಗುವುದನ್ನು ನಿಲ್ಲಿಸಿ, ನರೇಗಾದಡಿ ಕೆಲಸ ಪಡೆಯಬೇಕು’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಪಿಡಿಒ ರಾಜಕುಮಾರ ಭಜಂತ್ರಿ, ಕಾರ್ಯದರ್ಶಿ ಪ್ರದೀಪ ಆಲೂರ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.