ಲಕ್ಕುಂಡಿ: ಇಲ್ಲಿಯ ಅಂಜುಮನ್ ಎ ಇಸ್ಲಾಂ ಕಮಿಟಿ ಆಶ್ರಯದಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿಯ ಪಾಪನಾಶಿ ರಸ್ತೆಯಲ್ಲಿರುವ ಮೆಹಬೂಬ ಸುಬಾನಿ ದರ್ಗಾದ ಹತ್ತಿರ ಮೌಲಾನಾ ಸಲೀಂ ಸಖಾಫಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮಹಮ್ಮದ್ ಪೈಗಂಬರ್ ತತ್ವ, ಸಂದೇಶಗಳನ್ನು ಘೋಷಣೆ ಕೂಗಲಾಯಿತು. ಯುವಕರು ಬೈಕ್ ರ‍್ಯಾಲಿ ಮೂಲಕ ಪಾಲ್ಗೊಂಡಿದ್ದರು.
ಹಿರೇಮಸೂತಿಯ ಆವರಣದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ಭಾಗವಹಿಸಿದ್ದ ಮೌಲಾನಾ ನಿಜಾಮ ಖಾದ್ರಿ, ‘ದೇವನೊಬ್ಬ ನಾಮ ಹಲವು ಎಂದು ಹೇಳಿರುವ ಮಹಮದ್ ಪೈಗಂಬರ್‌ರು ಎಲ್ಲರಿಗೂ ದೇವರು ಒಬ್ಬನೇ ಇದ್ದಾನೆ. ಸರ್ವ ಸಮುದಾಯದವರು ಸ್ನೇಹ, ಭ್ರಾತೃತ್ವದಿಂದ ನಡೆದುಕೊಳ್ಳಬೇಕು ಎಂದು ಸಾರಿದ್ದಾರೆ. ಅವರ ತತ್ವೋಪದೇಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಮೌಲಾನಾ ಸಲೀಂ ಸಖಾಫಿ, ಮೌಲಾನಾ ನಿಜಾಮ ಖಾದ್ರಿ ಅವರನ್ನು ಸನ್ಮಾನಿಸಲಾಯಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ದಾದಾಪೀರಸಾಬ ಕೊರ್ಲಳ್ಳಿ, ಕಾರ್ಯದರ್ಶಿ ವಾಶಿಂಸಾಬ ಮಸೂತಿಮನಿ, ಪದಾಧಿಕಾರಿಗಳು, ಸದಸ್ಯರು ಹಾಗೂ ಟಿಪ್ಪು ಸುಲ್ತಾನ್ ಯೂತ್ ಕಮಿಟಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.