ನರಗುಂದ: ‘ಕನ್ನಡಿಗರಾದ ನಾವೇ ಕನ್ನಡವನ್ನು ವಿನಾಶದಂಚಿಗೆ ಒಯ್ಯುತ್ತಿದ್ದೇವೆ. ಕನ್ನಡಿಗರಿಂದಲೆ ಕನ್ನಡ ಕಗ್ಗೊಲೆಯಾಗುತ್ತಿದೆ’ ಎಂದು ಎಸ್ಎಂವಿ ಡಿಪ್ಲೊಮಾ ಕಾಲೇಜಿನ ಉಪನ್ಯಾಸಕ ಬಸವರಾಜ ಕೋಳೂರಮಠ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-34 ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕರ್ನಾಟಕ ಸರ್ಕಾರ ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿ ಆರಂಭಿಸುವ ಆದೇಶ ಮಾಡಿದ್ದು ಶ್ಲಾಘನೀಯ. ಆದರೆ ಕನ್ನಡದ ಯಾವುದೇ ವಿದ್ಯಾರ್ಥಿಗಳು ಅದಕ್ಕೆ ಪ್ರವೇಶ ಪಡೆಯುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ದೇಶದ ಶ್ರೇಷ್ಠ ಎಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸುವ ಮೂಲಕ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದರು’ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀ ಮಾತನಾಡಿ, ‘ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ಸ್ವಯಂಚಾಲಿತ ಗೇಟನ್ನು ನಿರ್ಮಿಸಿದ ಕೀರ್ತಿ ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ. ಅವರ ದೂರದೃಷ್ಟಿ ಎಲ್ಲರಿಗೂ ಮಾದರಿ. ಕರ್ನಾಟಕದ ನೀರು, ಗಾಳಿ, ಬೆಳಕನ್ನು ಸೇವಿಸುತ್ತಿರುವ ಪ್ರತಿಯೊಬ್ಬರು ಕನ್ನಡಾಂಬೆಯ ಋಣವನ್ನು ತೀರಿಸಬೇಕು. ಕನ್ನಡ ಭಾಷೆ ಈಗಾಗಲೆ ಸಾಕಷ್ಟು ಬೆಳೆದಿದೆ ಅದನ್ನು ಉಳಿಸುವತ್ತ ಯುವಕರು ಗಮನಹರಿಸಬೇಕಾಗಿದೆ’ ಎಂದರು.
ಎಂಜಿನಿಯರ್ ಸಿದ್ಧಲಿಂಗೇಶ ಕಾಳಗಿ ಹಾಗೂ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ವೈ. ಬೇವಿನಗಿಡದ, ಪ್ರಾಚಾರ್ಯ ಸಿದ್ಧನಗೌಡ ಪಾಟೀಲ, ವಿಶ್ರಾಂತ ಪ್ರಾಧ್ಯಾಪಕ ಪ್ರಕಾಶ ಅಣ್ಣಿಗೇರಿ, ವೀರಯ್ಯ ಮಾಲಿಪಾಟೀಲ, ಮಲ್ಲಸರ್ಜ ದೇಸಾಯಿ, ಮಹಾಂತೇಶ ಹಿರೇಮಠ ಇದ್ದರು. ಬಸವರಾಜ ಹೊಸಕೋಟಿ ಸ್ವಾಗತಿಸಿದರು.
ವಿದ್ಯಾರ್ಥಿನಿ ಮಧು ಬನ್ನಿಹಟ್ಟಿ ನಿರೂಪಿಸಿದರು. ಕೀರ್ತಿ ಹುಲಕಂತನ್ನವರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.