ಹೊಳೆಆಲೂರ: ಸರ್ಕಾರಿ ಪ್ರೌಢ ಶಾಲೆ ಹೊಳೆಮಣ್ಣೂರು ನವಗ್ರಾಮದ ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿದಂತೆ ಬಿಸಿಯೂಟದ ಭೋಜನಾಲಯದ ಕಟ್ಟಡ ನಿರ್ಮಿಸಲು ಸ್ಥಳೀಯ ನಿವೃತ್ತ ಸೈನಿಕ ರಮೇಶ ಶಂಕರಗೌಡ ಹಟ್ಟಿ ₹6 ಲಕ್ಷ ದೇಣಿ ನೀಡಿ, ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಮಾಜಿ ಸೈನಿಕ ರಮೇಶ ಶಂಕರಗೌಡ ಹಟ್ಟಿ, ನಮ್ಮ ಊರಿನ ಮಕ್ಕಳು ಈ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಪಡೆದು, ಉನ್ನತ ಹುದ್ದೆ ಅಲಂಕರಿಸಿ, ಉತ್ತಮ ಪ್ರಜೆಯಾಗಿ ಬಾಳಬೇಕು. ಸಮಾಜ ಮತ್ತು ದೇಶಕ್ಕೆ ಅಮೂಲ್ಯ ಕೊಡುಗೆ ನೀಡುವಂತಾಗಬೇಕು. ವಿದ್ಯಾರ್ಥಿಗಳು ಶಿಸ್ತಿನಿಂದ ಕುಳಿತು ಊಟ ಮಾಡಲು ಅನುಕೂಲವಾಗುವಂತೆ ಭೋಜನಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದ್ದು, ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡಲಾಗುವುದು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಗದಗ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಸರ್ಕಾರಿ ಶಾಲೆ ಅಭಿವೃದ್ದಿ ವಿಚಾರದಲ್ಲಿ ಸಮುದಾಯವು ಕೈಜೋಡಿಸಿದರೆ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಅಕ್ಷರ ದಾಸೋಹ ಸಹಾಯಕ ಅಧಿಕಾರಿ ಬಸವರಾಜ ಅಂಗಡಿ ಹೊಳೆಮಣ್ಣೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಜಾತ ಮಠಪತಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಲಿಂಗಬಸು ಅಂಗಡಿ, ಸುರೇಶ ಹುಡೇದ ಮಾತನಾಡಿದರು.
ಇಲಾಖೆಯ ಉಪನಿರ್ದೇಶಕರಾದ ಎಂ.ಎ.ರಡ್ಡೇರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಬಸವರಾಜ, ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.