ADVERTISEMENT

ನರಗುಂದ | ಬೆಣ್ಣೆಹಳ್ಳದ ರುದ್ರ ನರ್ತನ: ಅಪಾರ ಪ್ರಮಾಣದ ಬೆಳೆಹಾನಿ

ನರಗುಂದ ತಾಲ್ಲೂಕಿನಲ್ಲಿ ಬೆಣ್ಣೆಹಳ್ಳದ ಪ್ರವಾಹ ಪ್ರಲಾಪ

ಬಸವರಾಜ ಹಲಕುರ್ಕಿ
Published 19 ಅಕ್ಟೋಬರ್ 2024, 5:56 IST
Last Updated 19 ಅಕ್ಟೋಬರ್ 2024, 5:56 IST
<div class="paragraphs"><p>ನರಗುಂದ ತಾಲ್ಲೂಕಿನಲ್ಲಿ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಮೆಕ್ಕೆಜೋಳ ಸಂಪೂರ್ಣವಾಗಿ ನೆಲಕಚ್ಚಿದೆ</p></div>

ನರಗುಂದ ತಾಲ್ಲೂಕಿನಲ್ಲಿ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಮೆಕ್ಕೆಜೋಳ ಸಂಪೂರ್ಣವಾಗಿ ನೆಲಕಚ್ಚಿದೆ

   

ನರಗುಂದ: ಕಳೆದ ಒಂದು ವಾರದಿಂದ ಅತಿವೃಷ್ಟಿ ಹಾಗೂ ಬೆಣ್ಣೆ ಹಳ್ಳದ ಪ್ರವಾಹ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಮಲಪ್ರಭಾ ನದಿ ಪ್ರವಾಹಕ್ಕೆ ಕೊಣ್ಣೂರ ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮಗಳ ಬೆಳೆಗಳು ಹಾನಿಯಾಗಿದ್ದವು. ಈಗ ಮತ್ತೆ ಬೆಣ್ಣೆಹಳ್ಳದ ಪ್ರವಾಹಕ್ಕೆ ನರಗುಂದ ಹಾಗೂ ಕೊಣ್ಣೂರ ಹೋಬಳಿ ವ್ಯಾಪ್ತಿಯಲ್ಲಿನ ಎಂಟು ಗ್ರಾಮಗಳ ಬೆಳೆಗಳು ಹಾನಿಯಾಗಿವೆ.

ಇದರಿಂದ ರೈತರು ತೀವ್ರ ತೊಂದರೆಗೆ ಒಳಗಾಗುವಂತಾಗಿದೆ. ಕಳೆದ ವರ್ಷ ಬರದಿಂದ ತತ್ತರಿಸಿದ್ದ ರೈತರು ಈಗ ನೆರೆಯಿಂದ ತತ್ತರಿಸುವಂತಾಗಿದೆ. ಅದರಲ್ಲೂ ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆದ ರೈತರು ಕೈಗೆ ಬಂದಿದ್ದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗುವಷ್ಟು ಮಳೆಯಾಗದಿದ್ದರೂ ಬೆಣ್ಣೆ ಹಳ್ಳದ ಮೇಲ್ಭಾಗದಲ್ಲಿ ಅತಿಯಾದ ಮಳೆಯಾಗಿ ಪ್ರವಾಹ ಸಂಕಷ್ಟ ಎದುರಾಗಿದೆ. ಹಳ್ಳ ಹರಿದ ಊರುಗಳ ಸಮೀಪದ ಜಮೀನುಗಳಿಗೆ ಬೆಣ್ಣೆ ಹಳ್ಳದ ಪ್ರವಾಹ ನುಗ್ಗಿ ತನ್ನ ಎಲ್ಲೆ ಚಾಚಿ ಬೆಳೆಹಾನಿಗೆ ಕಾರಣವಾಗಿದೆ.

ADVERTISEMENT

ಎಂಟು ಗ್ರಾಮಗಳಲ್ಲಿ ಪ್ರವಾಹ ಪ್ರಲಾಪ:

ತಾಲ್ಲೂಕಿನ ಮೂಗನೂರ, ಬನಹಟ್ಟಿ, ಕುರ್ಲಗೇರಿ, ಸುರಕೋಡ, ಹದಲಿ, ಗಂಗಾಪುರ, ಖಾನಾಪುರ, ರಡ್ಡೇರನಾಗನೂರ ಗ್ರಾಮಗಳಲ್ಲಿನ ಬೆಣ್ಣೆಹಳ್ಳದ ದಡದಲ್ಲಿನ ಜಮೀನುಗಳಿಗೆ ಪ್ರವಾಹ ನುಗ್ಗಿ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆಗಳನ್ನು ಆಪೋಶನ ಪಡೆದಿದೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರೈತರು ಕಣ್ಣೀರು ಸುರಿಸುವ ಸ್ಥಿತಿ ಬಂದೊದಗಿದೆ.

ಹಾನಿಯಾದ ಬೆಳೆಗಳಲ್ಲಿ ಶೇ 70ರಷ್ಟು ಬೆಳೆ ಮೆಕ್ಕೆಜೋಳವೇ ಆಗಿದೆ. ಅದು ಆಗಲೇ ತೆನೆಯಾಗುವ ಹಂತದಲ್ಲಿತ್ತು. ಈಗ ಎಲ್ಲವೂ ಹಾನಿಯಾಗಿದೆ ಎಂದು ಕುರ್ಲಗೇರಿಯ ರೈತ ಯಲ್ಲಪ್ಪ ಚಲುವನ್ನವರ ಅಳಲು ತೋಡಿಕೊಂಡರು.

ಹತ್ತಿ, ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ ಹಾಗೂ ಇತ್ತೀಚೆಗೆ ಬಿತ್ತನೆ ಮಾಡಿದ್ದ ಕಡಲೆ ಬೆಳೆ ಕೂಡಾ ಸಂಪೂರ್ಣ ನಾಶವಾಗಿದೆ.

ಶಾಶ್ವತ ಪರಿಹಾರ ಯಾವಾಗ?:

ಪ್ರತಿವರ್ಷ ಬೆಣ್ಣೆಹಳ್ಳದ ಪ್ರವಾಹ ದಿಢೀರ್‌ ನುಗ್ಗಿ ಬೆಳೆಗಳನ್ನು ಆಪೋಶನ ಪಡೆಯುತ್ತಿದೆ. ಪ್ರವಾಹ ಬಾರದಂತೆ ತಡೆಯಲು ಶಾಶ್ವತ ಪರಿಹಾರ ಯಾವಾಗ ಎಂದು ಗಂಗಾಪುರ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತೃಪ್ತಿ ನೀಡದ ಪರಿಹಾರ:

ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ಕನಿಷ್ಠ ₹50 ಸಾವಿರ ಖರ್ಚು ಮಾಡಿರುತ್ತೇವೆ. ಆದರೆ ಸರ್ಕಾರ ಎನ್‌ಡಿಆರ್‌ಎಫ್‌ ನಿಯಮ ಒಡ್ಡಿ ಹೆಕ್ಟೇರ್‌ಗೆ ₹17ಸಾವಿರ ನೀಡುತ್ತದೆ. ಉಳಿದ ನಷ್ಟ ತುಂಬಿಕೊಡುವವರಾರು? ಎಂದು ರೈತರು ಪರಿಹಾರ ನಿಯಮದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಾರೆ.

ಸಮೀಕ್ಷೆ ತ್ವರಿತವಾಗಿ ನಡೆಯಲಿ:

ಈಗ ಮೇಲ್ನೋಟಕ್ಕೆ ಹಾನಿಯಾದ ಬೆಳೆಗಳ ಸಮೀಕ್ಷೆ ನಡೆದು ವರದಿ ನೀಡಲಾಗಿದೆ. ಆದರೆ ಸಂಪೂರ್ಣ ಹಾನಿಯಾದ ಸಮೀಕ್ಷೆ ತ್ವರಿತವಾಗಿ ನಡೆಯಬೇಕು. ಪರಿಹಾರ ಬೇಗ ದೊರೆಯಬೇಕು ಎಂದು ರೈತರು ಹೇಳುತ್ತಿದ್ದಾರೆ.

ಪ್ರಯಾಣಿಕರ ಪರದಾಟ:

ಬೆಣ್ಣೆಹಳ್ಳ ಪದೇ ಪದೇ ಪ್ರವಾಹ ಉಂಟು ಮಾಡುತ್ತಿರುವ ಪರಿಣಾಮ ನರಗುಂದ ರೋಣ ಮಧ್ಯೆ ಯಾವಗಲ್ ಸಮೀಪದ ಬೆಣ್ಣೆ ಹಳ್ಳ, ನರಗುಂದ– ಗದಗ ಒಳಮಾರ್ಗದ ಕುರ್ಲಗೇರಿ ಸಮೀಪದ ಬೆಣ್ಣೆಹಳ್ಳ ಸೇತುವೆ ತುಂಬಿ ಹರಿಯುತ್ತಿರುವ ಪರಿಣಾಮ ಎರಡು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಮಳೆಗಾಲದಲ್ಲಿ ತೀವ್ರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

8 ಸಾವಿರ ಕ್ಯುಸೆಕ್‌ ನೀರು: ಬೆಣ್ಣೆಹಳ್ಳ ತನ್ನ ರೌದ್ರ ನರ್ತನ ತೋರುತ್ತಿರುವಾಗಲೇ ಕೊಣ್ಣೂರ ಭಾಗದಲ್ಲಿ ಮಲಪ್ರಭಾ ಪ್ರವಾಹ ಉಂಟಾಗುತ್ತಿದೆ. ನವಿಲು ತೀರ್ಥ ಜಲಾಶಯದಿಂದ 8 ಸಾವಿರ ಕ್ಯಸೆಕ್‌ ನೀರು ಹರಿಸಲಾಗುತ್ತಿದೆ. ಇದರಿಂದ ಮಲಪ್ರಭಾ ಪ್ರವಾಹ ಉಂಟಾಗಿ ಅದರ ದಡದಲ್ಲಿನ ಬೆಳೆ ಮತ್ತೊಮ್ಮೆ ಹಾನಿಯಾಗುವ ಹಂತಕ್ಕೆ ತಲುಪಿವೆ.

‘ಅತಿವೃಷ್ಟಿ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ 1 ಸಾವಿರ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ ಬಗ್ಗೆ ಅಂದಾಜಿಸಲಾಗಿದೆ. ಆದರೆ ಜಮೀನುಗಳಲ್ಲಿ ಸಂಪೂರ್ಣ ನೀರು ಕಡಿಮೆಯಾದ ಮೇಲೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಲಾಗುವುದು. ಸಮೀಕ್ಷೆ ನಂತರ ವರದಿ ಸಲ್ಲಿಸಿ ಅದಕ್ಕನುಗುಣವಾಗಿ ಪರಿಹಾರ ನೀಡಲಾಗುವುದು. ತಾಲ್ಲೂಕಿನ ಕೆಲವೆಡೆ ಮನೆಗಳು ಬಿದ್ದು ಹಾನಿಗೊಂಡಿದ್ಥು ವರದಿಯಾಗಿದೆ. ಅವುಗಳನ್ನು ಪರಿಶೀಲಿಸಿ ಪರಿಹಾರ ನೀಠಲಾಗುವುದು' ಎಂದು ತಹಶೀಲ್ದಾರ್‌ ಶ್ರೀಶೈಲ ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

'ಪೂರ್ವ ಮುಂಗಾರು ಸಂದರ್ಭದಲ್ಲಿ ಮಲಪ್ರಭಾ ಪ್ರವಾಹದಿಂದ ಕೊಣ್ಣೂರ ಭಾಗದ ಏಳು ಗ್ರಾಮಗಳಲ್ಲಿನ ವಿವಿಧ ಬೆಳೆ ಹಾನಿಯಾದಾಗ ಸಮೀಕ್ಷೆ ಮಾಡಿ ಆನಲೈನ್ ಅಪಲೋಡ್ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಪರಿಹಾರ ಜಮಾ ಆಗುತ್ತದೆ. ಈಗ ಬೆಣ್ಣೆ ಸಳ್ಳದ ಪ್ರವಾಹಕ್ಕೆ 8 ಗ್ರಾಮಗಳಲ್ಲಿನ ಬೆಳೆ ಹಾನಿಯಾಗಿದೆ. ಅದರ ಸಮೀಕ್ಷೆ ಮಾಡಲಾಗುವುದು. ಪರಿಹಾರ ಬಂದೇ ಬರುತ್ತದೆ. ಆದರೆ ಇನ್ನೂ ಕೆಲವು ರೈತರು ಎಫ್ಐಡಿ ಮಾಡಿಲ್ಲ. ಇದರಿಂದ ಪರಿಹಾರ ಜಮಾ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ರೈತರು ತಮ್ಮ ಎಫ್‌ಐಡಿ ಮಾಡಲು ಮುಂದಾಗಬೇಕು' ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ಜನಮಟ್ಟಿ ಹೇಳಿದರು.

ಮಲಪ್ರಭಾ ಹಾಗೂ ಬೆಣ್ಣೆಹಳ್ಳದ ಪ್ರವಾಹಕ್ಕೆ ಬಹಳಷ್ಟು ಬೆಳೆಹಾನಿಯಾಗಿದೆ. ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು. ಅದು ಬೇಗನೇ ಜಮಾ ಮಾಡಬೇಕು.
ಶಿವಾನಂದ ಗಾಳಪ್ಪನವರ, ಅಧ್ಯಕ್ಷ, ಭಾರತೀಯ ಕಿಸಾನ ಸಂಘ ತಾಲ್ಲೂಕು ಘಟಕ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.