ಗದಗ: ‘ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊಹರಂ ಮೊದಲ ತಿಂಗಳು. ಈ ತಿಂಗಳನ್ನು ಇಸ್ಲಾಂನಲ್ಲಿ ಹೊಸ ವರ್ಷ ಅಂತ ಆಚರಣೆ ಮಾಡಲಾಗುತ್ತದೆ. ಮೊಹರಂ ತಿಂಗಳ 10 ದಿನವನ್ನು ರೋಜ್-ಏ-ಆಶುರಾ ಎಂದು ಕರೆಯಲಾಗುತ್ತದೆ. ಅದನ್ನೇ ಕ್ಯಾಲೆಂಡರ್‌ನಲ್ಲಿ ಮೊಹರಂ ಎಂದು ಕರೆಯಲಾಗಿದೆ’ ಎಂದು ಧನ್ಯ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ರಮೇಶ್ ಬಿ. ಚಲವಾದಿ ಹೇಳಿದರು.
ಮೊಹರಂ ಅಂಗವಾಗಿ ನಗರದ ಇರಾನಿ ಕಾಲೊನಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಾರ್ಡ್ ಹಿರಿಯರ ಜತೆಗೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
‘ಮೊಹರಂ ತಿಂಗಳ 10ನೇ ದಿನದಂದು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಕಿರಿಯ ಮೊಮ್ಮಗ ಇಮಾಮ್ ಹುಸೇನ್ ಮತ್ತವರ 72 ಅನುಯಾಯಿಗಳು ಧರ್ಮದ ಉಳಿವಿಗಾಗಿ ವೀರ ಮರಣವನ್ನಪ್ಪಿದರು. ಅರಬ್ ರಾಜ ಯಜೀದ್ ವಿರುದ್ಧ ನಡೆದ ಯುದ್ಧದಲ್ಲಿ ಇಮಾಮ್ ಹುಸೇನ್ ಮತ್ತವರ ಅನುಯಾಯಿಗಳು ಇಸ್ಲಾಂ ಧರ್ಮಕ್ಕಾಗಿ ತಮ್ಮ ಪ್ರಾಣ ಬಲಿದಾನ ಮಾಡಿರುತ್ತಾರೆ’ ಎಂದು ತಿಳಿಸಿದರು.
‘ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗಪಡೆದು ರಂಜಿಸುತ್ತಿದೆ. ಇಮಾಮ್ ಹುಸೇನ್ ದುರಂತ ಸಾವಿನ ಸಂತಾಪ ಸೂಚಿಸುವ ಈ ಹಬ್ಬದಲ್ಲಿ ಹಸ್ತ ಸಂಕೇತಗಳನ್ನು ಬಳಸಲಾಗುತ್ತದೆ. ಹಿಂದೂ-ಮುಸ್ಲಿಮರು ಒಂದಾಗಿ ಭಾವೈಕ್ಯದಿಂದ ಮೊಹರಂ ಆಚರಣೆ ಮಾಡುತ್ತಾರೆ. ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರು ಹಿಡಿಯುವುದು, ಬೆಂಕಿಯಲ್ಲಿ ನಡೆದಾಡುವುದು, ಹಿಂದೂಗಳೆಲ್ಲ ಸೇರಿ ನೈವೇದ್ಯ ನೀಡುತ್ತಾರೆ’ ಎಂದು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಪಂಜಾ ಅಥವಾ ದೇವರು ಹೊತ್ತವರಲ್ಲಿ ಭಯ, ಭಕ್ತಿ, ಹೇಳಿಕೆಗಳು, ರೈತರಿಗೆ ಭವಿಷ್ಯತ್ತಿನಲ್ಲಿ ಮಳೆ, ಬೆಳೆಯ ಬಗ್ಗೆ, ಸಂತಾನ ಪ್ರಾಪ್ತಿಯ ಬಗ್ಗೆ, ಮನೆತನಗಳ ಸಮಸ್ಯೆ ಪರಿಹಾರಗಳ ಬಗ್ಗೆ ಇನ್ನೂ ಮುಂತಾದ ಪ್ರಶ್ನೆಗಳನ್ನು ಭಕ್ತಾದಿಗಳು ಕೇಳುವ ಪದ್ಧತಿ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಇನ್ನು ಜೀವಂತವಾಗಿದೆ ಎಂದರು.
ಮೊಹರಂ ಆಚರಣೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ನೆರವಾಗುವಂತೆ ಪೊಲೀಸ್ ಸಿಬ್ಬಂದಿ ಮನವಿ ಮಾಡಿದರು.
ಪೊಲೀಸ್ ಅಧಿಕಾರಿಗಳಾದ ಮಂಜುನಾಥ್ ಪಾಟೀಲ್, ಚೇಗರೆಡ್ಡಿ ಹಾಗೂ ಅಮಾತ್ಯನವರು, ಸ್ಥಳೀಯರಾದ ಅಕ್ಬರಲಿ ಇರಾನಿ, ತೌಫಿಕ್ ಇರಾನಿ, ತಿಪ್ಪಣ್ಣ ಮಡಿವಾಳ, ಸಿ.ಬಿ.ಬಾರಕೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.