ಗದಗ: ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಮಂಗಳವಾರ ಸಂಜೆ 6ಕ್ಕೆ ನಗರದ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ‘ಭೀಮಪಲಾಸ ಸಂಗೀತೋತ್ಸವ’ ನಡೆಯಲಿದೆ.
ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ‘ಭೀಮಪಲಾಸ’ ಸಂಗೀತೋತ್ಸವ ರಾಜ್ಯದಾದ್ಯಂತ ವರ್ಷಪೂರ್ತಿ ನಡೆಯಲಿದೆ. ಕೇಂದ್ರ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಷನ್, ಭಾರತೀಯ ಜೀವ ವಿಮಾ ನಿಗಮ, ಎಲ್‌ಐಸಿಯ ಹೌಸಿಂಗ್ ಫೈನಾನ್ಸ್ ಸಹಪ್ರಾಯೋಜಕತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗದುಗಿನಲ್ಲಿ ನಡೆಯುವ ‘ಭೀಮಪಲಾಸ ಸಂಗೀತೋತ್ಸವ’ದಲ್ಲಿ ಸಂಗೀತ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಗಾನಸುಧೆ ಹರಿಯಲಿದೆ. ಇವರಿಗೆ ಪಂ. ರಾಜೇಂದ್ರ ನಾಕೋಡ ತಬಲಾ ಹಾಗೂ ಸತೀಶ ಕೊಳ್ಳಿ ಹಾರ್ಮೋನಿಯಂನಲ್ಲಿ ಸಾಥಿ ನೀಡಲಿದ್ದಾರೆ. ಧಾರವಾಡದ ವಿವಿಡ್‌ಲಿಪಿ ಸಂಸ್ಥೆಯು ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದೆ.
ಅವಿಭಜಿತ ಧಾರವಾಡ ಜಿಲ್ಲೆಯ ಸಂಗೀತಾ ಕಟ್ಟಿ ಅವರು ದೇಶಕಂಡ ಪ್ರತಿಭಾವಂತ ಗಾಯಕಿಯರಲ್ಲಿ ಒಬ್ಬರು. ಸಂಗೀತದ ಹಿನ್ನೆಲೆಯುಳ್ಳ ಮನೆತನದ ಸಂಗೀತಾ ಕಟ್ಟಿಯವರು ಚಿಕ್ಕ ವಯಸ್ಸಿನಲ್ಲೇ ವೇದಿಕೆ ಏರಿ ಸೈ ಎನಿಸಿಕೊಂಡ ಪ್ರತಿಭಾನ್ವಿತೆ. ಸಂಗೀತಲೋಕದ ದಿಗ್ಗಜ ನೌಷಾದ್ ಅಲಿ ಅವರು ಸಂಗೀತಾ ಕಟ್ಟಿ ಅವರ ಪ್ರತಿಭೆಯನ್ನು ನೋಡಿ ತಮ್ಮ ಶಿಷ್ಯೆಯನ್ನಾಗಿ ಸ್ವೀಕರಿಸಿದರು. ಪಂ. ಚಂದ್ರಶೇಖರ ಪುರಾಣಿಕಮಠ ಹಾಗೂ ಪಂ. ಶೇಷಗಿರಿ ದಂಡಾಪೂರ ಅವರಿಂದ ಆರಂಭಿಕ ಹಂತದ ಸಂಗೀತಾಧ್ಯಯನ ಮಾಡಿದ ಇವರು, ನಂತರ ಗಾನಮಾಂತ್ರಿಕ ಪಂ. ಬಸವರಾಜ ರಾಜಗುರುಗಳಲ್ಲಿ 12 ವರ್ಷಗಳ ಕಾಲ ಆಳವಾದ ಮಾರ್ಗದರ್ಶನ ಪಡೆದು ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.