ADVERTISEMENT

15 ದಿನದಲ್ಲಿ ಸಿಬ್ಬಂದಿ ನೇಮಕ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಮೇ 2021, 5:40 IST
Last Updated 23 ಮೇ 2021, 5:40 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಗದಗ: ‘ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು, ಸಿಬ್ಬಂದಿಯ ಕೊರತೆ ಬಹಳ ಇದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಭರವಸೆ ನೀಡಿದರು.

ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿದಂತೆ ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶೇ 60ರಿಂದ 70ರಷ್ಟು ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಇರುವುದು ತಿಳಿದು ಬಂದಿದೆ. ಎರಡು ವಾರದಲ್ಲಿ ತಜ್ಞ ವೈದ್ಯರನ್ನು ನೇಮಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಅವರು ಹೇಳಿದರು.

‘400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿದ್ದು, ಅದನ್ನು ಆಗಸ್ಟ್‌ ವೇಳೆಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಈ ಸಂಬಂಧ ಗುತ್ತಿಗೆ ಪಡೆದಿರುವ ಕಂಪನಿ ಅಧಿಕಾರಿಗಳ ಜತೆಗೆ ವಿಡಿಯೊ ಸಂವಾದ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಜಿಮ್ಸ್‌ನಲ್ಲಿ 50 ಆಕ್ಸಿಜನ್‌ ಕಾನ್‌ನ್ಸಟ್ರೇಟರ್‌, 80 ವೆಂಟಿಲೇಟರ್‌ಗಳು ಇವೆ. ಇಲ್ಲಿನ ತಜ್ಞ ವೈದ್ಯರು ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಕೋವಿಡ್‌ ನಿಯಂತ್ರಣ ಮಾಡುವಲ್ಲಿ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆಮ್ಲಜನಕ ಲಭ್ಯತೆ ಆಧಾರವಾಗಿ ಖಾಸಗಿ ಆಸ್ಪತ್ರೆಗಳ ಶೇ 50 ಬೆಡ್‌ಗಳನ್ನು ಬಳಸಿಕೊಳ್ಳುವುದಾಗಿ ಜಿಲ್ಲಾ ಆಡಳಿತ ತಿಳಿಸಿದೆ. ಹೊಸದಾಗಿ ಪತ್ತೆಯಾಗುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಬೇಕು’ ಎಂದು ಸೂಚಿಸಿದರು.

‘ಗದಗ ಡಿಎಚ್‌ಒ ಮೇಲೆ ಕೆಲವು ದೂರುಗಳಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅವರು ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಟಿಎಚ್‌ಒಗಳು ಸಹ ದಕ್ಷವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಜನರಿಗೆ ಆರೋಗ್ಯ ಸೇವೆಗಳು ಸಿಗುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಕೇಂದ್ರ ಸಚಿವ ಪ್ರಹ್ಹಾದ್‌ ಜೋಶಿ ಅವರ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಆಮ್ಲಜನಕಕ್ಕೆ ಕೊರತೆ ಆಗಿಲ್ಲ. ಪ್ರಾರಂಭದಲ್ಲಿ ನಮಗೆ ಕೇವಲ 230 ಟನ್‌ ಆಮ್ಲಜನಕ ಮಾತ್ರ ಹಂಚಿಕೆಯಾಗಿತ್ತು. ಅಲ್ಲಿಂದ ಈಗ ಅದು 1,050 ಟನ್‌ಗೆ ಏರಿಕೆಯಾಗಿದೆ. ಇದರಲ್ಲಿ ಅವರ ಪಾತ್ರ ದೊಡ್ಡದು’ ಎಂದು ತಿಳಿಸಿದರು.

‘ಹೆಲ್ತ್‌ ಅಂಡ್‌ ವೆಲ್‌ನೆಸ್‌ ವಿಭಾಗದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನಂಬರ್‌ 1 ಸ್ಥಾನ ನೀಡಿದೆ. ಲಸಿಕೆ ಹಾಕುವುದರಲ್ಲೂ ರಾಜ್ಯ ಮುಂಚೂಣಿಯಲ್ಲಿದೆ. ಈಗಾಗಲೇ 1.20 ಕೋಟಿ ಜನರಿಗೆ ಲಸಿಕೆ ಹಾಕಿದ್ದೇವೆ. 2 ಕೋಟಿ ಲಸಿಕೆಗಾಗಿ ಗ್ಲೋಬಲ್‌ ಟೆಂಡರ್‌ ಕರೆಯಲಾಗಿದೆ. ಈ ವಿಚಾರದಲ್ಲಿ ನಮ್ಮಿಂದ ಎಲ್ಲೂ ಲೋಪವಾಗಿಲ್ಲ. ಕೇಂದ್ರ ಸರ್ಕಾರ 1.15 ಕೋಟಿ ಡೋಸ್‌

ಲಸಿಕೆಯನ್ನು ರಾಜ್ಯಕ್ಕೆ ಉಚಿತವಾಗಿ ನೀಡಿದೆ’ ಎಂದು ತಿಳಿಸಿದರು.

‘ಮಾನಸಿಕ ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳು, ಸಿನಿಮಾ ಉದ್ಯಮದವರು, ಚಾಲಕರು, ಖೈದಿಗಳು, ಚಿತಾಗಾರ, ಸ್ಮಶಾನ, ರುದ್ರಭೂಮಿಯಲ್ಲಿ ಕೆಲಸ ಮಾಡುವವರು, ಆರೋಗ್ಯ ಕಾರ್ಯಕರ್ತರ ನಿಕಟ ಸಂಬಂಧಿಗಳು ಹೀಗೆ ಜನರೊಂದಿಗೆ ಹೆಚ್ಚಿನ ಒಡನಾಟ ಹೊಂದಿರುವ ವೃತ್ತಿಯಲ್ಲಿರುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಅದಕ್ಕೆ ಸಿದ್ಧತೆ ನಡೆದಿದೆ’ ಎಂದು ತಿಳಿಸಿದರು.

‘ಗದಗ ಜಿಲ್ಲೆಯಲ್ಲಿನ ಆರೋಗ್ಯ ವ್ಯವಸ್ಥೆ ಸುಧಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 500 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಘಟಕದ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಆಂಬುಲೆನ್ಸ್‌ ಒದಗಿಸಲಾಗುವುದು. ಔಷಧ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಆಮ್ಲಜನಕ ಉತ್ಪಾದನೆ 10 ಸಾವಿರ ಟನ್‌ಗೆ ಏರಿಕೆ

‘ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ 5 ಸಾವಿರ ಟನ್‌ ಆಮ್ಲಜನಕ ಮಾತ್ರ ಉತ್ಪಾದನೆ ಆಗುತ್ತಿತ್ತು. ಆದರೆ, ಒಂದೇ ವರ್ಷದ ಅವಧಿಯಲ್ಲಿ ಅದರ ಪ್ರಮಾಣ 10 ಸಾವಿರ ಟನ್‌ಗೆ ಏರಿಕೆಯಾಗಿದೆ’ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

‘ಇದು ಪ್ರಧಾನಿ ಮೋದಿ ಅವರ ದೂರದೃಷ್ಟಿತ್ವದ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಇದರಿಂದಾಗಿ ಪ್ರತಿ ತಾಲ್ಲೂಕಿನಲ್ಲೂ 50 ಆಮ್ಲಜನಕ ಬೆಡ್‌ ವ್ಯವಸ್ಥೆ ಮಾಡುವ ಚಿಂತನೆ ರಾಜ್ಯ ಸರ್ಕಾರಕ್ಕೆ ಇದೆ. ಕೋವಿಡ್ ಮೊದಲನೇ ಅಲೆಯಲ್ಲಿ ಎರಡು ಸಾವಿರ ಆಮ್ಲಜನಕ ಹಾಸಿಗೆಗಳು ಮಾತ್ರ ಇದ್ದವು. ಈಗ ಅದು 35 ಸಾವಿರಕ್ಕೆ ಏರಿಕೆಯಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.