ADVERTISEMENT

ಗಜೇಂದ್ರಗಡ: ಹಲವು ಬೆಳೆ- ಕೈತುಂಬ ಆದಾಯ

ಕೃಷಿಯಿಂದ ಬಂದ ಲಾಭದಲ್ಲೇ ಜಮೀನು ಖರೀದಿಸಿದ ಪದವೀಧರ

ಶ್ರೀಶೈಲ ಎಂ.ಕುಂಬಾರ
Published 14 ಜೂನ್ 2024, 7:01 IST
Last Updated 14 ಜೂನ್ 2024, 7:01 IST
ಗಜೇಂದ್ರಗಡ ಸಮೀಪದ ಮ್ಯಾಕಲಝರಿ ಗ್ರಾಮದಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿರುವ ರೈತ ದೇವರಾಜ ವರಗರ
ಗಜೇಂದ್ರಗಡ ಸಮೀಪದ ಮ್ಯಾಕಲಝರಿ ಗ್ರಾಮದಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿರುವ ರೈತ ದೇವರಾಜ ವರಗರ   

ಗಜೇಂದ್ರಗಡ: ಸಮೀಪದ ಮ್ಯಾಕಲಝರಿ ಗ್ರಾಮದ ರೈತ ದೇವರಾಜ ಹನಮಪ್ಪ ವರಗರ ರೇಷ್ಮೆ ಕೃಷಿ ಹಾಗೂ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೈನುಗಾರಿಕೆ, ಮೇಕೆ, ಕೋಳಿ ಸಾಕಾಣಿಕೆಯಲ್ಲಿ ಯಶ ಕಂಡು ಆರ್ಥಿಕ ಲಾಭ ಗಳಿಸುವ ಮೂಲಕ ನೆಮ್ಮದಿ ಕಂಡುಕೊಂಡಿದ್ದಾರೆ.

ದೇವರಾಜ ವರಗರ ಬಿ.ಎ. ಪದವೀಧರರಾಗಿದ್ದು, ನೌಕರಿ ಹುಡುಕುವುದರ ಜೊತೆಗೆ ಕೃಷಿ ಕಾಯಕ ಮಾಡುತ್ತ ಯಶ ಕಾಣುತ್ತಿದ್ದಾರೆ. ದೇವರಾಜ ಅವರಿಗೆ ಹಿರಿಯರಿಂದ ಬಂದ ಮೂರೂವರೆ ಎಕರೆ ಜಮೀನಿದ್ದು, 4 ಕೊಳವೆ ಬಾವಿಗಳಿಂದ ಸಿಗುವ 3.5 ಇಂಚು ನೀರಿನಲ್ಲಿ ಹಿಪ್ಪು ನೇರಳೆ ಬೆಳೆದು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ತಮ್ಮ ಜಮೀನು ಅಲ್ಲದೆ ಬೇರೆಯವರ 5–6 ಎಕರೆ ಜಮೀನು ಲಾವಣಿಗೆ ಪಡೆದು ಸಾಂಪ್ರದಾಯಿಕ ಬೆಳೆಗಳಾದ ಹತ್ತಿ, ಅಲಸಂದೆ, ಗೋವಿನಜೋಳ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆ ಬೆಳೆಯುತ್ತಿದ್ದಾರೆ.

ಸಮಗ್ರ ಕೃಷಿಯಲ್ಲಿ ವಾರ್ಷಿಕ ₹5ಲಕ್ಷದಿಂದ ₹6 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಕೃಷಿಯಿಂದ ಬಂದ ಲಾಭದಲ್ಲಿ ಇದೇ ವರ್ಷ ಗ್ರಾಮದಲ್ಲಿ 3.50 ಎಕರೆ ಜಮೀನು ಖರೀದಿಸಿದ್ದಾರೆ. ಅವರಿಗೆ ಅಣ್ಣ ಮತ್ತು ತಾಯಿ ಸಹಾಯ ಮಾಡುತ್ತಾರೆ.

ADVERTISEMENT

ರೇಷ್ಮೆ ಕೃಷಿಯಿಂದ ಪ್ರತಿ ಫಸಲಿಗೆ 140-145 ಕೆ.ಜಿ. ರೇಷ್ಮೆ ಗೂಡಿನ ಇಳುವರಿ ಪಡೆಯುತ್ತಿದ್ದಾರೆ. ರೇಷ್ಮೆ ಗೂಡನ್ನು ರಾಮನಗರದಲ್ಲಿ ಮಾರಾಟ ಮಾಡುತ್ತಾರೆ. ಲಾವಣಿಗೆ ಪಡೆದಿರುವ ಗ್ರಾಮದ ಬೇರೆಯವರ ಜಮೀನಿನಲ್ಲಿ ಅಲಸಂದೆ, ಸಜ್ಜೆ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ದೇವರಾಜ ಅವರು 2023-24ನೇ ಸಾಲಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೋಳಿ, ಮೇಕೆಯಿಂದ ಕೈತುಂಬ ಆದಾಯ: ದೇವರಾಜ ಅವರು ತಮ್ಮ ಜಮೀನಿಲ್ಲಿ 100 ಮೇಕೆ, 100 ಕೋಳಿ, 3 ಎಮ್ಮೆ, 4 ಆಕಳು ಸಾಕಣೆ ಮಾಡುತ್ತಿದ್ದಾರೆ. ಮೇಕೆಗಳು ವರ್ಷದಲ್ಲಿ ಮೂರು ಬಾರಿ ಮರಿಗಳನ್ನು ಹಾಕುತ್ತವೆ. ಅವುಗಳನ್ನು ಚೆನ್ನಾಗಿ ಮೇಯಿಸಿ ಅವುಗಳಲ್ಲಿ ಬೇಕಾದಷ್ಟು ಉಳಿಸಿಕೊಂಡು ಉಳಿದ ಮೇಕೆಗಳನ್ನು 3–4 ತಿಂಗಳಿಗೊಮ್ಮೆ ಮಾರಾಟ ಮಾಡುತ್ತಿದ್ದಾರೆ. ಮೇಕೆ ಮಾರಾಟದಿಂದ ವರ್ಷಕ್ಕೆ ಸುಮಾರು ₹3 ಲಕ್ಷ ಲಾಭ ಗಳಿಸುತ್ತಿದ್ದಾರೆ. ಎಮ್ಮೆ, ಆಕಳುಗಳಿಂದ ಬರುವ ಹಾಲನ್ನು ಮನೆಗೆ ಬೇಕಾದಷ್ಟು ಉಳಿಸಿಕೊಂಡು ಉಳಿದಿದ್ದು ಮಾರಾಟ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.