ADVERTISEMENT

ಮುಂಡರಗಿ: ಅರಣ್ಯ ಕೃಷಿಯಲ್ಲಿ ಲಾಭ, ನೆಮ್ಮದಿ ಕಂಡ ಚಂದ್ರಕಾಂತ ಭರಮಪ್ಪ

ರೈತನಿಗೆ ಅನುದಾನ ಒದಗಿಸಿದ ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:25 IST
Last Updated 22 ನವೆಂಬರ್ 2024, 4:25 IST
ಮುಂಡರಗಿಯ ಚಂದ್ರಕಾಂತ ಉಳ್ಳಾಗಡ್ಡಿ ಅವರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಮರಗಳು
ಮುಂಡರಗಿಯ ಚಂದ್ರಕಾಂತ ಉಳ್ಳಾಗಡ್ಡಿ ಅವರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಮರಗಳು   

ಮುಂಡರಗಿ: ಪಟ್ಟಣದ 75 ವರ್ಷದ ಹಿರಿಯ ಕೃಷಿಕ ಚಂದ್ರಕಾಂತ ಭರಮಪ್ಪ ಉಳ್ಳಾಗಡ್ಡಿ ಅವರು ತಮ್ಮ ಪತ್ನಿ ಅನ್ನಪೂರ್ಣಮ್ಮನವರೊಂದಿಗೆ 25 ವರ್ಷದ ನವ ಯುವಕನಂತೆ ನಿತ್ಯ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಸ್ವಂತ ಏಳು ಎಕರೆ ಜಮೀನು ಹೊಂದಿರುವ ಚಂದ್ರಕಾಂತ ಅವರು ಅದರಲ್ಲಿ ದೀರ್ಘಾವಧಿ ಫಸಲು ನೀಡುವ ಸಾವಿರಾರು ಮರಗಳನ್ನು ಬೆಳೆದು ಆದಾಯದ ನಿರೀಕ್ಷೆಯಲ್ಲಿದ್ದಾರೆ. ಭವಿಷ್ಯದಲ್ಲಿ ಸುಮಾರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವೈವಿಧ್ಯಮಯ ಗಿಡ, ಮರಗಳು ಅವರ ಜೀವನಕ್ಕೆ ನೆರವಾಗಲಿವೆ.

ತಮ್ಮ ಜಮೀನಿನಲ್ಲಿ ಸುಮಾರು 4,000 ಮಹಾಗಣಿ, 350 ಹುಣಸೆ, 500 ಸೀತಾಫಲ, 2,000 ಶ್ರೀಗಂಧ, 300 ರಕ್ತ ಚಂದನ ಮೊದಲಾದ ಧೀರ್ಘಾವಧಿ ಫಸಲು ನೀಡುವ ಗಿಡಗಳನ್ನು ಬೆಳೆಯುತ್ತಿದ್ದಾರೆ. ಆಂಧ್ರ ಪ್ರದೇಶದಿಂದ ₹161 ಒಂದರಂತೆ ವಿಶೇಷ ಹುಣಸೆ ಸಸಿಗಳನ್ನು ನಾಟಿ ಮಾಡಿದ್ದು, ಇನ್ನೆರಡು ವರ್ಷಗಳಲ್ಲಿ ಅವು ಫಲ ನೀಡಲಿವೆ. ಅದೇ ರೀತಿ ತಲಾ ₹60 ನೀಡಿ ಶ್ರೀಗಂಧದ ಸಸಿಗಳನ್ನು ನಾಟಿ ಮಾಡಿದ್ದು, ಭವಿಷ್ಯದಲ್ಲಿ ಅವು ಚಂದ್ರಕಾಂತ ಅವರಿಗೆ ಭಾರಿ ಆದಾಯ ನೀಡಲಿವೆ. ಜೊತೆಗೆ ರಕ್ತ ಚಂದನ, ಮಹಾಗಣಿ ಮೊದಲಾದವುಗಳು ಅಪಾರ ಪ್ರಮಾಣದ ಆದಾಯ ತರಲಿವೆ ಎಂದು ಅಂದಾಜಿಸಲಾಗಿದೆ.

ADVERTISEMENT

ಚಂದ್ರಕಾಂತ ಅವರು ಜಮೀನಿನಲ್ಲಿ ಬೆಳೆದಿರುವ ಸೀತಾಫಲ ಗಿಡಗಳು ಕಳೆದ ಮೂರು ವರ್ಷಗಳಿಂದ ಫಸಲು ನೀಡುತ್ತಲಿದ್ದು, ಅವುಗಳಿಂದ ವಾರ್ಷಿಕ ₹50 ಸಾವಿರ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ 20ಗುಂಟೆ ಜಮೀನಿನಲ್ಲಿ ಕನಕಾಂಬರ ಬೆಳೆದಿದ್ದು, ಅದರಿಂದ ಬರುವ ಆದಾಯದಿಂದ ಕುಟುಂಬದ ದೈನಂದಿನ ಖರ್ಚು, ವೆಚ್ಚ ನಿಭಾಯಿಸುತ್ತಿದ್ದಾರೆ. ಗಿಡಗಳ ಮಧ್ಯದಲ್ಲಿ ಬೆಳೆದಿದ್ದ ಮೆಣಸಿನಕಾಯಿಗಳಿಂದ ₹50 ಸಾವಿರ, ನುಗ್ಗೆ ಗಿಡಗಳಿಂದ ₹80 ಸಾವಿರ ಆದಾಯ ಪಡೆದುಕೊಂಡಿದ್ದಾರೆ. ಜಮೀನಿನಲ್ಲಿ ಹಲವು ಮಾವು, ಪೇರಲ ಗಿಡಗಳನ್ನು ಬೆಳೆದಿದ್ದಾರೆ.

ಜಮೀನಿನಲ್ಲಿ ಒಂದು ಕೊಳವೆ ಬಾವಿಯಿದ್ದು, ಹನಿ ನೀರಾವರಿ ಪದ್ಧತಿಯ ಮೂಲಕ ನಿತ್ಯ ಎಲ್ಲ ಗಿಡಗಳಿಗೆ ನಿಯಮಿತವಾಗಿ ನೀರೊದಗಿಸುತ್ತಿದ್ದಾರೆ. ಜಮೀನಿನಲ್ಲಿ ಬೆಳೆಯುವ ಕಸ, ಕಡ್ಡಿ, ಹುಲ್ಲು, ಗಿಡಗಳಿಂದ ಧರೆಗುರುಳುವ ಎಲೆ ಹಾಗೂ ಮತ್ತಿತರ ತ್ಯಾಜ್ಯವನ್ನು ವ್ಯರ್ಥ ಮಾಡದೆ ಅದನ್ನು ಜಮೀನಿನಲ್ಲಿಯೇ ಕೊಳೆಯಲು ಬಿಡುತ್ತಾರೆ. ರಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಔಷಧಗಳಿಂದ ದೂರವಿರುವ ಚಂದ್ರಕಾಂತ ಅವರು ಸಾವಯವ ಗೊಬ್ಬರವನ್ನು ಮಾತ್ರ ಬಳಸುತ್ತಾರೆ.

ಜಮೀನಿನಲ್ಲಿ ಗೋ ಕೃಪಾಮೃತ ಘಟಕವನ್ನು ಸ್ಥಾಪಿಸಿದ್ದು ಎಲ್ಲ ಗಿಡ, ಮರಗಳಿಗೆ ಹನಿ ನೀರಾವರಿ ಪೈಪುಗಳ ಮೂಲಕ ನಿಯಮಿತವಾಗಿ ಗೋ ಕೃಪಾಮೃತ ನೀಡುತ್ತಲಿದ್ದಾರೆ. ನಾಲ್ಕು ದೊಡ್ಡ ಬ್ಯಾರಲ್‌ಗಳಲ್ಲಿ ಪ್ರಮಾಣಬದ್ಧವಾಗಿ ಗೋ ಮೂತ್ರ, ಜವಾರಿ ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು, ಸಗಣಿ ಮೊದಲಾದವುಗಳನ್ನು ಮಿಶ್ರಣ ಮಾಡಿ ಗೋ ಕೃಪಾಮೃತ ತಯಾರಿಸಲಾಗುತ್ತದೆ. ಇದು ಬೆಳೆಗಳಿಗೆ ಉತ್ತಮ ಪೋಷಕಾಂಶ ನೀಡುತ್ತಿದ್ದು, ಇದರ ಬಲದಿಂದ ಚಂದ್ರಕಾಂತ ಅವರು ಸಂಭ್ರದ್ಧವಾಗಿ ಗಿಡ, ಮರಗಳನ್ನು ಬೆಳೆದಿದ್ದಾರೆ.

ಕೃಷಿಯಲ್ಲಿ ಲಾಭ ಮಾಡಿಕೊಳ್ಳಲು ಈಗ ಸಾಕಷ್ಟು ಅವಕಾಶಗಳಿದ್ದು ರೈತರು ಕೃಷಿ ಇಲಾಖೆಯ ಯೋಜನೆಗಳಿಂದ ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು
ಚಂದ್ರಕಾಂತ ಉಳ್ಳಾಗಡ್ಡಿ ರೈತ ಮುಂಡರಗಿ

ಮೇಕೆ ಸಾಕಾಣಿಕೆಗೆ ತಯಾರಿ

ಚಂದ್ರಕಾಂತ ಅವರು ತಮ್ಮ ಜಮೀನಿನಲ್ಲಿ 200 ಮೇಕೆ ಸಾಕುವ ಯೋಜನೆಯನ್ನು ರೂಪಿಸಿದ್ದು ಪಶು ಸಂಗೋಪನಾ ಇಲಾಖೆಯಿಂದ ಈಗಾಗಲೇ ಅವರಿಗೆ ಮಂಜೂರಾತಿ ದೊರೆತಿದೆ. ಇಲಾಖೆಯು ಅವರಿಗೆ ₹20ಲಕ್ಷ ನೀಡಲಿದ್ದು ಇಲಾಖೆಯಿಂದ ಅದಕ್ಕೆ ಶೇ 50ರಷ್ಟು ಸಹಾಯ ಧನ ನೀಡಲಾಗುತ್ತದೆ. ಚಂದ್ರಕಾಂತ ಅವರು ಅದಕ್ಕೆ ಅಗತ್ಯ ತಯಾರಿ ಮಾಡಿಕೊಂಡಿದ್ದು ಸ್ಥಳಿಯ ಬ್ಯಾಂಕಿನವರು ಸಾಲ ನೀಡಲು ಮುಂದೆ ಬಂದಿದ್ದಾರೆ. ಸುಮಾರು ₹14ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಲಿದ್ದು ಸಧ್ಯದಲ್ಲಿಯೇ ಮೇಕೆ ಸಾಕಾಣಿಕೆ ಅರಂಭವಾಗಲಿದೆ.

ಅರಣ್ಯ ಇಲಾಖೆಯ ನೆರವು

ಚಂದ್ರಕಾಂತ ಅವರು ಜಮೀನ ತುಂಬಾ ಗಿಡ ಮರಗಳನ್ನು ಬೆಳೆದಿರುವುದರಿಂದ ಅರಣ್ಯ ಇಲಾಖೆಯು ಕಳೆದ ಮೂರು ವರ್ಷಗಳಿಂದ ಚಂದ್ರಕಾಂತ ಅವರಿಗೆ ವಾರ್ಷಿಕ ₹2.4ಲಕ್ಷ  ಪ್ರೋತ್ಸಾಹ ಧನ ನೀಡುತ್ತಲಿದೆ. ಆರು ವರ್ಷಗಳವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಆರು ವರ್ಷಗಳ ನಂತರ ಕೇಂದ್ರ ಸರ್ಕಾರವು ಗಿಡಗಳ ಜೀವಿತಾವಧಿಯವರೆಗೆ ಅಥವಾ ಗಿಡಗಳನ್ನು ಕಟಾವು ಮಾಡುವವರೆಗೆ ಪ್ರೋತ್ಸಾಹ ಧನ ನೀಡುವ ಯೋಜನೆಯನ್ಮು ಮುಂದುವರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.