ADVERTISEMENT

15 ಸಾವಿರ ಕ್ಯುಸೆಕ್ ನೀರು ಹೊರಕ್ಕೆ

ನವಿಲು ತೀರ್ಥ ಜಲಾಶಯ ಭರ್ತಿಯಾಗಲು ಮೂರು ಅಡಿ ಬಾಕಿ

ಬಸವರಾಜ ಹಲಕುರ್ಕಿ
Published 2 ಆಗಸ್ಟ್ 2024, 6:22 IST
Last Updated 2 ಆಗಸ್ಟ್ 2024, 6:22 IST
ನರಗುಂದ ತಾಲ್ಲೂಕಿನ ಕೊಣ್ಣೂರು ಬಳಿಯ ಮಲಪ್ರಭಾ ಹೊಳೆಯ ಹಳೆಯ ಸೇತುವೆ ತುಂಬಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿತು
ನರಗುಂದ ತಾಲ್ಲೂಕಿನ ಕೊಣ್ಣೂರು ಬಳಿಯ ಮಲಪ್ರಭಾ ಹೊಳೆಯ ಹಳೆಯ ಸೇತುವೆ ತುಂಬಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿತು   

ನರಗುಂದ: ಮಲಪ್ರಭಾ ನದಿಯ ಉಗಮ ಸ್ಥಾನ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಎರಡು ದಿನಗಳಿಂದ ಹೆಚ್ಚಿನ ಮಳೆ ಸುರಿಯುತ್ತಿರುವ ಪರಿಣಾಮ ಒಳ ಹರಿವು ಹೆಚ್ಚುತ್ತಿದ್ದು, ಮಲಪ್ರಭಾ ನದಿ, ಹೊಳೆ ಹಾಗೂ ಬೆಣ್ಣೆ ಹಳ್ಳದ ತಟದಲ್ಲಿರುವ ಗ್ರಾಮಗಳ ಜನರು ಆತಂಕದಲ್ಲಿ ಕಾಲ ದೂಡುವಂತಾಗಿದೆ.

ನರಗುಂದ ತಾಲ್ಲೂಕಿನ ಗ್ರಾಮಗಳಿಗೆ ನೆರೆ ಉಂಟು ಮಾಡುವ ಸವದತ್ತಿ ಬಳಿಯ ಮಲಪ್ರಭಾ ನದಿಯ ನವಿಲು ತೀರ್ಥ ಜಲಾಶಯ ಭರ್ತಿಯಾಗಲು ಕೇವಲ ಮೂರು ಅಡಿ ಬಾಕಿ ಇದೆ. ಈಗಾಗಲೇ ನವಿಲುತೀರ್ಥ ಜಲಾಶಯದ ಅಧಿಕಾರಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಗುರುವಾರ ಸಂಜೆಯ ಮಾಹಿತಿಯಂತೆ 15 ಸಾವಿರ ಕ್ಯುಸೆಕ್ಸ್ ನೀರನ್ನು ಮಲಪ್ರಭಾ ನದಿ, ಹೊಳೆ, ಕಾಲುವೆಗಳಿಗೆ ಹರಿಸಲಾಗಿದೆ. ಬುಧವಾರ ಈ ಪ್ರಮಾಣ 10ಸಾವಿರ ಕ್ಯುಸೆಕ್ಸ್ ಇತ್ತು.

37 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 29 ಟಿಎಂಸಿ ಅಡಿ ನೀರು ಇದೆ. 24 ಸಾವಿರ ಕ್ಯುಸೆಕ್ಸ್ ಒಳಹರಿವು ಇದೆ. ಕೊಣ್ಣೂರಿನ ಮಲಪ್ರಭಾ ಹಳೆ ಸೇತುವೆ ತುಂಬಿ ಹರಿಯುತ್ತಿದೆ. ಆರಂಭದಲ್ಲಿಯೇ ಪ್ರವಾಹದ ಪರಿಣಾಮ ಎದುರಿಸುವ ಲಕಮಾಪುರ, ವಾಸನ, ಬೆಳ್ಳೇರಿ, ಕೊಣ್ಣೂರ ಗ್ರಾಮಗಳಲ್ಲಿ ಪ್ರವಾಹ ಎದುರಿಸಲು ಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ADVERTISEMENT

ತುಂಬಿದ ಬೆಣ್ಣೆ ಹಳ್ಳ: ಮಲಪ್ರಭಾ ಕಾಲುವೆಗಳಿಗೂ ನೀರು ಹರಿಸುತ್ತಿರುವ ಪರಿಣಾಮ ಅದರ ಹೆಚ್ಚಾದ ನೀರು, ಕೆಲವೆಡೆ ಕಾಲುವೆಗಳು ಹೂಳು ತುಂಬಿಕೊಂಡ ಪರಿಣಾಮ ಅಲ್ಲಿ ಹರಿಯದ ನೀರು ನೇರವಾಗಿ ಬೆಣ್ಣೆಹಳ್ಳ ಹಾಗೂ ಸುತ್ತಲಿನ ವಿವಿಧ ಕಿರು ಹಳ್ಳಗಳಿಗೆ ಸೇರುತ್ತದೆ. ಪರಿಣಾಮ ಸುರಕೋಡ, ಕುರ್ಲಗೇರಿ, ಯಾವಗಲ್ ಬಳಿ ಬೆಣ್ಣೆ ಹಳ್ಳ ರಭಸದಿಂದ ಹರಿಯುತ್ತಿದೆ. 17 ಗ್ರಾಮಗಳು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ.

ನರಗುಂದ ತಾಲ್ಲೂಕಿನ ಕೊಣ್ಣೂರು ಬಳಿಯ ಮಲಪ್ರಭಾ ಹೊಳೆಯ ಹಳೆಯ ಸೇತುವೆ ತುಂಬಿ ಹರಿಯುತ್ತಿದ್ದು ಜಮೀನುಗಳಿಗೆ ನೀರು ನುಗ್ಗಿತು
ನರಗುಂದ–ರೋಣ ನಡುವಿನ ಯಾವಗಲ್ ಬಳಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ

Quote - ಪ್ರವಾಹ ಎದುರಿಸಲು ತಾಲ್ಲೂಕು ಆಡಳಿತ ಎಲ್ಲ ಮುನ್ನೆಚ್ಚರಿಕೆ ವಹಿಸಿದೆ. ಕಾಳಜಿ ಕೇಂದ್ರ ಗುರುತಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಶ್ರೀಶೈಲ ತಳವಾರ ತಹಶೀಲ್ದಾರ್ ನರಗುಂದ

Quote - ನವಿಲು ತೀರ್ಥ ಜಲಾಶಯ ಭರ್ತಿಯಾಗುತ್ತಿರುವುದು ಸಂತಸ ತಂದಿದೆ. ಪ್ರವಾಹ ಉಂಟಾದರೆ ಅದನ್ನು ಎದುರಿಸಲು ಅಧಿಕಾರಿಗಳು ಗಮನಹರಿಸಬೇಕು ಶಿವಾನಂದ ಬನಹಟ್ಟಿ ಸುರಕೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.