ADVERTISEMENT

ಹಿಂದೂಗಳ ಊರಲ್ಲಿ ಮೊಹರಂ ಸಂಭ್ರಮ: ಭಾವೈಕ್ಯಕ್ಕೆ ಸಾಕ್ಷಿಯಾದ ಗುಡ್ಡದಬುದಿಹಾಳ

ಲಕ್ಷ್ಮಣ ಎಚ್.ದೊಡ್ಡಮನಿ
Published 15 ಜುಲೈ 2024, 8:28 IST
Last Updated 15 ಜುಲೈ 2024, 8:28 IST
ಡಂಬಳ ಹೋಬಳಿ ಗುಡ್ಡದಬುದಿಹಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಪಂಜಾಗಳನ್ನು ಅಲಂಕರಿಸಿರುವುದು
ಡಂಬಳ ಹೋಬಳಿ ಗುಡ್ಡದಬುದಿಹಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಪಂಜಾಗಳನ್ನು ಅಲಂಕರಿಸಿರುವುದು   

ಡಂಬಳ: ಮೊಹರಂ ಮುಸ್ಲಿಂ ಸಮುದಾಯ ಆಚರಿಸುವ ಹಬ್ಬ. ಆದರೆ, ಡಂಬಳ ಹೋಬಳಿಯ ಗುಡ್ಡದಬುದಿಹಾಳ ಗ್ರಾಮದಲ್ಲಿ ಹಿಂದೂಗಳೇ ಕೂಡಿಕೊಂಡು ಮಸೀದಿ (ಮುಸ್ಲಿಂ ಶೈಲಿಯ ಪುಟ್ಟ ದೇಗುಲ) ಕಟ್ಟಿಸಿ, ಪ್ರತಿ ವರ್ಷ ಮೊಹರಂ ಹಬ್ಬ ಆಚರಣೆ ಮಾಡುತ್ತಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಅಂದಾಜು 400 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಲಿಂಗಾಯತರು, ದಲಿತರು, ಕುರುಬ ಸಮುದಾಯದ ಜನಸಂಖ್ಯೆ ಅಧಿಕವಾಗಿದ್ದು, ಬ್ರಾಹ್ಮಣ ಮತ್ತು ಮರಾಠ ಕುಟುಂಬಗಳು ಬೆರಳೆಣಿಕೆಯಷ್ಟಿವೆ.

ಪ್ರಾರ್ಥನೆ, ಸಕ್ಕರೆ ಓದಿಕೆ, ಗಂಧ ನೈವೈದ್ಯ ಸೇರಿದಂತೆ ಮುಸ್ಲಿಂ ಪೂಜಾ ವಿಧಾನಗಳನ್ನು ಚಿಕ್ಕವಡ್ಡಟ್ಟಿ ಗ್ರಾಮದ ಮುಸ್ಲಿಂ ಮುಲ್ಲಾಗಳು ಮೊಹರಂ ಹಬ್ಬದಲ್ಲಿ ಮಾತ್ರ ಓದಿಕೆ ಮಾಡುವುದು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿರುವುದು ವಿಶೇಷ. ಇಲ್ಲಿರುವ ಮೌಲಾಲಿ, ಭೀಬಿ ಫಾತಿಮಾ, ಹಸನ್, ಹುಸೇನ್‌, ಖಾಸಿಂ ಪಂಜಾಗಳನ್ನು ಹಿಂದೂ ಸಮಾಜದವರೇ ಹೊತ್ತು ಮೆರವಣಿಗೆ ಮಾಡುತ್ತಾರೆ.

ADVERTISEMENT

‘ನಮ್ಮಲ್ಲಿ ಭೇದಭಾವವಿಲ್ಲ. ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಸೌಹಾರ್ದ ಇದೆ. ನಾಲ್ಕು ದಶಕಗಳಿಂದ ಮೆರವಣಿಗೆಯಲ್ಲಿ ಪಂಜಾ ಹೊತ್ತು ದೇವರಿಗೆ ಭಕ್ತಿ ಸರ್ಮಪಿಸುತ್ತಿದ್ದೇವೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಸುರೇಶಪ್ಪ ಸಾಲಿ.

‘ಮುಸ್ಲಿಂ ದೇಗುಲಕ್ಕೆ ಸುಣ್ಣ ಬಣ್ಣ ವಿದ್ಯುತ್ ಅಲಂಕಾರ ಸೇರಿದಂತೆ ಇತರೆ ಖರ್ಚು ವೆಚ್ಚವನ್ನು ಭಕ್ತರಿಂದ ಸಂಗ್ರಹ ಮಾಡಿ ನಿರ್ವಹಣೆ ಮಾಡುತ್ತೇವೆ. ಭಕ್ತರಿಂದ ಸಂಗ್ರಹ ಮಾಡಿದ ದೇಣಿಗೆಯಿಂದ ಅಂದಾಜು ₹6 ಲಕ್ಷ ವೆಚ್ಚದಲ್ಲಿ 2014ರಲ್ಲಿ ಹೊಸದಾಗಿ ಪುಟ್ಟ ದೇಗುಲ ನಿರ್ಮಾಣ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಾಮದ ಪ್ರತಿಯೊಬ್ಬರೂ ಆರ್ಥಿಕ ಸಹಾಯ ಮಾಡಿದ್ದಾರೆ. ದೇವಸ್ಥಾನದಲ್ಲಿ ಮುಸ್ಲಿಂ ದೇವರ ಭಾವಚಿತ್ರ ಸೇರಿದಂತೆ ಸಂತ ಶಿಶುನಾಳ ಷರೀಫರು ಮತ್ತು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರವನ್ನು ಅಳವಡಿಸಲಾಗಿದ್ದು, ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಗ್ರಾಮದಲ್ಲಿ ಇತರೆ ದೇವಸ್ಥಾನಗಳು ಇವೆ. ನಮ್ಮ ಗ್ರಾಮದಲ್ಲಿ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಕೇಶಪ್ಪ ತಳವಾರ.

‘13ನೇ ವಯಸ್ಸಿನಿಂದ ನಾನು ಭೀಬಿ ಫಾತಿಮಾ ದೇವರನ್ನು ಹೊರುತ್ತಿದ್ದೇನೆ. ಮಂಜಪ್ಪ ಹನಮಪ್ಪ ಹಂಗನಕಟ್ಟಿ ಮೌಲಾಲಿ ದೇವರನ್ನು ಹೊರುತ್ತಾರೆ. ಮೊಹರಂ ಹಬ್ಬದಲ್ಲಿ ಕತ್ತಲ ರಾತ್ರಿಯಂದು ಪ್ರಸಾದದ ವ್ಯವಸ್ಥೆ ಇರುತ್ತದೆ. ಈ ದರ್ಗಾಗಕ್ಕೆ ಅಸಂಖ್ಯಾತ ಭಕ್ತರು ನಡೆದುಕೊಳ್ಳುತ್ತಾರೆ’ ಎನ್ನುತ್ತಾರೆ 66 ವರ್ಷ ವಯಸ್ಸಿನ ರಾಮನಗೌಡ ಹನಮಂತಗೌಡ ಪಾಟೀಲ.

ಡಂಬಳ ಹೋಬಳಿ ಗುಡ್ಡದಬೂದಿಹಾಳ ಗ್ರಾಮದಲ್ಲಿ ಹಿಂದೂಗಳೇ ನಿರ್ಮಾಣ ಮಾಡಿರುವ ಮಸೀದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.