ಮುಂಡರಗಿ: ಅರಣ್ಯ ಇಲಾಖೆ ಸಿಬ್ಬಂದಿ ಬಗರ್ ಹುಕುಂ ಸಾಗುವಳಿದಾರರನ್ನು ತೆರವುಗೊಳಿಸುವ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲ್ಲೂಕಿನ ಕೇಲೂರು ಗ್ರಾಮದ ನಿರ್ಮಲಾ ಪಾಟೀಲ ಅವರ ಮನೆಗೆ ಸಚಿವ ಬಿ.ಶ್ರೀರಾಮುಲು ಭಾನುವಾರ ಭೇಟಿ ನೀಡಿ ಮೃತ ಮಹಿಳೆಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಾಲ್ಲೂಕಿನ ಕೇಲೂರು ಗ್ರಾಮದ ರೈತ ಮಹಿಳೆಯರ ನಡುವೆ ಜಟಾಪಟಿ ನಡೆದು ಕೆಲೂರ ಗ್ರಾಮದ ನಿರ್ಮಲಾ ಪಾಟೀಲ ಎಂಬ ರೈತ ಮಹಿಳೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದರು.
ಮೃತ ಮಹಿಳೆಯ ಕುಟುಂಬಕ್ಕೆ ಸಚಿವ ಶ್ರೀರಾಮುಲು ಅವರು ವೈಯಕ್ತಿಕವಾಗಿ ₹2 ಲಕ್ಷ ನೆರವು ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬರು ರೈತ ಮಹಿಳೆ ಸರೋಜಮ್ಮ ಪಾಟೀಲ ಅವರ ಚಿಕಿತ್ಸೆಗೆ ₹50 ಸಾವಿರ ನೀಡಿದರು.
ಕೇಲೂರಿನ ಮೃತ ಮಹಿಳೆಗೆ ಸರ್ಕಾರದಿಂದ ₹25 ಲಕ್ಷ ನೀಡಬೇಕು ಮತ್ತು ಅವರಿಗೆ ವಾಲ್ಮೀಕಿ ನಿಗಮದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಶೀಘ್ರವಾಗಿ ನೀಡಬೇಕು. ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಹೋರಾಟಗಾರ ರವಿಕಾಂತ ಅಂಗಡಿ ಒತ್ತಾಯಿಸಿದರು.
ಪ್ರಕರಣ ಕುರಿತಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬಂಧಿಸಲು ಈಗಾಗಲೇ ಸೂಚಿಸಲಾಗಿದೆ. ಮೃತ ರೈತ ಮಹಿಳೆ ನಿರ್ಮಲಾ ಪಾಟೀಲ ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಶೀಘ್ರದಲ್ಲೇ ಕೊಡಿಸಲಾಗುವುದು. ಸರ್ಕಾರ ರೈತರ ಪರವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ರಾಮುಲು ಭರವಸೆ ನೀಡಿದರು.
ಶಾಸಕ ರಾಮಣ್ಣ ಲಮಾಣಿ, ರೈತ ಮುಖಂಡರಾದ ರವಿಕಾಂತ ಅಂಗಡಿ, ಚಂದ್ರಕಾಂತ ಚವಾಣ, ಎನ್.ಪೂಜಾರ, ಜೈ ಕಿಸಾನ್ ರೈತ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.