ಮುಂಡರಗಿ: 'ರಾಜ್ಯದಲ್ಲಿ ಸದಾ ಬರಗಾಲ ಬೀಳಲಿ ಎಂದು ರಾಜ್ಯದ ರೈತರರು ಬಯಸುತ್ತಾರೆ ಎಂದು ಹೇಳುವ ಮೂಲಕ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ರೈತ ಸಮುದಾಯವನ್ನು ಅವಮಾನಿಸಿದ್ದಾರೆ' ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿ ಹೇಳಿಕೆ ನೀಡಿರುವ ಶಿವಾನಂದ ಪಾಟೀಲ ಅವರು ತಕ್ಷಣ ರಾಜ್ಯದ ರೈತರ ಕ್ಷಮೆ ಕೇಳಬೇಕು' ಎಂದು ಆಗ್ರಹಿಸಿದರು.
ರೈತರಿಗೆ ಉಚಿತವಾಗಿ ನೀರು ಹಾಗೂ ವಿದ್ಯುತ್ ದೊರೆಯುತ್ತದೆ. ಜೊತೆಗೆ ಸರ್ಕಾರದಿಂದ ಬೀಜ, ಗೊಬ್ಬರ ಹಾಗೂ ಮತ್ತಿತರ ಕೃಷಿ ಸಾಮಗ್ರಿಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಇಷ್ಟೆಲ್ಲ ಇದ್ದಾಗಲೂ ರೈತರು ಬರಗಾಲ ಬರಲಿ ಎಂದು ಆಶಿಸುತ್ತಿದ್ದಾರೆ ಎಂದು ಪಾಟೀಲರು ತಿಳಿಸಿದ್ದಾರೆ. ರೈತರು ಬೆಳೆದ ಬೆಳೆಯನ್ನು ರೈತರೊಬ್ಬರೆ ತಿನ್ನುವುದಿಲ್ಲ. ಅದನ್ನು ದೇಶದ ಜನತೆಗೆ ನೀಡುತ್ತಾರೆ ಎನ್ನುವ ಸಾಮಾನ್ಯ ಜ್ಞಾನವಾದರೂ ಸಚಿವರಿಗೆ ಇರಬೇಕಿತ್ತು ಎಂದು ಸಚಿವರ ವಿರುದ್ಧ ಹರಿಹಾಯ್ದರು.
ಸಾಲ ಮನ್ನಾ ಮಾಡಿಸಿಕೊಳ್ಳುವುದಕ್ಕಾಗಿ ರೈತರು ಬರಗಾಲ ಬೀಳಲಿ ಎಂದು ಬಯಸುತ್ತಿದ್ದಾರೆ ಎಂದು ಹೇಳುವ ಮೂಲಕ ಸಚಿವ ಪಾಟೀಲರು ರೈತರನ್ನು ಅವಮಾನಿಸಿದ್ದಾರೆ. ಎಷ್ಟೆ ಕಷ್ಟ ಬಂದರೂ ಬೆಳೆದು ಅನ್ನ ನೀಡುವುದೊಂದೆ ರೈತನ ಕರ್ತವ್ಯವಾಗಿದ್ದು, ರೈತರು ಯಾವುದನ್ನು ಪುಕ್ಕಟ್ಟೆಯಾಗಿ ನಿರೀಕ್ಷಿಸುವುದಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಸಂದರ್ಭವನ್ನು ಅರಿತು ಮಾತನಾಡಬೇಕು ಎಂದು ತಿಳಿಸಿದರು.
ರೈತ ಸಮುದಾಯವನ್ನು ಅವಮಾನಿಸುವ ಇದೇ ಪ್ರವೃತ್ತಿ ಮುಂದುವರಿದರೆ ರಾಜ್ಯದ ರೈತರು ಬೀದಿಗಿಳಿದು ಅವರ ವಿರುದ್ಧ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.