ADVERTISEMENT

ದುರಸ್ತಿಗೆ ಕಾದಿರುವ ಮುಂಡರಗಿ ರಸ್ತೆಗಳು

ಕಾಶಿನಾಥ ಬಿಳಿಮಗ್ಗದ
Published 22 ಆಗಸ್ಟ್ 2024, 4:42 IST
Last Updated 22 ಆಗಸ್ಟ್ 2024, 4:42 IST
ಹಲವು ದಶಕಗಳಿಂದ ದುರಸ್ತಿ ಕಾಣದೆ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಮುಂಡರಗಿ ತಾಲ್ಲೂಕಿನ ಹಮ್ಮಿಗಿ–ಗುಮ್ಮಗೋಳ ಮುಖ್ಯ ರಸ್ತೆ
ಹಲವು ದಶಕಗಳಿಂದ ದುರಸ್ತಿ ಕಾಣದೆ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಮುಂಡರಗಿ ತಾಲ್ಲೂಕಿನ ಹಮ್ಮಿಗಿ–ಗುಮ್ಮಗೋಳ ಮುಖ್ಯ ರಸ್ತೆ   

ಮುಂಡರಗಿ: ತಾಲ್ಲೂಕಿನ ಪ್ರಮುಖ ಭಾಗಗಳು ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ನಿರ್ವಹಣೆ ಹಾಗೂ ದುರಸ್ತಿ ಇಲ್ಲದೇ ಭಾಗಶಃ ಹಾಳಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.

ದಶಕಗಳಿಂದ ದುರಸ್ತಿ ಕಾಣದಿರುವ ತಾಲ್ಲೂಕಿನ ಕೆಲವು ರಸ್ತೆಗಳು ಈಗಲೂ ಹದಗೆಟ್ಟ ಸ್ಥಿತಿಯಲ್ಲಿವೆ. ಆ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲವು ರಸ್ತೆಗಳು ಕಾಟಾಚಾರಕ್ಕಷ್ಟೇ ದುರಸ್ತಿಗೊಳ್ಳುತ್ತಿದ್ದು, ಸ್ವಲ್ಪ ದಿನಗಳಲ್ಲಿಯೇ ಹದಗೆಟ್ಟು ಹೋಗಿ, ಸವಾರರನ್ನು ಹೈರಾಣಾಗಿಸುತ್ತಿವೆ.

‘ತಾಲ್ಲೂಕಿನ ಹಮ್ಮಿಗಿ, ಹಳೆಗುಮ್ಮಗೋಳ, ಹೊಸಗುಮ್ಮಗೋಳ, ಜಾಲವಾಡಿಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಳಾಗಿ ದಶಕಗಳೇ ಕಳೆದಿವೆ. ಪ್ರತಿ ವರ್ಷ ಮುಂಗಾರಿನಲ್ಲಿ ರಸ್ತೆಯು ತುಂಗಭದ್ರಾ ನದಿಯ ಹಿನ್ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗುತ್ತದೆ. ಈ ಸಂದರ್ಭದಲ್ಲಿ ಜನರು ಸಂಚರಿಸದ ಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ವರ್ಷ ಜಲಾವೃತವಾದ ರಸ್ತೆಯನ್ನು ದಾಟುವ ಸಂದರ್ಭದಲ್ಲಿ ರೈತರೊಬ್ಬರ ಟ್ರ್ಯಾಕ್ಟರ್ ರಸ್ತೆಯ ಬದಿ ಮುಗುಚಿ ಬಿದ್ದು, ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೊಬ್ಬರ ಹಾಗೂ ಮತ್ತಿತರ ಕೃಷಿ ಸಾಮಾನುಗಳು ನೀರುಪಾಲಾಗಿದ್ದವು. ಅಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿ ಮಾಡಿಸುವ ಭರವಸೆ ನೀಡಿದ್ದರು. ನಂತರ ಯಾರೊಬ್ಬರೂ ಅತ್ತ ಗಮನ ಹರಿಸಲಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ರಸ್ತೆಬದಿಯ ರೈತರೊಬ್ಬರು ತಕರಾರು ತೆಗೆದಿರುವುದರಿಂದ ಹಳೆಗುಮ್ಮಗೋಳ, ಹೊಸಗುಮ್ಮಗೋಳ ಹಾಗೂ ಜಾಲವಾಡಿಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ತಾಲ್ಲೂಕಿನ ವಿಠಲಾಪುರ- ಬಿದರಳ್ಳಿ, ಬಿದರಳ್ಳಿ-ಹಮ್ಮಿಗಿ ರಸ್ತೆಗಳು ಹಲವು ವರ್ಷಗಳಿಂದ ಹಾಳಾಗಿದ್ದು, ದುರಸ್ತಿ ಭಾಗ್ಯ ಕಂಡಿಲ್ಲ. ಬಿದರಳ್ಳಿ, ಹಮ್ಮಿಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆಗೆ ಕಾಂಕ್ರಿಟ್ ಅಥವಾ ಡಾಂಬರು ಹಾಕದಿರುವುದರಿಂದ ರಸ್ತೆ ಹಾಳಾಗಿದ್ದು, ರಸ್ತೆಯ ಮಧ್ಯದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಅಕ್ಕಪಕ್ಕದಲ್ಲಿ ಸೂಚನಾ ಫಲಕಗಳು ಹಾಗೂ ಮೈಲಿಗಲ್ಲುಗಳು ಇಲ್ಲವಾದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಸದಾ ಕೆಸರಿನಿಂದ ಆವೃತ್ತವಾಗಿರುವ ಮುಂಡರಗಿ ತಾಲ್ಲೂಕಿನ ಜಾಲವಾಡಿಗೆ ರಸ್ತೆ

ತಾಲ್ಲೂಕಿನ ಕಲಕೇರಿ- ಬೀಡನಾಳ ರಸ್ತೆಯು ಹಲವು ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹಾಳಾಗಿಹೋಗಿದೆ. ತಾಲ್ಲೂಕಿನ ಬೆಣ್ಣಿಹಳ್ಳಿಯಿಂದ ಜವಾಹರ ನವೋದಯ ಶಾಲೆ ಮಾರ್ಗವಾಗಿ ಬೀಡನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರು ಪದೇಪ‍ದೇ ಕಿತ್ತು ಹೋಗುತ್ತಲಿದ್ದು, ಅದನ್ನು ಪುನರ್ ನಿರ್ಮಿಸುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಲ್ಲೂಕಿನ ಡಂಬಳ ಹೋಬಳಿಯ ಬರದೂರು-ಹಳ್ಳಿಗುಡಿ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು, ರಸ್ತೆಗೆ ಹಾಕಲಾಗಿದ್ದ ಡಾಂಬರು ಕಿತ್ತುಹೋಗಿದೆ. ರಸ್ತೆ ಮಧ್ಯದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದೇರೀತಿ ತಾಲ್ಲೂಕಿನ ಪೇಠಾಲೂರ-ಹಳ್ಳಿಗುಡಿ ರಸ್ತೆಯು ಹಲವು ವರ್ಷಗಳಿಂದ ದುರಸ್ತಿಗೆ ಕಾದಿದೆ.

ಸಂಬಂಧಪಟ್ಟ ಇಲಾಖೆಯವರು ರಸ್ತೆಗಳನ್ನು ಕಾಟಾಚಾರಕ್ಕೆ ದುರಸ್ತಿ ಮಾಡುವುದನ್ನು ಬಿಟ್ಟು ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಾಲ್ಲೂಕಿನ ಜನರು ಆಗ್ರಹಿಸಿದ್ದಾರೆ.

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮುಂಡರಗಿ ತಾಲ್ಲೂಕಿನ ಬೆಣ್ಣಿಹಳ್ಳಿ–ಬೀಡನಾಳ ರಸ್ತೆ
ರಸ್ತೆ ಅವಸ್ಥೆ
ಅಭಿವೃದ್ಧಿ ಕಾರ್ಯಗಳಿಗೆ ನಿರೀಕ್ಷಿತ ಪ್ರಮಾಣದ ಅನುದಾನ ದೊರೆಯುತ್ತಿಲ್ಲ. ಎಸ್‌ಎಸ್‌ಡಿಪಿ ಯೋಜನೆ ಅಡಿ ತಾಲ್ಲೂಕಿನ ಜಾಲವಾಡಿಗಿ ರಸ್ತೆ ಅಭಿವೃದ್ಧಿಗೆ ₹1 ಕೋಟಿ ಮೀಸಲಿಡಲಾಗಿದೆ. ಕಲಕೇರಿ-ಬೀಡನಾಳ ರಸ್ತೆ ಸೇರಿದಂತೆ ತಾಲ್ಲೂಕಿನ ಎಲ್ಲ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು
ಡಾ.ಚಂದ್ರು ಲಮಾಣಿ ಶಾಸಕ
ಸೇತುವೆ ನಿರ್ಮಾಣಕ್ಕೆ ಆಗ್ರಹ
ಮುಂಡರಗಿ ತಾಲ್ಲೂಕಿನ ನಾಗರಹಳ್ಳಿ-ಬೆಣ್ಣಿಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಹಳ್ಳವೊಂದು ಹರಿಯುತ್ತಿದೆ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುತ್ತದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಳ್ಳ ತುಂಬಿ ಹರಿಯುವಾಗ ವಿದ್ಯಾರ್ಥಿಗಳು ತರಗತಿಯಿಂದ ವಂಚಿತರಾಗಬೇಕಾಗುತ್ತದೆ. ಕಿರು ಸೇತುವೆ ನಿರ್ಮಿಸಬೇಕು ಎಂದು ಎರಡೂ ಗ್ರಾಮಗಳ ಜನರು ಹಲವು ವರ್ಷಗಳಿಂದ ಒತ್ತಾಯಿಸುತ್ತ ಬಂದಿದ್ದರೂ ಬೇಡಿಕೆ ಈಡೇರಿಲ್ಲ. ಎರಡು ವರ್ಷಗಳ ಹಿಂದೆ ಹಳ್ಳ ದಾಟುವಾಗ ವ್ಯಕ್ತಿಯೊಬ್ಬರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಎರಡೂ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮುಂಡರಗಿಗೆ ಸಂಪರ್ಕ ಕಲ್ಪಿಸುವ ಅರಬಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಅಂದಿನ ಶಾಸಕ ರಾಮಣ್ಣ ಲಮಾಣಿ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಸೇತುವೆ ನಿರ್ಮಾಣವಾಗದಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.