ADVERTISEMENT

ಗುರುವಿನ ಆಶೀರ್ವಾದ ಪಡೆದ ಶಾಸಕ ಚಂದ್ರು ಲಮಾಣಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 16:18 IST
Last Updated 18 ಜೂನ್ 2024, 16:18 IST
ನರೇಗಲ್‌ ಪಟ್ಟಣದಲ್ಲಿರುವ ಶಿಕ್ಷಕ ಆರ್.ಎಸ್. ನರೇಗಲ್‌ ಅವರ ಮನೆಗೆ ಭೇಟಿ ನೀಡಿದ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿಯವರನ್ನು ಸನ್ಮಾನಿಸಲಾಯಿತು
ನರೇಗಲ್‌ ಪಟ್ಟಣದಲ್ಲಿರುವ ಶಿಕ್ಷಕ ಆರ್.ಎಸ್. ನರೇಗಲ್‌ ಅವರ ಮನೆಗೆ ಭೇಟಿ ನೀಡಿದ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿಯವರನ್ನು ಸನ್ಮಾನಿಸಲಾಯಿತು   

ನರೇಗಲ್: ‘ಬಾಲ್ಯದ ದಿನಗಳಲ್ಲಿ ಬಡತನದ ಕಾರಣ ಬಿಸಿಎಂ ಹಾಸ್ಟೆಲ್‌ನಲ್ಲಿದ್ದು ಓದುವಾಗ ನನ್ನ ಪ್ರತಿಭೆಯನ್ನು ಗುರುತಿಸಿ ಓದಿಗೆ ಪ್ರೋತ್ಸಾಹಿಸಿದ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯಲು ದಾರಿ ತೋರಿಸಿದ ಗುರುಗಳ ಆಶೀರ್ವಾದದಿಂದ ನಾನಿಂದು ವೈದ್ಯನಾಗಿ, ಶಾಸಕನಾಗಿ ಸೇವೆ ಮಾಡಲು ಸಾಧ್ಯವಾಗಿದೆ’ ಎಂದು ಶಿರಹಟ್ಟಿಯ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ನರೇಗಲ್‌ ಪಟ್ಟಣದ ಕೃಷ್ಣಾಜಿ ರಂಗರಾವ್‌ ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕ ಆರ್.ಎಸ್ ನರೇಗಲ್‌ರವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.

‘2003-04ರಲ್ಲಿ ಮುಂಡರಗಿ ತಾಲ್ಲೂಕಿನ ಡೋಣಿ ಸರ್ಕಾರಿ ಪ್ರೌಢಶಾಲೆಯಲ್ಲಿ 8-10ನೇ ತರಗತಿಯವರೆಗೆ ಓದುವಾಗ ಅಲ್ಲಿನ ಎಲ್ಲ ಶಿಕ್ಷಕರು ಪ್ರತಿಭಾವಂತ ಹಿಂದುಳಿದ ವಿದ್ಯಾರ್ಥಿಗಳ ಬಾಳನ್ನು ಬೆಳಗಿದರು. ಅದರಲ್ಲೂ ದೈಹಿಕ ಶಿಕ್ಷಣದ ಶಿಕ್ಷಕರಾಗಿದ್ದ ಆರ್.ಎಸ್. ನರೇಗಲ್ಲರವರು ಶಿಸ್ತು, ಸಯಂಮ, ಸಮಯ ಪಾಲನೆ, ದೈಹಿಕ ಮತ್ತು ಮಾನಸಿಕ ಧೃಡತೆಯ ಬಗ್ಗೆ ನೀಡಿದ ಶಿಕ್ಷಣ ನಮ್ಮ ಬಾಳನ್ನು ಬೆಳಗಿದೆ’ ಎಂದು ಸ್ಮರಿಸಿದರು.

ADVERTISEMENT

ದೈಹಿಕ ಶಿಕ್ಷಣದ ಶಿಕ್ಷಕ ಆರ್.ಎಸ್. ನರೇಗಲ್ ಅವರು ಶಾಸಕರನ್ನು ಸನ್ಮಾನಿಸಿದರು. ಶಾಸಕನಾಗಿ ಸೇವೆ ಸಲ್ಲಿಸುತ್ತಿರುವ ತಮ್ಮ ವಿದ್ಯಾರ್ಥಿಯ ಕುರಿತು ಹರ್ಷ ವ್ಯಕ್ತಪಡಿಸಿದರು.

ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ರಟ್ಟಿಹಳ್ಳಿ, ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ, ಶಿಕ್ಷಕ ವಿ.ಎ. ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.