ADVERTISEMENT

ಮುಂಡರಗಿ: ಕಾಯಕಲ್ಪಕ್ಕೆ ಕಾದಿರುವ ಪ್ರವಾಸಿ ತಾಣಗಳು

ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಾಕೃತಿಕ ತಾಣಗಳಿಗೆ ಮೂಲಸೌಕರ್ಯಗಳ ಕೊರತೆ

ಕಾಶಿನಾಥ ಬಿಳಿಮಗ್ಗದ
Published 1 ಜುಲೈ 2024, 6:01 IST
Last Updated 1 ಜುಲೈ 2024, 6:01 IST
ಕಾಯಕಲ್ಪಕ್ಕೆ ಕಾದಿರುವ ಮುಂಡರಗಿ ತಾಲ್ಲೂಕಿನ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನ
ಕಾಯಕಲ್ಪಕ್ಕೆ ಕಾದಿರುವ ಮುಂಡರಗಿ ತಾಲ್ಲೂಕಿನ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನ   

ಮುಂಡರಗಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ನೈಸರ್ಗಿಕ, ಐತಿಹಾಸಿಕ ಹಾಗೂ ಪ್ರಾಚೀನ ಶಿಲ್ಪಕಲಾವೈಭವ ಒಳಗೊಂಡಿರುವ ಹಲವಾರು ಸುಂದರ ಪ್ರವಾಸಿ ತಾಣಗಳಿದ್ದು, ಅವು ಮೂಲಸೌಲಭ್ಯಗಳಿಂದ ವಂಚಿತಗೊಂಡಿವೆ. ಸೂಕ್ತ ವ್ಯವಸ್ಥೆಗಳಿಲ್ಲದ್ದರಿಂದ ಪ್ರವಾಸಿಗರು ಅತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ.

ಅದ್ಭುತ ಶಿಲ್ಪ ವೈಭವ, ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯ, ಅಪಾರ ಭಕ್ತ ಸಮೂಹ ಹೊಂದಿರುವ ಧಾರ್ಮಿಕ ಕ್ಷೇತ್ರಗಳು, ಚಾರಣಕ್ಕೆ ಹೇಳಿ ಮಾಡಿಸಿದ ಗುಡ್ಡ, ಬೆಟ್ಟಗಳು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸಾಕಷ್ಟಿವೆ. ಬಹುತೇಕ ಪ್ರವಾಸಿ ತಾಣಗಳಲ್ಲಿ ವಸತಿ, ಊಟ, ಉಪಾಹಾರ, ಸಾರಿಗೆ ವ್ಯವಸ್ಥೆ, ಗೈಡ್ ಸೇರಿದಂತೆ ಮೊದಲಾದ ವ್ಯವಸ್ಥೆಗಳು ಇಲ್ಲವಾದ್ದರಿಂದ ಅವು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 33 ಸಾವಿರ ಹೆಕ್ಟೇರ್‌ ವ್ಯಾಪ್ತಿಯಲ್ಲಿ ಕಪ್ಪತ್ತಗುಡ್ಡ ವ್ಯಾಪಿಸಿದೆ. ಅಪರೂಪದ ಔಷಧೀಯ ಸಸ್ಯಗಳು, ವನ್ಯಜೀವಿ ಸಮೂಹ, ಹಲವು ಜಲಮೂಲಗಳಿಂದ ಕಪ್ಪತ್ತಗುಡ್ಡ ಆವೃತ್ತವಾಗಿದೆ. ಪರಿಶುದ್ಧ ಗಾಳಿ ಬೀಸುವ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಎಲ್ಲ ಕಾರಣಗಳಿಂದ ಕಪ್ಪತ್ತಗಿರಿಯನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲಾಗುತ್ತದೆ.

ADVERTISEMENT

‘ಎಪ್ಪತ್ತು ಗಿರಿ ಸುತ್ತುವುದಕ್ಕಿಂತ ಕಪ್ಪತ್ತಗಿರಿ ಸುತ್ತುವುದು ಮೇಲು’, ‘ಕಣ್ಣಿದ್ದವನು ಕನಕಗಿರಿ ನೋಡಬೇಕು, ಕಾಲಿದ್ದವನು ಕಪ್ಪತ್ತಗುಡ್ಡ ನೋಡಬೇಕು’ ಎನ್ನುವ ಹಲವಾರು ನುಡಿಗಟ್ಟುಗಳು ಉತ್ತರ ಕರ್ನಾಟಕದಾದ್ಯಂತ ಮನೆ ಮಾತಾಗಿವೆ.

ಇಷ್ಟೆಲ್ಲ ವೈಶಿಷ್ಟ್ಯತೆ ಒಳಗೊಂಡಿದ್ದರೂ ಕಪ್ಪತ್ತಗುಡ್ಡದಲ್ಲಿ ಮೂಲಸೌಲಭ್ಯಗಳಿಲ್ಲವಾದ್ದರಿಂದ ಅದು ನಾಡಿನ ಇತರೆ ಗಿರಿಧಾಮಗಳಂತೆ ಜನಾಕರ್ಷಕವಾಗಿಲ್ಲ. ಗುಡ್ಡದಲ್ಲಿ ರೋಪ್ ವೇ, ಜಿಪ್ ಲೈನ್, ತೂಗು ಸೇತುವೆ, ಸಫಾರಿ ಮೊದಲಾದವುಗಳನ್ನು ನಿರ್ಮಿಸಿ ಗುಡ್ಡವನ್ನು ಜನಾಕರ್ಷಣೀಯಗೊಳಿಸಲು ಸಾಧ್ಯವಿದೆ. ಈ ಕುರಿತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟಿಲರ ಸೂಚನೆಯಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಅದು ತಕ್ಷಣಕ್ಕೆ ಅನುಷ್ಠಾನಗೊಳ್ಳಬೇಕಿದೆ.

ಕಪ್ಪತ್ತಗುಡ್ಡದ ಮಡಿಲಿನಲ್ಲಿ ಹಲವಾರು ತೀರ್ಥಕ್ಷೇತ್ರಗಳಿವೆ. ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನವನ್ನು ಹೊರತುಪಡಿಸಿ ಬಹುತೇಕ ಎಲ್ಲ ತೀರ್ಥಕ್ಷೇತ್ರಗಳು ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ತಾಲ್ಲೂಕಿನ ಡೋಣಿ ಗ್ರಾಮದ ಬಳಿ ಇರುವ ಕಪ್ಪತ್ತಮಲ್ಲಿಕಾರ್ಜುನ ದೇವಸ್ಥಾನವು ಕಪ್ಪತ್ತಗಿರಿ ಸಾಲಿನ ಕೇಂದ್ರಬಿಂದುವಾಗಿದ್ದು, ಅಲ್ಲಿಗೆ ತೆರಳಲು ಸೂಕ್ತ ರಸ್ತೆ, ವಾಹನ ವ್ಯವಸ್ಥೆ, ವಸತಿ ಸೌಲಭ್ಯ, ಊಟ, ಉಪಾಹಾರ ಮೊದಲಾದವುಗಳು ಇಲ್ಲವಾದ್ದರಿಂದ ಪ್ರವಾಸಿಗರು ಅಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಕಪ್ಪತ್ತಗುಡ್ಡದ ಮಡಿಲಿನಲ್ಲಿ ನಂದಿವೇರಿ ಮಠವಿದ್ದು, ಶಿವಕುಮಾರ ಸ್ವಾಮೀಜಿ ಮಠದ ಪೀಠಾಧಿಪತಿಯಾಗಿದ್ದಾರೆ. ಹಲವು ದಶಕಗಳಿಂದ ಅರಣ್ಯ ರಕ್ಷಣೆಯಲ್ಲಿ ನಂದಿವೇರಿ ಶ್ರೀಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತಲಿದ್ದಾರೆ. ಕಪ್ಪತ್ತಗುಡ್ಡದಲ್ಲಿ ಹಸಿರು ಹೆಚ್ಚಾಗಲು ನಂದಿವೇರಿ ಮಠದ ಪಾತ್ರವೂ ಸಾಕಷ್ಟಿದೆ. ಆದರೆ, ಅಲ್ಲಿ ಮೂಲ ಸೌಲಭ್ಯಗಳಿಲ್ಲವಾದ್ದರಿಂದ ಪ್ರವಾಸಿಗರಿಂದ ದೂರವಿದೆ. ನಂದಿವೇರಿ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಗದುಗಿನಲ್ಲಿ ವಾಸ್ತವ್ಯ ಹೂಡಿದ್ದು ಆಗಾಗ ನಂದಿವೇರಿ ಮಠಕ್ಕೆ ಹೋಗಿಬರುತ್ತಾರೆ.

ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಪ್ರಾಚೀನ ದೊಡ್ಡಬಸವೇಶ್ವರ ಹಾಗೂ ಸೋಮೇಶ್ವರ ದೇವಸ್ಥಾನಗಳಿದ್ದು, ಪುತಾತತ್ವ ಇಲಾಖೆ ಅಡಿಯಲ್ಲಿ ಅವುಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ.

ಕಪ್ಪತ್ತಗಿರಿ ಸಾಲಿನಲ್ಲಿ ಸಂಜೀವಿನಿ ಹನುಮಪ್ಪ, ಮಜ್ಜಿಗೇರಿ ಬಸವಣ್ಣ (ಮಜ್ಜಿಗೆ ಕೆರೆ ಬಸವಣ್ಣ), ಸತ್ಯಮ್ಮ, ಮೊದಲಾದ ಹಲವಾರು ದೇವಾಲಯಗಳಿವೆ. ಅಲ್ಲಿಗೆ ತೆರಳಲು ವಾಹನ ವ್ಯವಸ್ಥೆ ಇಲ್ಲವಾದ ಕಾರಣ ಬಹುತೇಕ ಯಾತ್ರಾರ್ಥಿಗಳಿಗೆ ಅವು ಅಪರಿಚಿತವಾಗಿವೆ. ಮುಂಡರಗಿ ಕನಕಪ್ಪನಗುಡ್ಡ ಹಾಗೂ ಗುಡ್ಡದ ಮೇಲಿರುವ ಕಲ್ಲಿನ ಕೋಟೆ ಮೊದಲಾದವುಗಳಿಗೆ ಮೂಲಸೌಕರ್ಯ ಒದಗಿಸಿದರೆ ಅವೆಲ್ಲವೂ ತಾಲ್ಲೂಕಿನ ಸುಂದರ ಪ್ರವಾಸಿ ತಾಣಗಳಾಗಲಿವೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮುಂಡರಗಿ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಅದ್ಭುತ ಶಿಲ್ಪಕಲಾ ವೈಭವ ಹೊಂದಿರುವ ಗೋಣಿಬಸವೇಶ್ವರ ದೇವಸ್ಥಾನ
ಮುಂಡರಗಿ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಗೋಣಿಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಸದಾ ಶುದ್ಧವಾದ ನೀರಿನಿಂದ ತುಂಬಿರುವ ಸುಂದರ ಕಲ್ಯಾಣಿ
ಶಿಂಗಟಾಲೂರ ದೇವಸ್ಥಾನ ಅಭಿವೃದ್ಧಿಗೆ ಸಚಿವ ಎಚ್.ಕೆ.ಪಾಟೀಲರು ಈಚೆಗೆ ₹1 ಕೋಟಿ ಅನುದಾನ ನೀಡಿದ್ದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅದೇರೀತಿ ಕಾಲಕಾಲಕ್ಕೆ ಇಲ್ಲಿಯ ಶಾಸಕರು ಸಂಸದರು ಸ್ಥಳೀಯ ಆಡಳಿತ ಮಂಡಳಿಗಳು ಅನುದಾನ ನೀಡಿವೆ.
ಕೆ.ವಿ.ಹಂಚಿನಾಳ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಶಿಂಗಟಾಲೂರ
ಕಪ್ಪತ್ತಗುಡ್ಡದಲ್ಲಿ ರೋಪ್ ವೇ ಸೇರಿದಂತೆ ವಿವಿಧ ಜನಾಕರ್ಷಣೀಯ ಯೋಜನೆಗಳನ್ನು ರೂಪಿಸುವ ಕುರಿತಂತೆ ಪ್ರವಾಸೋದ್ಯಮ ಇಲಾಖೆಯು ಸಮೀಕ್ಷೆ ಮಾಡಿಕೊಂಡು ಹೋಗಿದೆ. ಅರಣ್ಯ ಇಲಾಖೆಯು ಈ ಕುರಿತು ಸಮಗ್ರ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದೆ
ವೀರೇಂದ್ರ ಮರಿಬಸಣ್ಣವರ ಆರ್‌ಎಫ್‌ಒ ಮುಂಡರಗಿ
ಗೋಣಿಬಸವೇಶ್ವರ ದೇವಸ್ಥಾನವು ನೀರಾವರಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿದ್ದು ಅದನ್ಮು ಯಥಾರೀತಿ ಸ್ಥಳಾಂತರಿಸಬೇಕು ಅಥವಾ ಅದಕ್ಕೆ ಬೃಹತ್ ತಡೆಗೋಡೆ ನಿರ್ಮಿಸಿ ದೇವಸ್ಥಾನವನ್ನು ಸಂರಕ್ಷಿಸಬೇಕು
ಹನುಮಂತ ಬೆಂಡಿಕಾಯಿ ಗುಮ್ಮಗೋಳ ಗ್ರಾಮಸ್ಥ
ಸ್ವಾತಂತ್ರ್ಯ ಹೋರಾಟಗಾರ ಮಂಡಗೈ ಭೀಮರಾಯರ ವಂಶಜರು ಕನಕಪ್ಪನ ಗುಡ್ಡದ ಮೇಲೆ ನಿರ್ಮಿಸಿರುವ ಕಲ್ಲಿನ ಕೋಟೆಯು ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕು
ವಿ.ಎಲ್.ನಾಡಗೌಡ ಭೀಮರಾಯ ವಂಶಜರು ಮುಂಡರಗಿ
ಮುಳಗಡೆ ಭೀತಿಯಲ್ಲಿರುವ ದೇವಸ್ಥಾನಗಳು
ತಾಲ್ಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಪ್ರಾಚೀನ ಹಾಗೂ ಅದ್ಭುತ ಶಿಲ್ಪಕಲಾ ವೈಭವ ಒಳಗೊಂಡಿರುವ ಗೋಣಿಬಸವೇಶ್ವರ ದೇವಸ್ಥಾನವಿದೆ. ಬೃಹತ್ ಕಲ್ಲಿನ ಗೋಪುರ ದೇವಸ್ಥಾನದ ಪ್ರಾಂಗಣದಲ್ಲಿ ಶುದ್ಧವಾದ ನೀರಿನಿಂದ ತುಂಬಿರುವ ಕಲ್ಯಾಣಿ ಸುಂದರ ಕೆತ್ತನೆ ಮೊದಲಾದವುಗಳನ್ನು ದೇವಸ್ಥಾನ ಹೊಂದಿದೆ. ಆದರೆ ಅಲ್ಲಿಯೂ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಲಿದೆ. ಜೊತೆಗೆ ಅದಕ್ಕೆ ದೊರೆಯಬೇಕಾದ ಪ್ರಚಾರ ದೊರೆಯದೇ ಇರುವ ಕಾರಣ ಅದು ನಾಡಿನ ಜನತೆಗೆ ಅಪರಿಚಿತವಾಗಿದೆ. ಅದೇರೀತಿ ತಾಲ್ಲೂಕಿನ ಬಿದರಳ್ಳಿ ಗ್ರಾಮದ ಪ್ರಾಚೀನ ಕಾಲದ ಸೋಮೇಶ್ವರ ದೇವಸ್ಥಾನ ರೇಣುಕಾಂಬಾ ದೇವಸ್ಥಾನಗಳು ವಿಠಲಾಪುರ ಗ್ರಾಮದಲ್ಲಿರುವ ಪ್ರಾಚೀನ ರಸಲಿಂಗ ದೇವಸ್ಥಾನಗಳು ಆಕರ್ಷಕವಾಗಿದ್ದು ಅಲ್ಲಿಯೂ ಮೂಲಸೌಲಭ್ಯಗಳಿಲ್ಲ. ಜತೆಗೆ ಈ ಎಲ್ಲ ದೇವಸ್ಥಾನಗಳು ಶಿಂಗಟಾಲೂರ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿವೆ.
ಮಾನವ ಹಸ್ತಕ್ಷೇಪ ಬೇಡ
ಕಪ್ಪತ್ತಗುಡ್ಡವು ಉತ್ತರ ಕರ್ನಾಟಕದ ಸಹ್ಯಾದ್ರಿಯಾಗಿದ್ದು ಅದನ್ನು ಯಥಾರೀತಿ ಮುಂದಿನ ತಲೆಮಾರಿಗೆ ಒಪ್ಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುತ್ತಾರೆ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ. ಕಪ್ಪತ್ತಗುಡ್ಡವು ಪ್ರವಾಸಿತಾಣ ವ್ಯಾಪ್ತಿಗೆ ಒಳಪಟ್ಟರೆ ಅದು ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯಕ್ಕೆ ರಹದಾರಿ ಮಾಡಿಕೊಟ್ಟಂತಾಗುತ್ತದೆ. ಪರಿಸರ ಸೂಕ್ಷ್ಮ ವಲಯಗಳು ಮಾನವನ ಹಸ್ತಕ್ಷೇಪದಿಂದ ದೂರವಿದ್ದಷ್ಟು ಒಳಿತು. ಕಪ್ಪತ್ತಗುಡ್ಡವನ್ನು ಪ್ರವಾಸಿತಾಣವನ್ನಾಗಿ ಮಾಡಿದರೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಪ್ಲಾಸ್ಟಿಕ್ ಹಾಗೂ ಮತ್ತಿತರ ವಸ್ತುಗಳ ಬಳಕೆ ಹೆಚ್ಚಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಹಾಗೂ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಕಪ್ಪತ್ತಗುಡ್ಡವನ್ನು ಯಥಾರೀತಿ ಕಾಯ್ದುಕೊಳ್ಳಬೇಕು ಎನ್ನುತ್ತಾರೆ ಅವರು.
ಪ್ರವಾಸಿಗರ ನೆಚ್ಚಿನ ತಾಣ
ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಬಳಿ ಕಪ್ಪತ್ತಗುಡ್ಡದ ಗಿರಿಸಾಲಿನಲ್ಲಿ ಸುಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನವಿದ್ದು ದೇವಸ್ಥಾನ ಟ್ರಸ್ಟ್‌ ಕಮಿಟಿ ಉಸ್ತುವಾರಿ ನೋಡಿಕೊಳ್ಳುತ್ತಲಿದೆ. ಸರ್ಕಾರ ಹಾಗೂ ಭಕ್ತಾದಿಗಳ ನೆರವಿನಿಂದ ಯಾತ್ರಾರ್ಥಿಗಳಿಗೆ ನಿತ್ಯ ಉಚಿತ ಪ್ರಸಾದ ವಿತರಣೆ ವಸತಿ ವ್ಯವಸ್ಥೆ ದೂರದ ಪಟ್ಟಣಗಳಿಂದ ವಾಹನ ಸೌಲಭ್ಯ ಹೋಟೆಲ್ ಸ್ನಾನಘಟ್ಟ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಹೀಗಾಗಿ ನಿತ್ಯ ಇಲ್ಲಿಗೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈಚೆಗೆ ದೇವಸ್ಥಾನದ ಮುಂಭಾಗದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲಾಗಿದ್ದು ಅಲ್ಲಿ ಸಿಮೆಂಟ್‌ನಿಂದ ನಿರ್ಮಿಸಿರುವ ವಿವಿಧ ಪೌರಾಣಿಕ ಐತಿಹಾಸಿಕ ಮಹತ್ವ ಸಾರುವ ಸಂಗತಿಗಳನ್ನು ಗೊಂಬೆ ರೂಪದಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಮುಂದೆ ತುಂಗಭದ್ರಾ ನದಿ ಹರಿಯುತ್ತಿದ್ದು ನದಿ ಮಧ್ಯದಲ್ಲಿರುವ ನಡುಗಡ್ಡೆಯಲ್ಲಿ ನವಿಲುಧಾಮ ಹಾಗೂ ಮೊಸಳೆ ಪಾರ್ಕ್ ತೂಗು ಸೇತುವೆ ನಿರ್ಮಿಸುವ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅವುಗಳನ್ನು ನಿರ್ಮಿಸಿಕೊಡಬೇಕು ಎಂದು ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕೆ.ವಿ.ಹಂಚಿನಾಳ ಅವರು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲರಲ್ಲಿ ಈಚೆಗೆ ಮನವಿ ಮಾಡಿಕೊಂಡಿದ್ದರು. ತಕ್ಷಣ ಸ್ಪಂದಿಸಿದ ಎಚ್.ಕೆ.ಪಾಟೀಲರು ದೇವಸ್ಥಾನದ ಅಭಿವೃದ್ಧಿಗೆ ₹1 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.