ADVERTISEMENT

ಅಧಿಕಾರ ಲೈಫ್‌ಟೈಂ ಅಲ್ಲ: ಶಾಸಕ ವ್ಯಂಗ್ಯ

ಗ್ಯಾರಂಟಿಗಳನ್ನು ಈಡೇರಿಸಲಾಗದೇ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ– ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2023, 15:39 IST
Last Updated 22 ಜೂನ್ 2023, 15:39 IST

ಗದಗ: ‘ರಾಜ್ಯದಲ್ಲಿ 135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಯಕರು, 2023ರ ಚುನಾವಣೆ ಫಲಿತಾಂಶ ಲೈಫ್‍ಟೈಮ್ ಅಂತ ತಿಳಿದಂತಿದೆ. ಈ ಕಾರಣಕ್ಕಾಗಿಯೇ ಕೆಲವು ಸಚಿವರಿಗೆ ‘ಹುಚ್ಚು-ಮಬ್ಬು’ ಹಿಡಿದು, ಅಪ್ರಬುದ್ಧರಂತೆ ಹೇಳಿಕೆ ಕೊಡುತ್ತಿದ್ದಾರೆ’ ಎಂದು ಶಾಸಕ ಸಿ.ಸಿ.ಪಾಟೀಲ ಲೇವಡಿ ಮಾಡಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಚುನಾವಣಾ ತಂತ್ರಗಾರರು ಸೂಚಿಸಿದ ಎಲ್ಲ ಯೋಜನೆಗಳನ್ನು ಅಧಿಕಾರ ಹಿಡಿಯುವ ಆಸೆಯಿಂದ ಪ್ರಕಟಿಸಿದ ಕಾಂಗ್ರೆಸ್‌ ನಾಯಕರು, ಈಗ ಅವುಗಳನ್ನು ಈಡೇರಿಸಲಾಗದೇ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿ ಘೋಷಿಸಿ ಎಲ್ಲರಿಗೆ ಎಲ್ಲವೂ ಫ್ರೀ.. ಫ್ರೀ.. ಅಂತ ಹೇಳಿದರು. ಗೆದ್ದ ಬಳಿಕ, ‘ನನಗೂ ಡಬಲ್‌.. ನಿನಗೂ ಡಬಲ್‌’ ಎನ್ನುತ್ತಾ ವಿದ್ಯುತ್‌ ದರ, ಹಾಲಿನ ದರ ಹೆಚ್ಚಿಸುತ್ತಿದ್ದಾರೆ’ ಎಂದು ವ್ಯಂಗ್ಯ ಮಾಡಿದರು.

ADVERTISEMENT

‘ಕೇಂದ್ರ ಸರ್ಕಾರ ದೇಶದ 80 ಕೋಟಿ ಜನರಿಗೆ ತಲಾ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಕಾಂಗ್ರೆಸ್‌ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹೆಚ್ಚುವರಿಯಾಗಿ 10 ಕೆ.ಜಿ. ಅಕ್ಕಿ ಕೊಡಬೇಕು. ಗುಜರಾತ್‌ ಹಾಲನ್ನು ತಿರಸ್ಕಾರ ಮಾಡಿದವರಿಗೆ, ಜಾರ್ಖಂಡ್‌, ಚತ್ತೀಸ್‌ಗಡ, ಹಿಮಾಚಲ ಪ್ರದೇಶದ ಅಕ್ಕಿ ಏಕೆ ಬೇಕು? ಕಾಂಗ್ರೆಸ್‌ ಸರ್ಕಾರದ ಯೋಜನೆಗೆ ಬೇಕಿರುವಷ್ಟು ಅಕ್ಕಿಯನ್ನು ಕರ್ನಾಟಕದ ರೈತರಿಂದಲೇ ಖರೀದಿಸಬೇಕು. ಅಷ್ಟು ಪ್ರಮಾಣದ ಅಕ್ಕಿ ಸಿಗಲಿಲ್ಲವಾದರೆ, ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು. ಅಷ್ಟೇ ಅಲ್ಲದೇ ಗೃಹಜ್ಯೋತಿ ಅಡಿ ಅವರೇ ಘೋಷಿದಂತೆ ಪ್ರತಿಯೊಬ್ಬರಿಗೂ 200 ಯೂನಿಟ್‍ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕು’ ಎಂದು ಒತ್ತಾಯಿಸಿದರು.

‘ವಿದ್ಯುತ್ ದರ ಹೆಚ್ಚಳ ಹಿಂದಿನ ಸರ್ಕಾರದ್ದು ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಹಿಂದಿನ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ವಿದ್ಯುತ್ ದರ ಹೆಚ್ಚಳವನ್ನೂ ತಡೆ ಹಿಡಿಯಬಹುದಿತ್ತು’ ಎಂದು ಕುಟುಕಿದರು.

‘ಹತ್ತಾರು ಬಜೆಟ್‌ಗಳನ್ನು ಮಂಡಿಸಿದ ಅನುಭವವುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ಈ ಬಿಟ್ಟಿ ಯೋಜನೆಗಳ ಬಗ್ಗೆ ಯೋಚಿಸದೇ, ಇದೀಗ ಕೇಂದ್ರದತ್ತ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ. ಮೊದಲು ಜನತೆಗೆ ನೀಡಿದ್ದ ಭರವಸೆ ಈಡೇರಿಸುವ ಮೂಲಕ ಅವರು ತಮ್ಮ ಮಾತು ಉಳಿಸಿಕೊಳ್ಳಲಿ’ ಎಂದು ಸವಾಲು ಹಾಕಿದರು.

ಸರ್ಕಾರ ಬಂದು ಒಂದು ತಿಂಗಳಾದರೂ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಿಲ್ಲ. ಲೋಕಸಭೆ ಚುನಾವಣೆಯ ಮತದಾನ ದಿನ ರಾಜ್ಯ ಸರ್ಕಾರ ‘ಎಲ್ಲ ಗ್ಯಾರಂಟಿಗಳು ಇಂದಿಗೆ ಸಮಾಪ್ತಿ’ ಎಂದು ತನ್ನ ಆರನೇ ಗ್ಯಾರಂಟಿ ಘೋಷಿಸುತ್ತದೆ ಎಂದು ಲೇವಡಿ ಮಾಡಿದರು.

‘ನಾವು ರಾಜ್ಯಸಭೆಗೆ ಹೋಗಿ ಅಂತ ಹೇಳಿದರೂ ಒಪ್ಪಲಿಲ್ಲ. ಇದೀಗ ಚುನಾವಣೆಯಲ್ಲಿ ಸೋತ ಬಳಿಕ ವಿಧಾನ ಪರಿಷತ್‍ಗೆ ಒಪ್ಪಿಕೊಂಡು ಹೋಗಿದ್ದಾರೆ’ ಎಂದು ಶಾಸಕ ಸಿ.ಸಿ. ಪಾಟೀಲ ಅವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟಾಂಗ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.